- ಕುಂಭ ಮೇಳದಲ್ಲಿ ಪಾಲ್ಗೊಂಡದ್ದು ಚಾರಿತ್ರಿಕ ಸುಯೋಗ, ನಮ್ಮ ದೇಶದ ಸನಾತನ ಸಂಸ್ಕೃತಿಯ ಅರಿವಾಯಿತು ಎಂದ ಯು.ಟಿ.ಖಾದರ್
- ಯು.ಪಿ. ವಿಧಾನಸಭಾಧ್ಯಕ್ಷರ ಕರೆ ಮೇರೆಗೆ ಕುಂಭ ಮೇಳಕ್ಕೆ ಹೋದ ಖಾದರ್ ಅವರಿಂದ ಪ್ರತಿಯಾಗಿ ಊರಿನ ಉರೂಸಿಗೆ ಆಹ್ವಾನ
ಕುಂಭಮೇಳ ಎನ್ನುವುದೇ ಅದ್ಭುತ. ಅದು ಸರ್ವತ್ರ ತ್ಯಾಗದ ಉತ್ಸವ. ನಾನು ಕುಂಭಮೇಳಕ್ಕೆ ಭೇಟಿ ನೀಡಿದ್ದರಿಂದ ನಮ್ಮ ದೇಶದ ಸನಾತನ ಸಂಸ್ಕೃತಿಯ ಬಗ್ಗೆ ನನಗೆ ಹೊಸ ಅರಿವು, ಅನುಭವ ಮೂಡಿತು. ಸಾಂಸ್ಕೃತಿಕ ವಿನಿಮಯದ ಮೂಲಕವಷ್ಟೇ ನಾವು ಬೆಳೆಯಲು ಸಾಧ್ಯ ” ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ, ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.
ಉತ್ತರ ಪ್ರದೇಶದ ವಿಧಾನಸಭಾ ಅಧ್ಯಕ್ಷ ಸತೀಶ್ ಮಹಾನ್ ಅವರ ಆಹ್ವಾನದ ಮೇರೆಗೆ ಯೂ.ಟಿ.ಖಾದರ್ ಮಹಾ ಕುಂಭ ಮೇಳಕ್ಕೆ ತೆರಳಿದ್ದರು.
ಇದೊಂದು ಸಾಂಸ್ಕೃತಿಕ, ಧಾರ್ಮಿಕ ವಿನಿಮಯ. ನನ್ನನ್ನು ಕುಂಭಮೇಳಕ್ಕೆ ಆಹ್ವಾನಿಸಿದಂತೆಯೇ ನನ್ನೂರಿನ ಉರೂಸಿಗೆ ಆಗಮಿಸುವಂತೆ ಸತೀಶ್ ಮಹಾನ್ ಅವರನ್ನು ಆಹ್ವಾನಿಸುತ್ತೇನೆ. ಈ ಕುರಿತು ಅವರಿಗೆ ಆಮಂತ್ರಣ ಇತ್ತಿದ್ದೇನೆ. ಬರುತ್ತೇನೆಂದು ಅವರೂ ಒಪ್ಪಿರುವುದಾಗಿ ಖಾದರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾನು ಸರಕಾರಿ ಅಧಿಕೃತ ಆಹ್ವಾನದ ಮೇರೆಗೆ ಕುಂಭಮೇಳ ನೋಡಲು ಹೋದವನು. ಆದ್ದರಿಂದ ಕೋಟ್ಯಾಂತರ ಜನರು ಸೇರುವ ಜಾಗದಲ್ಲೂ ನನಗೆ ಉತ್ತಮ ವ್ಯವಸ್ಥೆ ದೊರಕಿದೆ. ಯಾವುದೇ ತೊಂದರೆ ಅನುಭವಿಸಿಲ್ಲ. ಅಲ್ಲಿ ವೈವಿಧ್ಯಮಯ ನಾಗಿಸಾಧುಗಳ ಸಹಿತ ಸಂತರುಗಳನ್ನು ಭೇಟಿಯಾಗುವ ಅವಕಾಶ ದೊರೆಯಿತು. ಕುಂಭಮೇಳದ ಬಗ್ಗೆ ಕೇಳಿದ್ದೇನೆಯೇ ಹೊರತು ಪ್ರತ್ಯಕ್ಷ ಅನುಭವ ಇದೇ ಮೊದಲು. ಇದೊಂದು ಚಾರಿತ್ರಿಕ ಸುಯೋಗ ಎಂದು ಯು.ಟಿ.ಖಾದರ್ ಬಣ್ಣಿಸಿದರು.