- ಅರ್ಧ ಹಣ ಪಾವತಿಸಿದರೆ ಮಹಿಳೆಯರಿಗೆ ಹೊಸ ಸ್ಕೂಟರ್ ನೀಡುವ “ವಿಮೆನ್ಸ್ ಓನ್ ವ್ಹೀಲ್ಸ್ ” ಯೋಜನೆ ಹೆಸರಲ್ಲಿ ವಂಚನೆ
- 300ಕೋಟಿ ರೂ ವಂಚಿಸಿದಾತನ ಸೆರೆ : 1200ಕ್ಕೂ ಅಧಿಕ ಮಹಿಳೆಯರು ಬಲಿಪಶು!
ಕೇವಲ ಅರ್ಧ ಹಣ ಪಾವತಿಸಿದರೆ ಸಾಕು, ಮಹಿಳೆಯರಿಗೆ ನೂತನ ಸ್ಕೂಟರ್ ಒದಗಿಸಲಾಗುವುದೆಂಬ ಘೋಷಣೆಯೊಂದಿಗೆ ಕೇರಳ ರಾಜ್ಯ ವ್ಯಾಪಕ ಸ್ಕೀಂ ನಡೆಸಿ 1200ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿ 300ಕೋಟಿ ರೂ ಲಪಟಾಯಿಸಿ ವಂಚಿಸಿದ “ವಿಮೆನ್ ಓನ್ ವೀಲ್ಸ್” ಯೋಜನೆಯ ಸೂತ್ರಧಾರನನ್ನು ಬಂಧಿಸಲಾಗಿದೆ.
ಕೇರಳದ ಇಡುಕ್ಕಿ ಕುಡಯತ್ತೂರ್ ನಿವಾಸಿ ಅನಂತಕೃಷ್ಣನ್ (26) ಬಂಧಿತ ವ್ಯಕ್ತಿಯಾಗಿದ್ದಾನೆ.ಈತನ ಬಂಧನದೊಂದಿಗೆ ಕೇರಳದುದ್ದಗಲ ಈತ ನಡೆಸಿದ ಮಹಾ ವಂಚನಾ ಜಾಲವೇ ಬೆಳಕಿಗೆ ಬಂದಿದೆ.
ವಾಹನದ ಅರ್ಧಾಂಶ ಹಣ ಪಾವತಿಸಿದರೆ ನೂತನ ಸ್ಕೂಟರ್ ಅರ್ಧಾಂಶ ಲಾಭದೊಂದಿಗೆ ಸಿಗಲಿದೆ ಎಂಬ ಪ್ರಚಾರ ನೀಡಿ “ವಿಮೆನ್ ಆನ್ ವ್ಹೀಲ್ಸ್” ಎಂಬ ಯೋಜನೆಯ ಮೂಲಕ ವಂಚನೆ ನಡೆಸಲಾಗಿತ್ತು. ಬಳಕೆದಾರರು ಅರ್ಧಾಂಶ ಹಣ ಪಾವತಿಸಿದರೆ ಉಳಿದ ಅರ್ಧಾಂಶ ಕೇಂದ್ರ ಸರಕಾರ ಭರಿಸಲಿದೆಯೆಂದೂ, ವಿವಿಧ ಕಂಪೆನಿಗಳ ಸಿ.ಎಸ್.ಆರ್ ಫಂಡ್ ಸೌಲಭ್ಯ ಉಂಟೆಂದೂ ನಂಬಿಸಿ 1200ಕ್ಕೂ ಅಧಿಕ ಮಹಿಳೆಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ಮುಂಗಡ ಪಾವತಿಸಿದರೆ 45 ದಿನದಲ್ಲಿ ವಾಹನ ಒದಗಿಸಲಾಗುವುದೆಂದು ಭರವಸೆ ನೀಡಲಾಗಿತ್ತು.
ದ್ವಿಚಕ್ರ ವಾಹನದ ಹೊರತು, ಲ್ಯಾಪ್ ಟಾಪ್, ಹೊಲಿಗೆ ಯಂತ್ರ ಮೊದಲಾದುದು ಒದಗಿಸುವ ಭರವಸೆಯಿಂದ ಇದೇ ಮಾದರಿಯಲ್ಲಿ ನೂರಾರು ಮಂದಿಗೆ ಮೋಸ ಮಾಡಿರುವುದುವ ಇದರೊಂದಿಗೆ ಬೆಳಕಿಗೆ ಬಂದಿದೆ. ಇದರ ವಿತರಣೆಯ ಉದ್ಘಾಟನೆಗೆ ಭಾರೀ ಕಾರ್ಯಕ್ರಮ ಏರ್ಪಡಿಸಿ ರಾಜಕೀಯ ಪ್ರಮುಖರನ್ನೆಲ್ಲಾ ಕರೆಸಿ ಜನರಲ್ಲಿ ನಂಬಿಕೆ ಮೂಡಿಸಲಾಗಿತ್ತು.
ಆದರೆ ಹಣ ಪಾವತಿಸಿ 45ದಿನಗಳು ದಾಟಿದರೂ ಭರವಸೆ ಇತ್ತ ವಾಹನ ದೊರೆಯದೇ ಇದ್ದಾಗ ಯೋಜನೆಗೆ ಸೇರಿದವರು ಶಂಕೆಗೊಂಡು ಪೋಲೀಸ್ ದೂರಿತ್ತರು. ಇದರಂತೆ ಮೂವಾಟುಪುಯ ಪೋಲೀಸರು ತನಿಖೆ ನಡೆಸಿ ಮುಖ್ಯ ಸೂತ್ರಧಾರನನ್ನು ಬಂಧಿಸಿದರು. ಈ ವೇಳೆ ಪೋಲೀಸರಿಗೆ 1200ದೂರುಗಳು ದೊರೆತಿವೆ.
ನೆಟ್ ವರ್ಕ್ ಮಾರ್ಕೆಟಿಂಗ್ ವಿಧಾನದಲ್ಲಿ ಯೋಜನೆಗೆ ಜನರನ್ನು ಸೇರಿಸಿ ಹಣ ಹೂಡಿಕೆ ಮಾಡಲಾಗಿತ್ತು. ಈತ ಈ ಹಿಂದೆ 2019ರಲ್ಲಿ ಇದೇ ರೀತಿಯ ಇನ್ನೊಂದು ವಂಚನಾ ಕೇಸಿನಲ್ಲಿ ಬಂಧಿತನಾಗಿ ಜಾಮೀನು ಬಿಡುಗಡೆ ಪಡೆದಿದ್ದನು.