- ನಮ್ಮೂರ ದೇವಳದ ಬ್ರಹ್ಮಕಲಶಕ್ಕೆ ನಮ್ಮದೇ ಮಣ್ಣಿನ ತರಕಾರಿ ಬಳಕೆಗೆ ಹೊರಟ ಪುತ್ತಿಗೆಯ ಕೃಷಿಕರು
- ಪುತ್ತಿಗೆ ದೇಲಂಪಾಡಿ ದೇವಳ ಬ್ರಹ್ಮಕಲಶಕ್ಕೆ ಸಂಪೂರ್ಣ ವಿಷಮುಕ್ತ ಸಾವಯವ ತರಕಾರಿ ಬಳಕೆ : ಬೀಜ ಬಿತ್ತನೆ ಆರಂಭ
ಪುತ್ತಿಗೆ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಾವಯವ ತರಕಾರಿಗಳನ್ನು ಪ್ರಾದೇಶಿಕ ಹೊಲಗಳಲ್ಲೇ ಬೆಳೆಸಿ ಬಳಸುವ ಸ್ವಾವಲಂಬಿ ಯೋಜನೆಗೆ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಸ್ಥಳೀಯರು ಹೆಜ್ಜೆ ಇಟ್ಟಿದ್ದಾರೆ.
“ನಮ್ಮೂರ ದೇವರ ಬ್ರಹ್ಮಕಲಶೋತ್ಸವಕ್ಕೆ ನಮ್ಮದೇ ಮಣ್ಣಿನ ವಿಷಮುಕ್ತ ತಾಜಾ ತರಕಾರಿ” ಎಂಬ ಧ್ಯೇಯದೊಂದಿಗೆ ಪುತ್ತಿಗೆ ಪಂಚಾಯತಿನ ಹಡೀಲು ಬಿದ್ದ ಗದ್ದೆಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ.
ಯೋಜನೆಗೆ ಇಂದು(ಫೆ.3) ಚಾಲನೆಯಾಗಿದ್ದು, ದೇವಳದ ಭಕ್ತರಾದ ಕೃಷಿಕರು ತರಕಾರಿ ಕೃಷಿಯನ್ನು ಉತ್ಸಾಹದಿಂದ ಮಾಡಲು ಮುಂದಾಗಿದ್ದಿರೆ. ಸಾವಯವ ಕೃಷಿ ಯೋಜನೆಯನ್ನು ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸಿ “ಬ್ರಹ್ಮಕಲಶೋತ್ಸವದಂತಹ ಬೃಹತ್ ಕಾರ್ಯಕ್ರಮಕ್ಕೆ ಪೇಟೆಯ ವಿಷಯುಕ್ತ ತರಕಾರಿ ಖರೀದಿಸುವ ಬದಲು , ನಮ್ಮೂರ ಬ್ರಹ್ಮಕಲಶಕ್ಕೆ ನಮ್ಮದೇ ನಾಡಿನಲ್ಲಿ ನಾವೇ ಬೆಳೆಸಿದ ಸಾವಯವ ತರಕಾರಿ ಬಳಸುವುದು ಆದರ್ಶಯುತ ಹೆಜ್ಜೆ. ಇದು ನಮ್ಮದೇ ನೆಲವನ್ನು ನಮಗಾಗಿ ನಾವೇ ಸಾವಯವ ತರಕಾರಿ ಬೆಳೆಸಲು ಪ್ರೇರಣೆ ನೀಡುವಂತದ್ದು. ನಾವು ಸಾಧ್ಯವಾದಷ್ಟು ಸ್ವಾವಲಂಬಿಗಳಾಗಲು ಪ್ರಚೋದನೆ ನೀಡುವಂತದ್ದು. ಈ ಯೋಜನೆಗೆ ಪಂಚಾಯತ್ ಕೃಷಿ ಭವನದಿಂದ ಪೂರ್ಣ ಸಹಾಯ, ಮಾರ್ಗದರ್ಶನ ದೊರೆಯಲಿದೆ ಎಂದವರು ಘೋಷಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಿ.ದಾಮೋದರ ಅಧ್ಯಕ್ಷತೆ ವಹಿಸಿದರು. ಗ್ರಾ ಪಂ.ಕೃಷಿ ಅಧಿಕಾರಿ ದಿನೇಶ್ ಪೆರುಂಬಳ, ಶಂಕರ ರೈ ಮಾಸ್ತರ್, ರಾಧಾಕೃಷ್ಣ ರೈ , ಗ್ರಾ ಪಂ.ಸದಸ್ಯರಾದ ಪಾಲಾಕ್ಷ ರೈ, ಪ್ರೇಮಾ ರೈ, ಕೇಶವ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ನಾಡಿನ ಭತರಾದ ಕೃಷಿಕರು ಪಾಲ್ಗೊಂಡು ಬಿತ್ತನೆ ಆರಂಭಿಸಿದರು. ದೇವಳದ ಸುತ್ತುಮುತ್ತಲಿನ ಅಂಗಡಿಮೊಗರು, ದೇಲಂಪಾಡಿ, ಮಂಟಪಾಡಿ, ಅಮಿನೆ, ಕೋರಿಕ್ಕಾರ್ ಮೊದಲಾದ ಕಡೆಯ ಗದ್ದೆಗಳನ್ನು ಇದಕ್ಕಾಗಿ ಬಳಸಲು ತೀರ್ಮಾನಿಸಲಾಗಿದೆ. ಅಲಸಂಡೆ, ಕುಂಬಳಕಾಯಿ, ಚೀನಿಕಾಯಿ ಮೊದಲಾದ ತರಕಾರಿಗಳನ್ನು ಇಲ್ಲಿ ಬೆಳೆಸಲು, ಕೃಷಿ ಭವನ ಬೀಜಗಳನ್ನೊದಗಿಸಿ ಮಾರ್ಗದರ್ಶನ ನೀಡಲಿದೆ.
ಮುಂಬರುವ ಮೇ 6ರಿಂದ 12ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ.