- ಮಾರ್ಕ್ಸಿಸಂ ನಿಂದ ಮಹರ್ಷಿಯೆಡೆಗೆ ನಡೆದ ಕೇರಳದ ಎಡಪಂಥೀಯ ಪತ್ರಕರ್ತ ಈಗ ಮಹಾ ಮಂಡಲೇಶ್ವರ
- ಕೇರಳದ ಸಾಧು ಆನಂದವನಂ ಭಾರತಿ ಇನ್ನು ಜೂನ ಅಖಾಡದ ಮುಖ್ಯಸ್ಥ ಮಂಡಲೇಶ್ವರ
ಬದುಕು ಯಾರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಹೇಳಲಾಗದು…
ಒಂದು ಕಾಲದಲ್ಲಿ ಕೇರಳದ ಕಮ್ಯೂನಿಸ್ಟ್ ವಿದ್ಯಾರ್ಥಿ ನಾಯಕನಾಗಿದ್ದ ವ್ಯಕ್ತಿ, ತನ್ನ ಪತ್ರಿಕೋದ್ಯಮದ ಬದುಕಿಗೂ ವಿದಾಯ ಹೇಳಿ ಮಾರ್ಕ್ಸಿಸಂ ನಿಂದ ಮಹರ್ಷಿಯೆಡೆಗೆ ನಡೆದು ಸಂತ ಪಥ ಸ್ವೀಕರಿಸಿ ಇದೀಗ ಮಹಾಕುಂಭಮೇಳದಲ್ಲಿ ನಾಗಸಾಧುಗಳ ನಡುವೆ ಮಹಾಮಂಡಲೇಶ್ವರ ಪದವಿಗೇರಿದ್ದಾರೆ..
ಈ ಪದವಿಗೇರುವ ಕೇರಳದ ಮೊದಲ ಸಂತನೆಂಬ ಗೌರವದೊಂದಿಗೆ ಈ ಪದವಿ ಬದುಕಿನ ನಿಯೋಗ ಎಂದು ಸಾಧು ಆನಂದವನಂ ಭಾರತಿ ಮಹಾಮಂಡಲೇಶ್ವರ ಪದವಿ ಪಡೆದ ಬಳಿಕ ಹೇಳಿದ್ದಾರೆ.
ದೇಶದ ಸಂತರ ಅಖಾಡಗಳಲ್ಲೇ ಅತ್ಯಂತ ಹಿರಿಯ ಮತ್ತು ಪ್ರಾಚೀನವಾದ ಜೂನ ಅಖಾಡಕ್ಕೆ ಇನ್ನು ಸಾಧು ಆನಂದವನಂ ಭಾರತಿ ಮಹಾಮಂಡಲೇಶ್ವರ್. ಭಾರತದ ಆಧ್ಯಾತ್ಮಿಕ ವೇದಜ್ಞಾನದ ಪ್ರಮುಖರಾಗಿದ್ದ ಸ್ವಾಮಿ ಕಾಶಿಕಾನಂದ ಗಿರಿ ಮಹಾರಾಜ್ ರ ಬಳಿಕ ಕೇರಳದಿಂದ ಮಹಾಮಂಡಲೇಶ್ವರ ಪದವಿಗೇರುವ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಪ್ರಯಾಗರಾಜ್ ಕುಂಭಮೇಳದ ಶಾಹಿಸ್ನಾನದಲ್ಲಿ ಇವರಿಗೆ ಮಹಾಮಂಡಲೇಶ್ವರ ಪೀಠ ನೀಡಲಾಯಿತು.
ಕಳೆದ 12ವರ್ಷಗಳಿಂದ ಜೂನ ಅಖಾಡದ ಅಂಗವಾಗಿ ಇವರು ಧರ್ಮ ಸೇವೆ ನಡೆಸುತ್ತಿದ್ದರು. ಕೇರಳದ ಕೊಟ್ಟಾರಕ್ಕರ ಅವಧೂತ ಆಶ್ರಮದ ಉತ್ತರಾಧಿಕಾರಿಯಾದ ಇವರು ಪೂರ್ವಾಶ್ರಮದಲ್ಲಿ ತ್ರಿಶೂರಿನ ಚಾಲಕ್ಕುಡಿ ನಿವಾಸಿ.
ವಿದ್ಯಾರ್ಥಿ ದೆಸೆಯಲ್ಲಿ ಪ್ರಮುಖ ಎಸ್.ಎಫ್.ಐ ಕಾರ್ಯಕರ್ತನಾಗಿ, ತ್ರಿಶೂರು ಜಿಲ್ಲಾ ಎಸ್.ಎಫ್.ಐ ಜತೆ ಕಾರ್ಯದರ್ಶಿಯಾಗಿದ್ದ ಇವರು ಆ ಬಳಿಕ ಪತ್ರಿಕೋದ್ಯಮಕ್ಕೆ ಕಾಲೂರಿದ್ದರು. ಮಲಯಾಳದ ಪ್ರಸಿದ್ದ ಪತ್ರಿಕೆಯಲ್ಲಿ ವರದಿಗಾರನಾಗಿದ್ದರು. ಕೇರಳ ಪ್ರೆಸ್ ಅಕಾಡೆಮಿಯಲ್ಲಿ ಪ್ರಥಮ ರೇಂಕ್ ಪಡೆದು ಜರ್ನಲಿಸಂ ಮಾಡಿದ್ದ ಇವರು ಮಾರ್ಕ್ಸೀಸಂ ತೊರೆದು ಮಹರ್ಷಿಯೆಡೆಗೆ ನಡೆದು ಈಗ ಮಹಾಮಂಡಲೇಶ್ವರ್ ಆದ ಜೀವನ ಯಾನದಲ್ಲಿ ರೋಚಕ ಕತೆಗಳಿವೆ.
ಆಧ್ಯಾತ್ಮವನ್ನು ಅರೆದು ಕುಡಿದು ದಾರ್ಶನಿಕತೆಯನ್ನು ಪ್ರಬಲವಾಗಿ ಮಂಡಿಸುವ, ಸನಾತನ ಭಾರತೀಯತೆಯ ಕುರಿತು ಇದಮಿತ್ಥಂ ಎಂಬಂತೆ ಮಾತನಾಡುವ ಇವರು ಸಂತ ಅಖಾಡದ ಬೌದ್ಧಿಕ ಮುಖ.
ಭಾರತದಲ್ಲಿ ವಿವಿಧ ರೀತಿಯ ಆಚಾರನುಷ್ಠಾನ ಕ್ರಮಗಳ ಸಾಧು ಸಂತರಿದ್ದಾರೆ. ಅವರವರ ಪರಂಪರೆಗೆ ಅನುಸಾರ ಅವರವರು ಬೇರೆ ಬೇರೆ ಗುರುತಿಸುವುದನ್ನು ಅಖಾಡ ಎನ್ನುತ್ತಾರೆ. ಇಂಥ ಅಖಾಡಗಳ ಮುಖಂಡತ್ವವೇ ಮಹಾಮಂಡಲೇಶ್ವರ ಎನ್ನುವ ಪದವಿ. ಕುಂಭ ಮೇಳದಲ್ಲಿ 13 ಅಂಗೀಕೃತ ಸಂತರ ಅಖಾಡಗಳಿವೆ.