- ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಚುಕ್ಕಾಣಿ ಹಿಡಿದ ಮೊದಲ ಮಹಿಳೆಯೆಂಬ ಅಂಗೀಕಾರಗಳೊಂದಿಗೆ ಎಂ.ಎಲ್ ಅಶ್ವಿನಿಗೆ ಪಕ್ಷ ಸಾರಥ್ಯ
- ಬಿ.ಜೆ ಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಾಯಕರೆಲ್ಲರ ಐಕ್ಯದ ಬೆಂಬಲ ಘೋಷಣೆ
ಕಾಸರಗೋಡು ಜಿಲ್ಲೆಯ ಬಿಜೆಪಿ ಕಾರ್ಯಕರತರಲ್ಲಿ ಹೊಸ ಭರವಸೆ ಮೂಡಿಸುವುದರೊಂದಿಗೆ ಪಕ್ಷದ ನೂತನ ಜಿಲ್ಲಾಧ್ಯಕ್ಷೆಯಾಗಿ ಎಂ.ಎಲ್. ಅಶ್ವಿನಿ ಇಂದು ಜವಾಬ್ದಾರಿ ವಹಿಸಿ ಪದಗ್ರಹಣ ಮಾಡಿದರು. ಮಹಿಳಾ ಸಬಲತೆಯ ಸಂಕೇತವಾಗಿ ಯುವ ನಾಯಕಿಗೆ ಅಧ್ಯಕ್ಷ ಪೀಠ ನೀಡಲಾಗಿದೆ. ಈ ಮೂಲಕ ಕಾಸರಗೋಡಿನ ರಾಜಕೀಯ ಚರಿತ್ರೆಯಲ್ಲೇ ಅತಿ ಕಿರಿವಯಸ್ಸಿನ ಮಹಿಳೆಯೊಬ್ಬರು ಪಕ್ಷದ ಚುಕ್ಕಾಣಿ ಹಿಡಿದ ಇತಿಹಾಸ ನಿರ್ಮಿಸಿದರು.
ಬಿ.ಜೆ.ಪಿ. ಕಾಸರಗೋಡು ಜಿಲ್ಲಾ ಘಟಕದ ನೂತನ ಹಾಗೂ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಎಂ.ಎಲ್. ಅಶ್ವಿನಿ ಜವಾಬ್ದಾರಿ ವಹಿಸಿಕೊಂಡರು. ಅಧ್ಯಕ್ಷರಾಗಿದ್ದ ರವೀಶ್ ತಂತ್ರಿ ಕುಂಟಾರು ಪಕ್ಷದ ರಾಜ್ಯ ನಾಯಕರ ಸಮ್ಮುಖ ಅಧ್ಯಕ್ಷ ಪದವಿ ವಹಿಸಿಕೊಂಡ ಎಂ ಎಲ್.ಅಶ್ವಿನಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರ ಜತೆ ತಾನೂ ಒಬ್ಬಾಕೆ ಕಾರ್ಯಕರ್ತೆಯೇ ಹೊರತು, ಅಧ್ಯಕ್ಷ ಪದವಿ ಎಂಬುದು ಕಿರೀಟವಲ್ಲ ಎಂದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಆಂತರಿಕ ಸಂಘಟನಾ ಚುನಾವಣೆಯ ಚು.ಅಧಿಕಾರಿಯಾಗಿದ್ದ ನ್ಯಾಯವಾದಿ ಸುರೇಶ್ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ವಕ್ತಾರ ನಾರಾಯಣನ್ ನಂಬೂದಿರಿ, ಮಾಜಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಹಿರಿಯ ನಾಯಕರಾದ ಎಂ.ಸಂಜೀವ ಶೆಟ್ಟಿ, ಕೆ.ಕರುಣಾಕರನ್ ನಾಯರ್, ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವೇಲಾಯುಧನ್ ಸ್ವಾಗತಿಸಿದರು.
ಎಲ್ಲಾ ಹಿರಿ, ಕಿರಿಯ ನಾಯಕರು ನೂತನ ಅಧ್ಯಕ್ಷೆಗೆ ಬೆಂಬಲ ಘೋಷಿಸಿದರು. ಪಕ್ಷದಲ್ಲಿ ಹುದ್ದೆಗೆ ಮಹತ್ವ ಇಲ್ಲ ಎಂದೂ, ಪಕ್ಷವೇ ಕಾರ್ಯಕರ್ತರಿಗೆ ದೊಡ್ಡದೆಂದೂ ಸಾರಿದ ನಾಯಕರು ಅಶ್ವಿನಿ ಸಾರಥ್ಯಕ್ಕೆ ಕಾರ್ಯಕರ್ತರೂ ಬೆಂಬಲಿಸಬೇಕೆಂದು ನುಡಿದರು.
ಮಂಜೇಶ್ವರ ತಾಲೂಕು ವರ್ಕಾಡಿಯ ಕೊಡ್ಲಮೊಗರು ನಿವಾಸಿ ಶಶಿಧರ ಎಂಬವರ ಪತ್ನಿಯಾದ ಅಶ್ವಿನಿಯವರು ಮೂಲತಃ ಬೆಂಗಳೂರಿನವರು. ವಿವಾಹದ ಬಳಿಕ ವರ್ಕಾಡಿ ವಾಸಿಯಾದ ಇವರು 2021ರಲ್ಲಿ ರಾಜಕೀಯಕ್ಕೆ ಕಾಲೂರಿ ಬ್ಲಾಕ್ ಪಂ. ಸದಸ್ಯೆ ಆದವರು. ಪ್ರಸ್ತುತ ಮಹಿಳಾ ಮೋರ್ಛಾ ರಾಷ್ಟ್ರೀಯ ಘಟಕದ ಸದಸ್ಯೆಯಾದ ಇವರು ಕಳೆದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ರಾಷ್ಟ್ರೀಯ ಗಮನ ಸೆಳೆದಿದ್ದರು. ಪಕ್ಷದಲ್ಲಿ ಅತಿವೇಗದಿಂದ ಬೆಳೆದು ಇದೀಗ ಕಾಸರಗೋಡು ಜಿಲ್ಲಾಧ್ಯಕ್ಷೆಯಾದ ಅವರಿಗೆ ಮುಂಬರುವ ಎರಡು ಚುನಾವಣೆಗಳ ನಿರ್ವಹಣಾ ಸವಾಲುಗಳಿವೆ.