- ಕುಂಬಳೆ ಕಂಚಿಕಟ್ಟೆ – ಕೊಡಿಯಮ್ಮೆ ರಸ್ತೆ ಸೇತುವೆಗೆ 27ಕೋಟಿ ರೂಗಳ ಯೋಜನೆ
- ಶೀಘ್ರವೇ ಕಾಮಗಾರಿ ಆರಂಭವೆಂದು ನೀರಾವರಿ ಇಲಾಖೆ ಸ್ಪಷ್ಟನೆ
ಸಂಪೂರ್ಣ ಕುಸಿದು, ದ್ರವಿಸಿ ಹೋಗಿದ್ದ ಕುಂಬಳೆಯ ಕಂಚಿಕಟ್ಟೆ – ಕೊಡಿಯಮ್ಮೆ ಸೇತುವೆ ನವೀಕರಿಸಿ ನಿರ್ಮಿಸಲು ನಬಾರ್ಡ್ 27 ಕೋಟಿ ರೂಗಳ ಯೋಜನೆ ತಯಾರಿಸಿದೆ.ಗತಕಾಲದ ಸೇತುವೆ ಸಂಪೂರ್ಣ ನಶಿಸಿ ಹೋಗಿದ್ದರಿಂದ ಈ ಸೇತುವೆ ಮೂಲಕದ ವಾಹನ ಸಂಚಾರವನ್ನು ಕಳೆದ ಒಂದು ವರ್ಷಗಳಿಂದ ರಸ್ತೆ ಸುರಕ್ಷಾ ಪ್ರಾಧಿಕಾರ ನಿಷೇಧಿಸಿತ್ತು. ಕಿರು ನೀರಾವರಿ ಇಲಾಖೆಯ ಆಧೀನದಲ್ಲಿದ್ದ ಸೇತುವೆಗೆ 27ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಿಸಲು ಯೋಜನೆ ಸಿದ್ಧವಾಗಿದೆ ಎಂದು ಕಿರು ನೀರಾವರಿ ಇಲಾಖೆಯ ಎಕ್ಸಿಕೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.
ಕೇರಳ ಸರಕಾರದ “ಕರುದಲುಂ ಕೈತಾಂಗುಂ” ಅಭಿಯಾನದಂಗವಾಗಿ ಏರ್ಪಡಿಸಿದ ಅದಾಲತ್ ನಲ್ಲಿ ಸೇತುವೆ ನಿರ್ಮಿಸಿ ರಸ್ತೆ ಸಂಚಾರ ಸುಗಮಗೊಳಿಸಬೇಕೆಂದು ಒತ್ತಾಯಿಸಿ ಸಲ್ಲಿಸಲ್ಪಟ್ಟ ಮನವಿಗೆ ನೀರಾವರಿ ಇಲಾಖೆ ಈ ಸ್ಪಷ್ಟೀಕರಣ ನೀಡಿದೆ.
ಸೇತುವೆ ಸಂಚಾರ ಯೋಗ್ಯ ಅಲ್ಲವೆಂದು ವಾಹನ ಸಂಚಾರ ನಿಷೇಧಿಸುವಾಗಲೇ ನೂತನ ಸೇತುವೆಗಾಗಿ ನಕ್ಷೆ ವಿನ್ಯಾಸ ತಯಾರಿಸಲಾಗಿತ್ತು. ಆದರೆ ಎಪ್ರೋಚ್ ರಸ್ತೆ ಗೆ ಬೇಕಾದ ಅಗತ್ಯದ ಸ್ಥಳ ಒದಗದೇ ಇದ್ದ ಕಾರಣ ಇದರ ಕಾಮಗಾರಿ ಆರಂಭಕ್ಕೆ ವಿಳಂಬವಾಯಿತು. ಬಳಿಕ ಸಾರ್ವಜನಿಕ ಹಿತಾಸಕ್ತಿಯ ಹಸ್ತಕ್ಷೇಪದಿಂದ ಯೋಜನೆಗೆ ಬೇಕಾದ ಸ್ಥಳ ಒದಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಇಲಾಖೆ ತಿಳಿಸಿದೆ.