- ಸರ್ಕಾರಿ ಶಾಲಾ ಮಕ್ಕಳಿಗೆ ಕತೆ ಪುಸ್ತಕ ಹಂಚಿ ನಗು ಮೂಡಿಸುವ ಯೋಜನೆ..
- ಅಮ್ಮಂದಿರಿಂದ ಸಂಗ್ರಹ, ಗ್ರಾಮೀಣ ಮಕ್ಕಳಿಗೆ ವಿತರಣೆ
- ಫೇಸ್ಬುಕ್ ಒಕ್ಕೂಟದ ಅಮ್ಮಂದಿರ ಶ್ಲಾಘನೀಯ ಅಭಿಯಾನ
- ಮಕ್ಕಳಲ್ಲಿ ನಗುವಷ್ಟೇ ಅಲ್ಲ, ಓದಿನ ಹವ್ಯಾಸ ಬೆಳೆದು ಮಾನವತೆ ರೂಪುಗೊಳ್ಳಬೇಕೆಂದು ವಿ.ವಿ ಸಹಕಾರ
ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮನೋವಿಕಾಸದ ಜತೆ ಅವರೊಳಗೆ ಮುಗ್ಧತೆಯ ನಗು ಅರಳಿಸಲು ಮಂಗಳೂರಿನ ಅಮ್ಮಂದಿರ ಬಳಗ ವಿಶಿಷ್ಟ ಪ್ರಯತ್ನಕ್ಕೆ ಕಾಲಿಟ್ಟಿದೆ. ಸದಭಿರುಚಿಯ ಸಾಂಸ್ಕೃತಿಕ ವಲಯದ ಗಮನಸೆಳೆದು ಪ್ರಶಂಸೆ ಪಡೆದಿದೆ. ಅಮ್ಮ ಮತ್ತು ಮಗುವಿನ ಕಾಳಜಿಯಿಂದ ಕಾಯಕ ನಿರತವಾಗಿರುವ “ಮಾಮ್ಸ್ ಆಫ್ ಮಂಗಳೂರು” ಎಂಬ
ಸಂಸ್ಥೆ ಈಗ ಅಮ್ಮಂದಿರಿಂದ ಕತೆ ಪುಸ್ತಕ ಪಡೆದು ಅದನ್ನು ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೊದಗಿಸಿ ಅವರೊಳಗೆ ಕತೆಯ ಕೌತುಕದ ಬೀಜ ಬಿತ್ತಿ ನಗುವರಳಿಸಲು ಮುಂದಾಗಿದೆ..
ಈ ಯೋಜನೆಯ ಹೆಸರೇ “ನಗುವಿಗಾಗಿ ಕಥೆಗಳು” ಎಂದು. ಮಂಗಳೂರು ವಿ.ವಿ. ಯ ನೆಹರೂ ಚಿಂತನ ಕೇಂದ್ರದ ಸಹಯೋಗದಲ್ಲಿ ಇದಕ್ಕೆ ನಾಂದಿಯಾಗಿದೆ. ಈಗಾಗಲೇ ನೂರಾರು ಮಕ್ಕಳ ಕಥಾ ಪುಸ್ತಕಗಳು ‘ಮಾಮ್ಸ್’ ಮಡಿಲಿಗೆ ಸೇರಿವೆ.
ಮಾಮ್ಸ್ ಆಫ್ ಮಂಗಳೂರು ಫೇಸ್ ಬುಕ್ ಮೂಲಕ ಜನ್ಮ ಪಡೆದ ಅಮ್ಮಂದಿರ ಬಳಗ. ಕಳೆದ 9ವರ್ಷಗಳಿಂದ ಇದು ಸೃಜನಶೀಲ ಚಟುವಟಿಕೆ ನಡೆಸುತ್ತಿದೆ. ಈ ಗುಂಪಿನಲ್ಲಿ 42ಸಾವಿರ ಅಮ್ಮಂದಿರ ಸದಸ್ಯತ್ವವಿದೆ. ಇವರೆಲ್ಲರೂ ಮಂಗಳೂರು ಮೂಲದವರಾಗಿದ್ದು, ದೇಶ-ವಿದೇಶದ ನಾನಾ ಕಡೆ ನೆಲೆಸಿದವರು. 3ವರ್ಷದ ಹಿಂದೊಮ್ಮೆ ಇಂಥದೇ ಅಬಿಯಾನ ನಡೆಸಿದಾಗ 700ಪುಸ್ತಕ ಸಂಗ್ರಹವಾಗಿತ್ತು. ಅದನ್ನು ಉತ್ತರ ಕನ್ನಡದ ಗ್ರಾಮೀಣ ಶಾಲೆಗಳ ಬಡ ಮಕ್ಕಳಿಗೆ ವಿತರಿಸಲಾಗಿತ್ತು.
ಫೇಸ್ಬುಕ್ ಗೆಳೆತನದಿಂದ ಕುಡಿಯೊಡೆದರೂ ಈಗ ಮಾಮ್ಸ್ ಆಫ್ ಮಂಗಳೂರು ಟ್ರಸ್ಟ್ ಆಗಿದೆ. ಸಾಮಾಜಿಕ ಕಾಳಜಿಯ ಸಮಾಜ ಸೇವೆ ನಡೆಸುತ್ತಿದೆ. ಹಿಂದಿನ ಅಭಿಯಾನದ ಸ್ಪೂರ್ತಿಯೇ ಈಗ ಮತ್ತೊಮ್ಮೆ ಈ ಅಭಿಯಾನಕ್ಕೆ ಪ್ರೇರಣೆ. ಇವರು 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಮುದ ನೀಡಬಹುದಾದ ಪುಸ್ತಕಗಳನ್ನು ಸಂಗ್ರಹಿಸುತ್ತಾರೆ. ಫೇ.ಬು.ಮೂಲಕ ಇವರ ಸಂಪರ್ಕ ಕ್ಕೆ ಬಂದವರು ಉತ್ಸಾಹದಿಂದ ಪುಸ್ತಕ ಒದಗಿಸುತ್ತಾರೆ.
ಈ ಬಾರಿ ಮಂಗಳೂರು ನೆಹರೂ ಚಿಂತನ ಕೇಂದ್ರವು 10 ಸರ್ಕಾರಿ ಶಾಲೆಗಳನ್ನು ಗುರುತಿಸಿದೆ. ಮಕ್ಕಳಿಗೆ ಆನಂದದ ಜತೆ ಓದಿನ ಹವ್ಯಾಸ ಬೆಳೆಯಬೇಕು. ಈ ಮೂಲಕ ಮಾನವತೆ ನೆಲೆಸಬೇಕೆಂಬ ಆಶಯದಿಂದ ವಿ ವಿ.ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ.