- ಬೇಂಕಿನವರು ಮನೆ,ಸೊತ್ತು ಜಪ್ತಿಗೈಯ್ಯಲು ಮುಂದಾದಾಗ ಅನ್ಯತ್ರ ಆಶ್ರಯವಿಲ್ಲದ ಬಡಮಹಿಳೆಗೆ ಆಸರೆಯಾಗಿ ಜಪ್ತಿ ಭಯ ನೀಗಿಸಿದ ಮಂಜೇಶ್ವರ ಶಾಸಕ..
- ಬೇಂಕ್ ಸಾಲಕ್ಕೆ ತಾನೇ ಹೊಣೆಯೆಂದು ಬಡ ಕುಟುಂಬದ ಕಣ್ಣೀರೊರೆಸಿದ ಶಾಸಕನಿಗೆ ಪ್ರಶಂಸೆ
ಮನೆ ಮತ್ತು ಭೂಮಿಯನ್ನು ಬೇಂಕಿನವರು ಜಪ್ತಿ ಮಾಡಲು ಮುಂದಾದಾಗ ಅನ್ಯತ್ರ ಆಶ್ರಯವಿಲ್ಲದೇ, ಮನೆ ಉಳಿಸಲಾಗದೇ ಕಂಗೆಟ್ಟ ಮಹಿಳೆಗೆ ಮಂಜೇಶ್ವರ ಶಾಸಕ ಎ ಕೆ ಎಂ.ಅಶ್ರಫ್ ಸಕಾಲದಲ್ಲಿ ನೆರವಾಗಿ ಕಂಬನಿಯೊರೆಸಿ, ಜಪ್ತಿ ಭಯ ನೀಗಿಸಿ ಮಾನವೀಯತೆ ಮೆರೆದ ಪ್ರಶಂಸನೀಯ ಘಟನೆ ನಡೆದಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮೀಯಪದವು ಬಳಿಯ ಬಾಳ್ಯೂರಿನ ತೀರ್ಥ ಎಂಬ ಮಹಿಳೆ ಮಗಳ ಚಿಕಿತ್ಸೆ, ಮನೆ ರಿಪೇರಿಗೆಂದು 2016ರಲ್ಲಿ 2.50ಲಕ್ಷ ರೂಗಳನ್ನು ಕೇರಳ ಗ್ರಾಮೀಣ ಬೇಂಕಿನಿಂದ ಸಾಲ ಪಡೆದಿದ್ದರು. ಅದನ್ನು ಸಕಾಲದಲ್ಲಿ ಮರುಪಾವತಿಸಲಾಗದೇ ಇದ್ದುದರಿಂದ ಕಂತು ಬಾಕಿಯಾಗಿ ಬೇಂಕಿನವರು ಜಪ್ತಿಗೆ ಮುಂದಾದರು. ಈ ಸಂಬಂಧ ಮನೆ ಮತ್ತು ಜಾಗ ಮಾರಾಟಕ್ಕಿದೆಯೆಂದು ತೀರ್ಥಳ ಮನೆಗೋಡೆಯಲ್ಲಿ ಬೇಂಕಿನವರು ಜಪ್ತಿ ಫಲಕ ಹಾಕಿದಾಗ ಅಕ್ಷರಶಃ ತೀರ್ಥ ಮತ್ತು ಮಕ್ಕಳು ಹತಾಶೆಯಿಂದ ಕಂಗೆಟ್ಟರು. ಅನ್ಯಥಾ ಆಶ್ರಯವಿಲ್ಲದೇ ಗೋಳಿಟ್ಟರು.
ಸಾಲ ಮರುಪಾವತಿಗೆ ಅವಧಿ ವಿಸ್ತರಿಸಿ ನೀಡಬೇಕೆಂದು ಒತ್ತಾಯಿಸಿದ್ದರೂ ಈ ಬೇಡಿಕೆಗೆ ಸ್ಪಂದಿಸದೇ ಕೇರಳಾ ಗ್ರಾಮೀಣ ಬೇಂಕ್ ನೌಕರರು ಬಡ ಮಹಿಳೆಯ ಬದುಕಿನಲ್ಲಿ ಕರುಣೆ ಇಲ್ಲದೇ ಕ್ರೌರ್ಯ ಮೆರೆದಿದ್ದರು. ಪ್ರಸ್ತುತ ಜಪ್ತಿ ಫಲಕ ಹಾಕಿದಾಗ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿ ಶಾಸಕರ ಗಮನಕ್ಕೂ ಬಂತು.
ಗುರುವಾರ ಸಂಜೆ ಈ ಮನೆಗೆ ಶಾಸಕರು ಭೇಟಿ ಇತ್ತು, ಬೇಂಕ್ ಸಾಲ ಎಷ್ಟೇ ಇದ್ದರೂ ಚಿಂತಿಸಬೇಡಿ. ಅದನ್ನು ಮರುಪಾವತಿಸುವ ಹೊಣೆ ನನ್ನದು. ನೀವು ನಿಶ್ಚಿಂತೆಯಲ್ಲಿರಿ ಎಂದು ಎಂಡೋಸಲ್ಫಾನ್ ಖಾಯಿಲೆ ಪೀಡಿತರಾದ ಮಹಿಳೆ ಮತ್ತು ಕುಟುಂಬಕ್ಕೆ ಭರವಸೆ ಇತ್ತರು. ಬಳಿಕ ಜಿಲ್ಲಾಧಿಕಾರಿಗಳನ್ನು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಜಪ್ತಿ ಕ್ರಮದಿಂದ ಹಿಂಜರಿಯಬೇಕೆಂದೂ, ಸಾಲದ ಮರುಪಾವತಿಗೆ ತಾನು ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದಂತೆ ಬೇಂಕಿನವರು ಜಪ್ತಿ ಕ್ರಮದಿಂದ ಹಿಂಜರಿದರು. ಶಾಸಕ ಎ.ಕೆ ಎಂ ಅಶ್ರಫ್ ಅವರ ಸಕಾಲಿಕ ಸ್ಪಂದನದ ಮಾನವೀಯ ಸಹಾಯಕ್ಕೆ ನಾಡಿನ ಜನತೆ ಅಭಿನಂಧಿಸಿದ್ದಾರೆ.