- ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷನ ರಾಜೀನಾಮೆ ಬಯಸಿ ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ
- ನಿಧಿ ಅಪಹರಣ ಯತ್ನ ಬೇಲಿಯೇ ಹೊಲ ಮೇಯ್ದಂತೆ, ರಾಜೀನಾಮೆ ನೀಡದಿದ್ದರೆ ಪ್ರಬಲ ಪ್ರತಿಭಟನೆ -ಎಂ.ಎಲ್.ಅಶ್ವಿನಿ ಎಚ್ಚರಿಕೆ
ಕಾಸರಗೋಡು: ಕುಂಬಳೆ ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಅಪಹರಿಸಲು ಯತ್ನಿಸಿದ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಜೀಬ್ ಕಂಬಾರ್ ಅವರ ಕೃತ್ಯಗಳು “ಬೇಲಿಯೇ ಎದ್ದು ಹೊಲ ತಿನ್ನುವಂತಿದ್ದು, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದರು.
ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿಯು ಚೌಕಿ ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.
“ನಿಧಿ ಅಪಹರಿಸಲು ಬಂದ ಮುಜೀಬ್ ಮತ್ತು ಅವರ ಗುಂಪನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪ್ರಯತ್ನಿಸಿದವರು ಕುಂಬಳೆಯ ಸ್ಥಳೀಯ ಮುಸ್ಲಿಂ ಲೀಗ್ ನಾಯಕರು. ಇದರಿಂದಲೇ ಈ ಯತ್ನದ ಹಿಂದೆ ರಾಜಕೀಯ ಷಡ್ಯಂತ್ರ ಇರುವುದು ಸ್ಪಷ್ಟವಾಗುತ್ತಿದೆ. ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಇಂತಹ ಕಾರ್ಯಗಳಿಗೆ ಕೈಹಾಕಿದರೆ, ಸಾರ್ವಜನಿಕ ಆಸ್ತಿಯ ಭದ್ರತೆ ಹೇಗಿರುತ್ತದೆ?” ಎಂದು ಅಶ್ವಿನಿ ಪ್ರಶ್ನಿಸಿದರು.
ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು ನಿಧಿ ಹುಡುಕಾಟಕ್ಕೆ ಇಳಿದಿರುವ ಮುಜೀಬ್ ರಾಜೀನಾಮೆ ನೀಡದಿದ್ದರೆ, ಬಿಜೆಪಿ ಪ್ರಬಲ ಪ್ರತಿಭಟನೆ ನಡೆಸಲಿದೆ ಎಂದು ಎಂ.ಎಲ್. ಅಶ್ವಿನಿ ಎಚ್ಚರಿಸಿದರು.
ಈ ಸಭೆಯಲ್ಲಿ ಬಿಜೆಪಿ ಕಾಸರಗೋಡು ಕ್ಷೇತ್ರದ ಮಾಜಿ ಅಧ್ಯಕ್ಷೆ ಹಾಗೂ ಮೊಗ್ರಾಲ್ ಪುತ್ತೂರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಕಾಸರಗೋಡು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕುದ್ರೆಪ್ಪಾಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಪಿ.ಆರ್. ಸುನಿಲ್ ಸೇರಿ ಹಲವರು ಮಾತನಾಡಿದರು.
ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಪ್ರಿಯಾ ನಾಯಕ್ ಸ್ವಾಗತಿಸಿದರು, ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಧನ್ಯವಾದ ಅರ್ಪಿಸಿದರು.
ಪ್ರತಿನಿಧಿಗಳಾದ ಸಂಪತ್ ಕುಮಾರ್, ಮಲ್ಲಿಕಾ, ಗಿರೀಶ್ ಮಜಲ್, ಸುಲೋಚನಾ ಮತ್ತು ಹಲವಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.