- ಕಾಸರಗೋಡು ಜಿಲ್ಲೆಯ ಹಿಂದೂ ಆರಾಧನಾಲಯಗಳನ್ನು ಜೋಡಿಸುವ ಕ್ಷೇತ್ರ ಏಕೋಪನಾ ಸಮಿತಿ ಅಸ್ತಿತ್ತಕ್ಕೆ
- ಧಾರ್ಮಿಕ ಕ್ಷೇತ್ರಗಳು ರಾಜಕೀಯ ಕೇಂದ್ರಗಳಾಗದೇ ಧರ್ಮ ಶಿಕ್ಷಣದ ಪಾಠಶಾಲೆಗಳಾಗಬೇಕು: ಸ್ವಾಮಿ ವಿವಿಕ್ತಾನಂದ ಸರಸ್ವತಿ
ಕಾಸರಗೋಡು ಜಿಲ್ಲೆಯ ದೇವಸ್ಥಾನ, ದೈವಸ್ಥಾನ, ಮಠ,ಮಂದಿರ, ತರವಾಡು ಕ್ಷೇತ್ರಗಳ ಸಹಿತ ಹಿಂದೂ ಆರಾಧನಾಲಯಗಳನ್ನೆಲ್ಲಾ ಜೋಡಿಸುವ ಕ್ಷೇತ್ರ ಏಕೋಪನಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಹಿಂದೂ ಐಕ್ಯ ವೇದಿ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಫೆ 2ರಂದು ನಡೆದ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಮತ್ತು ಹಿಂದೂ ಸಂಘಟನಾ ಪ್ರಮುಖರ ಸಮ್ಮುಖ ಕ್ಷೇತ್ರ ಏಕೋಪನಾ(ಸಮನ್ವಯ) ಸಮಿತಿಯನ್ನು ಘೋಷಿಸಲಾಯಿತು.
ಕ್ಷೇತ್ರಗಳು ಧರ್ಮಪಾಠಶಾಲೆಗಳಾಗಬೇಕು…
ಈ ಸಂಬಂಧ ನಡೆದ ಸಮಾಲೋಚನಾ ಸಭೆಯನ್ನು ಚಿನ್ಮಯಾ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಹಿಂದೂ ದೇವಾಲಯಗಳು ರಾಜಕೀಯದ ಕೇಂದ್ರಗಳಾಗಬಾರದು. ಅದು ಸನಾತನ ಹಿಂದೂ ಧಾರ್ಮಿಕ ಅನುಷ್ಠಾನದ ಕೇಂದ್ರಗಳಾಗಬೇಕು. ಧರ್ಮಬೋಧನೆಯ ಧರ್ಮಶಾಲೆಗಳಾಗಬೇಕು. ಪ್ರಾಚೀನ ಕೇರಳದಲ್ಲಿ ಕ್ಷೇತ್ರಗಳು ಗುರುಕುಲ ಪದ್ಧತಿಯಂತೆ ಧರ್ಮಪಾಠಶಾಲೆಗಳಾಗಿತ್ತು. ಇಂದು ಅದಿಲ್ಲದಿರುವುದರಿಂದಲೇ ಹಿಂದೂಗಳಲ್ಲಿ ಧಾರ್ಮಿಕ ಅರಿವು, ಅನುಷ್ಠಾನದ ಕೊರತೆ ಗಾಢವಾಗಿದೆ. ಈ ದಾರಿದ್ರ್ಯ ನೀಗಬೇಕು. ಜತೆಗೆ ಕ್ಷೇತ್ರಗಳ ವಿಷಯದಲ್ಲಿ ಕ್ಷೇತ್ರಾಚಾರ ಪಾಲಿಸುವ ಆಸ್ತಿಕರಷ್ಟೇ ಹಸ್ತಕ್ಷೇಪ ನಡೆಸಬೇಕೆಂದು ಕರೆ ಇತ್ತರು.
ಹಿಂದೂ ಐಕ್ಯವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ಪಿ.ಶಾಜಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲೆಯ ದೇವಾಲಯಗಳ ಸಹಿತ ಹಿಂದೂ ಆರಾಧನಾ ಕೇಂದ್ರಗಳ ಆಚಾರನುಷ್ಠಾನಗಳನ್ನು ಸರಕಾರ ಕಾನೂನಿನ ಮೂಲಕ ಧ್ವಂಸಗೊಳಿಸುತ್ತಿದೆ. ಸಾಮಾಜಿಕ ಪರಿಷ್ಕಾರಗಳ ಹೆಸರಲ್ಲಿ ಆಚಾರಗಳನ್ನೇ ಇಲ್ಲದಂತೆ ಮಾಡುವ ಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರಾಧನಾಲಯಗಳನ್ನು ಒಗ್ಗಟ್ಟಿನಿಂದ ಪೋಣಿಸಬೇಕಾಗಿದೆ.ತನ್ಮೂಲಕ ಎದುರಾಗುವ ತೊಂದರೆ, ಸಮಸ್ಯೆ ಬಗೆಹರಿಸಬೇಕಾಗಿದೆ. ಈ ದೃಷ್ಟಿಯಲ್ಲಿ ಕ್ಷೇತ್ರ ಏಕೋಪನಾ ಸಮಿತಿ ರಚಿಸಲಾಗುತ್ತಿದೆ ಎಂದರು.
ಹಿಂದೂ ಐಕ್ಯವೇದಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ ಹರಿದಾಸ್ ಪ್ರಧಾನ ಭಾಷಣ ಮಾಡಿದರು. ಶಿವಗಿರಿ ಮಠದ ಸ್ವಾಮಿ ಪ್ರೇಮಾನಂದ, ನೀಲೇಶ್ವರ ಅರಮನೆಯ ಮಾನವರ್ಮ ರಾಜ ನೀಲೇಶ್ವರಂ,
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಕಪ್ಪಣಕಲ್ ಕುಂಙಿಕಣ್ಣನ್ ಅಯತ್ತಾರ್, ನ್ಯಾಯವಾದಿ ರಮೇಶ ಯಾದವ್, ಯಾದವ ಸಭಾದ ಇಃದುಲೇಖ ಕರಿಂದಳಂ, ತೀಯಾ ಸಮಾಜದ ಗಣೇಶ ಅರಮಂಗಾನಂ, ವಾಸುದೇವನ್ ಮಲ್ಲಿಶ್ಶೇರಿ, ಧೀವರ ಸಭಾದ ಸುರೇಶ್ ಕೀಯೂರ್, ಗೋಪಾಲಕೃಷ್ಣನ್ ತಚ್ಚಂಗಾಡ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಹಿಂದೂ ಐಕ್ಯ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್ ಸ್ವಾಗತಿಸಿದರು