- ಮೀಂಜ: ಮದುವೆ ಸಿದ್ಧತೆಯಲ್ಲಿದ್ದ ವರ ಆತ್ಮಹತ್ಯೆ
- ಮದುವೆಗೆ ಒಂದು ವಾರವಷ್ಟೇ ಇದ್ದ ಸಂಭ್ರಮದ ಮನೆಯಲ್ಲಿ ಕಂಬನಿಯ ಕೋಡಿ
ಮದುವೆಗೆ ಇನ್ನೇನು ಕೇವಲ ಒಂದು ವಾರವಷ್ಟೇ ಉಳಿದು, ಮನೆಯವರೆಲ್ಲ ಸಂಭ್ರಮಗಳಿಂದ ಮದುವೆ ಸಿದ್ಧತೆಗಳಲ್ಲಿ ತೊಡಗಿದ್ದಾಗ ಮದುವೆಯಾಗಬೇಕಿದ್ದ ವರ ನೇಣು ಬಿಗಿದು ಆತ್ಮಹತ್ಯೆ ಗೈದ ಘಟನೆ ನಡೆದಿದೆ.
ಮಂಜೇಶ್ವರ ತಾಲೂಕಿನ ಮೀಂಜ ಪಂಚಾಯತಿನ ಐಎಚ್ ಡಿ ಪಿ ಕಾಲನಿ ನಿವಾಸಿ ಅಜಿತ್ ಕುಮಾರ್(28) ಎಂಬವರೇ ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಮುಸ್ಸಂಜೆ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಾಗಲೇ ಮರಣ ಸಂಭವಿಸಿತ್ತು. ಮೃತರು ಮಜಿಬೈಲು ಸೇವಾ ಸಹಕಾರಿ ಬೇಂಕಿನ ಉಪ್ಪಳ ಶಾಖೆಯಲ್ಲಿ ವಾಚ್ ಮೇನ್ ಆಗಿ ದುಡಿಯುತ್ತಿದ್ದರು. ಫೆ.2ರಂದು ಇವರ ವಿವಾಹ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಮನೆಯವರು ಸಿದ್ಧತೆಗಳಲ್ಲಿ ತೊಡಗಿ, ಜವುಳಿ ಸಹಿತ ಖರೀದಿಸಿದ್ದರು. ಶುಕ್ರವಾರ ಸಂಜೆ ಆತ್ಮಹತ್ಯೆ ಗೈದ ವರ ಅದಕ್ಕೂ ಮುನ್ನ ವಧುವಿನ ಜತೆ ಮಾತಾಡಿದ್ದನು ಎನ್ನಲಾಗುತ್ತಿದೆ. ಪ್ರಸ್ತುತ ಆತ್ಮಹತ್ಯೆಗೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ. ಮೃತರು ತಂದೆ, ತಾಯೀ ಸಹೋದರ,ಸಹೋದರಿಯನ್ನು ಅಗಲಿದ್ದಾರೆ. ಈ ಸಂಬಂಧ ಮಂಜೇಶ್ವರ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.