ದೇಶದಲ್ಲೇ ಕೀರ್ತಿಪಡೆದ, ಮತೀಯ ಸಾಮರಸ್ಯದ ಪಾರೆಸ್ಥಾನದ ಘನತೆ, ಗೌರವಗಳನ್ನು ಶ್ರದ್ಧಾಭಕ್ತಿಯಿಂದ ಕಾಪಾಡಬೇಕು : ಮಾಣಿಲ ಮೋಹನದಾಸ ಸ್ವಾಮೀಜಿ ಕರೆ

ಭಕ್ತ ಜನರ ಪ್ರಾರ್ಥನೆಯೊಂದಿಗೆ ಕುಂಬಳೆ ಆರಿಕ್ಕಾಡಿ ಭಗವತಿ ಆಲಿಚಾಮುಂಡಿ ಕ್ಷೇತ್ರದ ಭಂಡಾರಮನೆಯ ಪ್ರುನರ್ ಪ್ರತಿಷ್ಠೆ

by Narayan Chambaltimar
  • ದೇಶದಲ್ಲೇ ಕೀರ್ತಿಪಡೆದ, ಮತೀಯ ಸಾಮರಸ್ಯದ ಪಾರೆಸ್ಥಾನದ ಘನತೆ, ಗೌರವಗಳನ್ನು ಶ್ರದ್ಧಾಭಕ್ತಿಯಿಂದ ಕಾಪಾಡಬೇಕು : ಮಾಣಿಲ ಮೋಹನದಾಸ ಸ್ವಾಮೀಜಿ ಕರೆ
  • ಭಕ್ತ ಜನರ ಪ್ರಾರ್ಥನೆಯೊಂದಿಗೆ ಕುಂಬಳೆ ಆರಿಕ್ಕಾಡಿ ಭಗವತಿ ಆಲಿಚಾಮುಂಡಿ ಕ್ಷೇತ್ರದ ಭಂಡಾರಮನೆಯ ಪ್ರುನರ್ ಪ್ರತಿಷ್ಠೆ

ಕುಂಬಳೆ: ಪ್ರಾಚೀನ ಕಾಲದಿಂದಲೇ ಸರ್ವ ಜನಾಂಗದವರಿಂದ ಆರಾಧಿಸಲ್ಪಡುತ್ತಾ, ಮತೀಯ ಮೈತ್ರಿ ಮತ್ತು ಸಾಮರಸ್ಯದ ಧಾರ್ಮಿಕ ತಾಣವಾಗಿ ದೇಶದಲ್ಲೇ ಖ್ಯಾತಿ ಪಡೆದ ಕುಂಬ್ಳೆ ಆರಿಕ್ಕಾಡಿ ಪಾರೆ ಶ್ರೀ ಆಲಿಚಾಮುಂಡಿ ಕ್ಷೇತ್ರದ ಕಾರಣಿಕ ಅತ್ಯಂತ ವಿಶಿಷ್ಟ ಮತ್ತು ಗೌರವದ್ದಾಗಿದೆ. ಅದಕ್ಕೆ ಕಳಂಕ ತಾರದೇ ಸರ್ವರೂ ಭಗವತಿಯ ಮಕ್ಕಳಾಗಿ ಮಾತೆಯ ಕ್ಷೇತ್ರವನ್ನು ಬೆಳಗಿಸಬೇಕು. ಹೀಗೊಂದು ವೈಶಿಷ್ಠ್ಯದ ಕಾರಣಿಕ ಕ್ಷೇತ್ರ ಅನ್ಯ ಇಲ್ಲ. ಆದ್ದರಿಂದ ಅದರ ಘನತೆ, ಪಾವಿತ್ರ್ಯ ನಾವೇ ಕಾಪಾಡಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಕುಂಬಳೆ ಆರಿಕ್ಕಾಡಿಯ ಪಾರೆ ಶ್ರೀ ಆಲಿಚಾಮುಂಡಿ ಕ್ಷೇತ್ರದ ಭಂಡಾರಸ್ಥಾನ ಪುನರ್ ಪ್ರತಿಷ್ಠೆ ಮತ್ತು ತೆಯ್ಯಂಕೆಟ್ಟು ಉತ್ಸವದಂಗವಾಗಿ ಫೆ.3ರಂದು ಬೆಳಿಗ್ಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನವಿತ್ತು “ಆಚಾರನುಷ್ಠಾನಗಳಲ್ಲಿ ಧಾರ್ಮಿಕ ಶ್ರದ್ಧೆ ಬೆಳೆಯಬೇಕು ಮತ್ತದರ,ಮಹತ್ವ ಹೊಸ ಪೀಳಿಗೆಗೆ ಅರಿವಾಗಬೇಕು. ಸಾಮರಸ್ಯ ಕೇವಲ ಮತಗಳ ನಡುವೆಯಷ್ಟೇ ಅಲ್ಲ ಎಲ್ಲರ ಹೃದಯದಲ್ಲೂ ಮೂಡಬೇಕು. ದೈವಾರಾಧನೆಯ ಮರೆಯಲ್ಲಿ ದುಷ್ಟ ಚಿಂತನೆ, ದೈವಸ್ಥಾನದ ಹೆಸರಲ್ಲಿ ಪಾಪಕರ್ಮ ಮಾಡಿದರೆ ಅಂತಹಾ ಪಾಪಗಳಿಗೆ ಪರಿಹಾರಗಳೇ ಇಲ್ಲ. ಆದ್ದರಿಂದ ದೈವ ಕಾಯಕಗಳಲ್ಲಿ ನಿರ್ಮೋಹದಿಂದ ಯಾವುದೇ ವ್ಯಾಮೋಹಗಳಿಲ್ಲದೇ ತೊಡಗಬೇಕು. ಆಗ ಭಗವದನುಗ್ರಹವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಂಡಾರಮನೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಮದಾಸ ಎ. ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಶಾಸಕ ಎ.ಕೆ.ಎಂ. ಅಶ್ರಫ್ ಭಾಗವಹಿಸಿ ಶತಮಾನಗಳ ಹಿಂದೆಯೇ ನಮ್ಮೂರಲ್ಲಿ ಮತೀಯ ಸಾಮರಸ್ಯ ಇತ್ತೆಂಬುದಕ್ಕೆ ಪಾರೆಸ್ಥಾನದ ಆಲಿದೈವವೇ ನಿದರ್ಶನವಾಗಿದೆ. ಈ ಸಾಮರಸ್ಯದ ಬಾಂಧವ್ಯ ಶಿಥಿಲವಾಗಲು ಬಿಡದೇ ಆಚಾರಗಳನ್ನು ಸಂರಕ್ಷಿಸಲು ಗಮನಹರಿಸಬೇಕು ಎಂದರು.

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ವೇ.ಮೂ. ಚಕ್ರಪಾಣಿ ದೇವ ಪೂಜಿತ್ತಾಯ ಆರಿಕ್ಕಾಡಿ, ಪುರೋಹಿತ ರತ್ನ ರಾಮಕೃಷ್ಣ ಆಚಾರ್ಯ ಕಾರ್ಲೆ, ಕುಂಬಳೆ ಗ್ರಾ.ಪಂ. ಅಧ್ಯಕ್ಷೆ ಯು ಪಿ.ತಾಹಿರಾ ಯೂಸುಫ್, ಗ್ರಾ.ಪಂ.ಸದಸ್ಯ ಬಿ.ಎ.ರಹ್ಮಾನ್ ಆರಿಕ್ಕಾಡಿ, ದೈವಜ್ಞ ತಲೋರ ದಿವಾಕರನ್ , ಬೆಂಗಳೂರು ತೀಯ ಸಮಾಜದ ಅಧ್ಯಕ್ಷ ಸುಕುಮಾರ ಎನ್, ಮಂಗಳೂರು ಮುಡಾ ಅಧ್ಯಕ್ಷ, ತೀಯ ಸಮಾಜ ಮುಂದಾಳು ಸದಾಶಿವ ಉಳ್ಳಾಲ, ಕನಿಲ ಭಗವತಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದ್ರು, ಕನಿಲ ಭಗವತಿ ಕ್ಷೇರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ, ಕಣಿಪುರ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಘುನಾಥ ಪೈ, ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವೊದಲಾದವರು ಶುಭಾಶಂಸನೆಗೈದರು. ಸಭೆಯಲ್ಲಿ ಪ್ರಮುಖರನ್ನು ಗುರುತಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

ಉದ್ಯಮಿ, ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಆಗಮಿಸಿ ಭಂಡಾರಮನೆಯ ಗೌರವ ಸನ್ಮಾನ ಪಡೆದು ಮರಳಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಕಾರ್ಲೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಮೋಹನನ್ ವಂದಿಸಿದರು.

ನೂತನವಾಗಿ ಪುನರ್ ನಿರ್ಮಿಸಿದ ಭಂಡಾರಮನೆಯನ್ನು 3ರಂದು ಮಧ್ಯಾಹ್ನ 1.38ರ ಬಳಿಕದ,ಮುಹೂರ್ತದಲ್ಲಿ ಗುರುಪೀಠ ಪ್ರತಿಷ್ಠೆ, ಕಲಶಾಭಿಷೇಕದೊಂದಿಗೆ ಭಂಡಾರಸ್ಥಾನ ಪ್ರತಿಷ್ಠೆ ನಡೆಸಿ ನೆರವೇರಿಸಲಾಯಿತು. ಬ್ರಹ್ಮಶ್ರೀ ನೀಲೇಶ್ವರಂ ಅರವತ್ತ್ ಪದ್ಮನಾಭ ತಂತ್ರಿಗಳ ಕರ್ಮಿಕತ್ವದಲ್ಲಿ ಕಾರ್ಯಕ್ರಮಗಳು ನಡೆದುವು.
ಜನವರಿ 31ರಂದು ಭಂಡಾರಮನೆ ಪುನರ್ ಪ್ರತಿಷ್ಠೆ ಕಾರ್ಯಕ್ರಮಗಳು ಆರಂಭಗೊಂಡಿದ್ದು, 4ರಂದು ಭಗವತಿ ಆಲಿಚಾಮುಂಡಿ ದೈವದ ಕೋಲದೊಂದಿಗೆ ಸಮಾಪ್ತಿಯಾಗಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00