- ಆರಿಕ್ಕಾಡಿ ಕೋಟೆ ನಿಧಿ ಅಪಹರಣ ಯತ್ನ: ಪುರಾತತ್ವ ಇಲಾಖಾ ನೌಕರನಿಂದ ದೂರು
- ಗ್ರಾ.ಪಂ. ಉಪಾಧ್ಯಕ್ಷನ ಸಹಿತ ಐವರ ವಿರುದ್ಧ ಕೇಸು
ಕುಂಬಳೆ ಆರಿಕ್ಕಾಡಿ ಕೋಟೆಯ ಬಾವಿಯಿಂದ ನಿಧಿ ಅಪಹರಣ ಯತ್ನ ನಡೆಸಿದ ಪ್ರಕರಣದಲ್ಲಿ ಪುರಾತತ್ವ ಇಲಾಖೆಯ ಕೋಟೆ ಮಾರ್ಗದರ್ಶಕನ ದೂರಿನಂತೆ ಕುಂಬಳ ಪೋಲೀಸರು ಕೇಸು ದಾಖಲಿಸಿದ್ದಾರೆ
ಕೊಟೆಯ ಒಳಗೆ ಅನುಮತಿ ರಹಿತವಾಗಿ ಪ್ರವೇಶಿಸಿ ಪ್ರಾಚೀನ ಬಾವಿಯಿಂದ ನಿಧಿಯನ್ನು ಅಗೆದು ತೆಗೆಯಲು ಪ್ರಯತ್ನಸಿದ ಘಟನೆಯಲ್ಲಿ ತೊಡಗಿಸಿದ ಅಪರಾಧವನ್ನುಲ್ಲೇಖಿಸಿ ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ ಮುಜೀಬ್ ರಹ್ಮಾನ್ ಕಂಬಾರು ಸೇರಿದಂತೆ ಐವರ ತಂಡದ ವಿರುದ್ಧ ದೂರು ನೀಡಲಾಗಿದ್ದು, ಕೇಸು ದಾಖಲಾಗಿದೆ.
ಆರಿಕ್ಕಾಡಿ ಕೋಟೆಯ ಕಾವಲು ಮತ್ತು ಆಗಮಿಸುವ ಪ್ರವಾಸಿಗರ ಮಾರ್ಗದರ್ಶನಕ್ಕೆಂದು ಚೆಂಬೇರಿ ನಿವಾಸಿ ನಿಶಾಂತ್ ಎಂಬವರನ್ನು ಪುರಾತತ್ವ ಇಲಾಖೆಯ ಕೇರಳ ಘಟಕ ನೇಮಿಸಿದೆ. ಪ್ರಸ್ತುತ ಅವರ ದೂರಿನಂತೆ ಕೇಸು ದಾಖಲಿಸಲ್ಪಟ್ಟಿದೆ.
ನಿಧಿ ಅಪಹರಣದಷ್ಟೇ ಗಂಭೀರವಾದ ಅಪರಾಧ ನಿಧಿಶೋಧದ ಯತ್ನವಾಗಿದ್ದು, ಸೆರೆ ಸಿಕ್ಕಿಯೂ ಅಪರಾಧಿಗಳನ್ನು ಕೇಸು ರಹಿತವಾಗಿ ಪೋಲೀಸ್ ಠಾಣಾ ಜಾಮೀನಿನಲ್ಲಿ ಕುಂಬ್ಳೆ ಪೋಲೀಸರು ಬಿಡುಗಡೆ ಮಾಡಿದ್ದರು. ಪ್ರಸ್ತುತ ಕೇಸು ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಮರು ಬಂಧನ ನಡೆಯಲಿದೆ.