- ನಿಧಿ ಅಪಹರಣ ಯತ್ನದ ಬೆನ್ನಲ್ಲೇ ಆರಿಕ್ಕಾಡಿ ಕೋಟೆಯೊಳಗೆ ಅಗ್ನಿ ಅನಾಹುತ :
- ಸಾಕ್ಷ್ಯ ನಾಶಮಾಡುವ ಕೃತ್ಯವೆಂದು ಅನುಮಾನ?
ಕುಂಬಳೆ ಆರಿಕ್ಕಾಡಿ ಕೋಟೆಯೊಳಗಿಂದ ನಿಧಿ ಅಪಹರಣ ಯತ್ನ ನಡೆದ ಅದೇ ಜಾಗದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಇದು ಸಾಕ್ಷ್ಯ ನಾಶಗೊಳಿಸುವ ಯತ್ನವೇ ಎಂದು ಸಾರ್ವಜನಿಕರು ಶಂಕಿಸಿದ್ದಾರೆ.
ಮಂಗಳವಾರ ಸಂಜೆ 6ಗಂಟೆಯ ವೇಳೆಗೆ ಕೋಟೆಯೊಳಗಿಂದ ಹೊಗೆ ಏಳುವುದನ್ನು ಗಮನಿಸಿದ ಪ್ರದೇಶವಾಸಿಗಳು ಕೂಡಲೇ ಪೋಲೀಸರಿಗೆ ತಿಳಿಸಿದರು. ಇದರಂತೆ ಉಪ್ಪಳದಿಂದ ಬಂದ ಅಗ್ನಿ ಶಾಮಕ ದಳ ಅಗ್ನಿ ಶಮನಗೈದಿತು.
ನಿಧಿ ಅಪಹರಣ ಯತ್ನ ನಡೆದ ಕೋಟೆಯ ಒಳಗಿನ ಪಾಳುಬಾವಿ
ಸೋಮವಾರ ಸಂಜೆ 4ಗಂಟೆಯ ವೇಳೆಗೆ ನಿರ್ಜನ ಪ್ರದೇಶವಾದ ಕೋಟೆಯೊಳಗಿನ ಪಾಳು ಬಾವಿಯಿಂದ ನಿಧಿ ಅಗೆದು, ಅಪಹರಣ ಯತ್ನ ನಡೆದಿತ್ತು. ಮೊಗ್ರಾಲ್ ಪುತ್ತೂರು ಗ್ರಾ ಪಂ.ಉಪಾಧ್ಯಕ್ಷನ ನೇತೃತ್ವದ ಐವರ ತಂಡ ಈ ಕೃತ್ಯ ಎಸಗಿತ್ತು. ಸ್ಥಳೀಯರ ಸಹಕಾರದಿಂದ ಇವರನ್ನು ವಶಕ್ಕೆ ಪಡೆದ ಪೋಲೀಸರು ಬಳಿಕ ಠಾಣಾ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದರು.
ಘಟನೆಯ ಮರುದಿನವೇ ಕೋಟೆಯೊಳಗೆ ಅಗ್ನಿದುರಂತ ಸಂಭವಿಸಿದ್ದು, ದಟ್ಟವಾಗಿ ಬೆಳೆದಿದ್ದ ಒಣಹುಲ್ಲು ಧಗಧಗನೆ ಹೊತ್ತಿ ಉರಿದಿವೆ. ಇದು ಘಟನೆಯ ಸಾಕ್ಷ್ಯನಾಶ ಮಾಡುವ ಕೃತ್ಯವಾಗಿರಬಹುದೇ ಎಂದು ನಾಗರಿಕರು ಶಂಕಿಸಿದ್ದಾರೆ. ನಿಧಿ ಅಪಹರಣ ಯತ್ನದ ಕುರಿತು ವಿವಿಧ ಸಂಘಟನೆಗಳಿಂದ ತನಿಖೆಗೆ ಒತ್ತಾಯ ಮೊಳಗುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಅನುಮಾನಕ್ಕೆ ಕಾರಣವಾಗೀದೆ.