ದೇಶದಲ್ಲೇ ಮೊದಲಬಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬ ದೈವವಾಗಿ ಪರಿವರ್ತಿತನಾಗಿ ಹಿಂದೂ ದೈವ ಕುಲಕೋಟಿಯ ನಡುವೆ ಜಾಗ ಪಡೆದು ಆರಾಧನೆಗೊಳ್ಳುವ ಏಕೈಕ ಇತಿಹಾಸ ಇರುವ ತಾಣವೇ ಕುಂಬಳೆಯ ಪಾರೆ ಶ್ರೀ ಭಗವತಿ ಆಲಿ ಚಾಮುಂಡೀ ಕ್ಷೇತ್ರ. ಪ್ರಸಕ್ತ ಶ್ರೀ ಕ್ಷೇತ್ರದ ಭಂಡಾರಮನೆ ಮತ್ತು ಗುರುಪೀಠದ ಪುನರ್ ಪ್ರತಿಷ್ಠೆ ನಡೆಯುತ್ತಿದೆ. ತದಂಗವಾಗಿ ಭಗವತೀ ಸಹಿತ ಆಲಿದೈವದ ಕೋಲ ಉತ್ಸವವೂ ವಾಡಿಕೆಗಿಂತ ಭಿನ್ನವಾಗಿ ನಡೆಯಲಿದೆ..
ಕುಂಬಳೆ ಆರಿಕ್ಕಾಡಿ ಯ ಪಾರೆ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ಭಂಡಾರ ಸ್ಥಾನ ಮತ್ತು ಗುರುಪೀಠದ ಪುನರ್ ಪ್ರತಿಷ್ಠಾ ತೈಯ್ಯಂಕೆಟ್ಟ್ ಮಹೋತ್ಸವಕ್ಕೆ ಭಕ್ತಿ, ಸಂಭ್ರಮಾದರಗಳ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆಯೊಂದಿಗೆ ಚಾಲನೆಯಾಗಿದೆ.
ಜ.31.ರಂದು ಶುಕ್ರವಾರ ಸಂಜೆ ತೀಯ ಸಮಾಜದ ಕುಂಬಳೆ ಕೋರಿಕಂಡ ತರವಾಡಿನಿಂದ ನಾಲ್ಕೂರಿನ ತೀಯಾ ಸಮಾಜದವರು ಮತ್ತು ಕ್ಷೇತ್ರ ಸಂಬಂಧೀ ತರವಾಡು ಪ್ರತಿನಿಧಿಗಳು ಪಾಲ್ಗೊಂಡ ವೈಭವದ ಹಸಿರುವಾಣಿ ಹೊರೆ ಕಾಣಿಕೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯಾಯಿತು. ಬಳಿಕ ನೂತನ ಭಂಡಾರಸ್ಥಾನದ “ಕುತ್ತಿಪೂಜೆ” ನಡೆಯಿತು.
ಫೆ.1ರಂದು ಸಂಜೆ ಬ್ರಹ್ಮಶ್ರೀ ನೀಲೇಶ್ವರ ಅರವತ್ತ್ ಕೆ.ಯು.ಪದ್ಮನಾಭ ತಂತ್ರಿಗಳವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳಿಗೆ ಚಾಲನೆಯಾಗಲಿದೆ.
ಫೆ.2ರಂದು ಆದಿತ್ಯವಾರ ಬೆಳಿಗ್ಗಿನಿಂದ ಭಗವತೀ ಸೇವೆ, ಅನ್ನಸಂತರ್ಪಣೆ, ವಾಸ್ತುಹೋಮ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಫೆ.3ರಂದು ಬೆಳಿಗ್ಗೆ ಧಾರ್ಮಿಕ ಸಭೆ ನಡೆಯಲಿದ್ದು ನಾಡಿನ ಗಣ್ಯರು ಪಾಲ್ಗೊಳ್ರಳುವರು.
ಮಧ್ಯಾಹ್ನ 1.38ರಿಂದ ಒದಗುವ ಮುಹೂರ್ತದಲ್ಲಿ ಗುರುಪೀಠ ಪ್ರತಿಷ್ಠೆ. ಕಲಶಾಭಿಷೇಕ, ಭಂಡಾರಸ್ಥಾನ ಪ್ರತಿಷ್ಠೆ ಜರಗಲಿದೆ.
ರಾತ್ರಿ ಮಂತ್ರಮೂರ್ತಿ, ಕಾರ್ಯಕ್ಕಾರನ್ ಆಲಿ ದೈವಕ್ಕೆ ಕೋಳಿ ಸಮ್ಮಾನ ನಡೆಯಲಿದ್ದು, ಬಳಿಕ ತಂಬುರಾಟಿ ಕೂಟ ಜರಗಲಿದೆ.
ಅನ್ನಸಂತರ್ಪಣೆ ಬಳಿಕ ಪುದಿಯ ಭಗವತಿ, ಮಂತ್ರಮೂರ್ತಿ ದೈವಗಳ ನಾಂದಿ ನಡೆಯಲಿದೆ. ಫೆ.4ರಂದು ಬೆಳಿಗ್ಗೆ ಪುದಿಯ ಭಗವತಿ ದೈವಕೋಲ, 10ಕ್ಕೆ ಆಲಿ ದೈವದ ಕೋಲ , ಮಂತ್ರಮೂರ್ತಿ ಕೋಲದೊಂದಿಗೆ ಕಾರ್ಯಕ್ರಮಗಳಿಗೆ ಸಮಾಪ್ತಿಯಾಗಲಿದೆ.