- ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳಿಗೆ ಮಹಾಮಂಡಲೇಶ್ವರ್ ಪಟ್ಟ
- ಉತ್ತರದಿಂದ ತುಳುನಾಡಿಗೆ ಸಲ್ಲುವ ಮೊದಲ ಗೌರವ, ಜೂನ ಅಖಾಡದ ಧಾರ್ಮಿಕ ಚಟುವಟಿಕೆ ದ.ಭಾರತಕ್ಕೆ ವ್ಯಾಪಿಸುವ ಉದ್ದೇಶ
ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಜ.31ರಂದು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮಹಾಮಂಡಲೇಶ್ವರ್ ಪದವಿಯ ಪಟ್ಟಾಭಿಷೇಕ ನಡೆಯಿತು. ಕರ್ನಾಟಕದಿಂದ ಈ ಪದವಿಗೇರುವ ಮೊದಲ ಮಠಾಧೀಶರು ಇವರಾಗಿದ್ದಾರೆ. ಶುಕ್ರವಾರ ಜೂನ ಅಖಾಡದ ಮುಖ್ಯಸ್ಥರ ಧರ್ಮಸಂಸತ್ ನಲ್ಲಿ ಪದವಿ ಪ್ರಧಾನ ಜರುಗಿತು.
ಧಾರ್ಮಿಕ, ಆಧ್ಯಾತ್ಮ, ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಮಹಾಪುರುಷರನ್ನು ಗುರುತಿಸಿ, ಧಾರ್ಮಿಕ ಕೈಂಕರ್ಯಗಳನ್ನು ವಿಸ್ತರಿಸಿ ನಡೆಸಲು ನೀಡುವ ಪದವಿ ಇದಾಗಿದೆ. ಅಖಾಡದಿಂದ ಈ ಪದವಿಗೆ ಅರ್ಹರಾಗಬೇಕಿದ್ದರೆ ಅವರು ಸ್ವತಂತ್ರ ಪೀಠಾಧೀಶರಾಗಿರಬೇಕು. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದ ಧರ್ಮಸಂಸತ್ತಿನ ಕ್ಯಾಬಿನೆಟ್ ಸದಸ್ಯರು ಸ್ವಾಮೀಜಿಯವರ ಆಧ್ಯಾತ್ಮಿಕ ಸತ್ಸಂಗ ಸಾಧನೆ, ಕೊಡುಗೆ ಪರಿಶೀಲಿಸಿ ಗೌರವ ಪದವಿ ಪ್ರದಾನ ಮಾಡಿದರು.
ಜೂನ ಅಖಾಡ ಉತ್ತರ ಭಾರತೀಯ ನಾಗಸಾಧು, ಸಂತರ ಅಖಾಡವಾಗಿದ್ದು, ಇದು ದ.ಭಾರತದ ಸಂತರನ್ನು ಅಖಾಡಕ್ಕೆ ಪರಿಗಣಿಸಿದ್ದೇ ವಿರಳ. ಆದರೆ ಈ ಬಾರಿಯ ಮಹಾಕುಂಭ ಮೇಳದಲ್ಲಿ ದಕ್ಷಿಣ ಭಾರತೀಯ ಸಂತರಿಗೂ ಮಹಾಮಂಡಲೇಶ್ವರ್ ಪದವಿ ನೀಡಿರುವುದು ಅಖಾಡದ ಚಟುವಟಿಕೆಗಳನ್ನು ದ.ಭಾರತಕ್ಕೂ ವಿಸ್ತರಿಸುವುದರ ಸಂಕೇತವಾಗಿದೆ.
ಪ್ರಸ್ತುತ ಕನ್ಯಾಡಿ ಶ್ರೀಗಳ ಮೂಲಕ ಕರ್ನಾಟಕದಿಂದ ಮೊದಲ ಮಹಾಮಂಡಲೇಶ್ವರ್ ಆಯ್ಕೆಯಾಗಿದೆ. ವಾರಣಾಸಿಯ ಪಂಚದಶನಾಮ್ ಜೂನಾ ಅಖಾಡದಲ್ಲಿ ಮಹಾಮಂಡಲೇಶ್ವರರ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಕನ್ಯಾಡಿ ಶ್ರೀಗಳಿಗೆ ಪಟ್ಟಾಭಿಷೇಕ ಮಾಡಿದರು.
ಜ.31ರಂದು ಕನ್ಯಾಡಿ ಶ್ರೀಗಳಿಗೆ ಮಹಾಮಂಡಲೇಶ್ವರ್ ಪಟ್ಟಾಭಿಷಷೇಕ ನಡೆಯುವಾಗ ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ಹರ್ಷಿತ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಗಳು ಫೆ.2ರಂದು ಮಹಾಮಂಡಲೇಶ್ವರ್ ಅಭಿದಾನದೊಂದಿಗೆ ಕನ್ಯಾಡಿಗೆ ಆಗಮಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಅವರಿಗೆ ಸಾರ್ವಜನಿಕ ಅಭಿನಂದನೆ ನಡೆಸಲು ನಿರ್ಧರಿಸಲಾಗಿದೆ.