- ಕುಂಭಮೇಳದ ಸಂತೆ ಸುಂದರಿಗೆ ಬಾಲಿವುಡ್ ಅವಕಾಶ
- ನಿರ್ದೇಶಕ ಸನೋಜ್ ಮಿಶ್ರಾ ಚಿತ್ರದಲ್ಲಿ ನಟಿಸಲು ಬೆಕ್ಕಿನ ಕಣ್ಣಿನ ಹುಡುಗಿ ಒಪ್ಪಿಗೆ
ಮಹಾಕುಂಭ ಮೇಳದ ಸಂತೆಯಲ್ಲಿ ಕಂಡ ಬೆಕ್ಕಿನ ಕಣ್ಣಿನ ಹುಡುಗಿ ಮೋನಿ ಭೋಂಸ್ಲೆ ಸಂತೆಯ ಬದುಕಿನಿಂದ ನೇರ ಬಾಲಿವುಡ್ ಗೆ ಜಿಗಿದಿದ್ದಾಳೆ. ಇದಕ್ಕೆ ಕಾರಣವಾದದ್ದು ಆಕೆಯ ಸ್ನಿಗ್ಧ ಸೌಂದರ್ಯದ ಬೆಕ್ಕಿನ ಕಣ್ಣುಳ್ಳ ಮುಖದ ಸೆಳೆತ…!
ಮಹಾಕುಂಭ ಮೇಳದ ಸಂತೆಯಲ್ಲಿ ತನ್ನ ಕುಟುಂಬದ ಜತೆ ರುದ್ರಾಕ್ಷಿ ಮಣಿ ಮಾಲೆ ಮಾರುತ್ತಿದ್ದ,ಈಕೆಯನ್ನು ಕಂಡ ನೆಟ್ಟಿಗರಿಗೆ ಈಕೆ ಸೌಂದರ್ಯದ ಸಾಕಾರಮೂರ್ತಿ ಮೊನಾಲಿಸಾಗೆ ಹೋಲುವಂತೆ ತೋರಿತು. ಹಾಗೆಂದೇ ಜಾಲತಾಣದಲ್ಲಿ ವೈರಲ್ ಆಗಿ ದೇಶವ್ಯಾಪಕ ಜನಪ್ರಿಯವಾಯಿತು. ಈ ಜನಪ್ರಿಯತೆಯೇ ಆಕೆಯನ್ನು ಸಂತೆಯ ಬದುಕಿನಿಂದ ಬಾಲಿವುಡ್ ಗೆ ಏರಿಸಿದೆ.
ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ನಿರ್ದೇಶನದ “ದಿ ಡೈರಿ ಆಫ್ ಮಣಿಪುರ್” ಚಿತ್ರದಲ್ಲಿ ನಟಿಸಲು ಈಕೆ ಸಮ್ಮತಿಸಿದ್ದು, ಎಪ್ರೀಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಬುಧವಾರ ಮಧ್ಯಪ್ರದೇಶದ ಮಹೇಶ್ವರ್ ನಲ್ಲಿರುವ ಮೋನಿ ಭೋಂಸ್ಲೆ ಮನೆಗೆ ತೆರಳಿದ ನಿರ್ದೇಶಕರು ಈಕೆಯ ಕುಟುಂಬದ ಜತೆ ಮಾತನಾಡಿದರು.
ಕುಂಭಮೇಳದ ಮೂಲಕ ನೆಟ್ಟಿಗರಿಂದ ಮೊನಾಲಿಸಾ ಎಂದೇ ಪ್ರಚಾರಕ್ಕೆ ಬಂದ ಈಕೆ ತನಗೆ ಸಿಕ್ಕ ಪ್ರಚಾರದಿಂದ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ ಎಂದಿದ್ದಳು. ಅದು ಈ ಮೂಲಕ ನೆರವೇರುತ್ತಿದೆ.
ಈಕೆಯ ಮನೆಗೆ ತೆರಳಿದ ಫೋಟೋ ಸಹಿತ ನಿರ್ದೇಶಕ ಸನೋಜ್ ಮಿಶ್ರಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ.