ಮೊದಲ ಬಾರಿ ಯಕ್ಷಗಾನದಲ್ಲಿ ವೇಷತೊಟ್ಟು ಕುಣಿದ ಹಿರಿಯನಟಿ! ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಕ್ಲಿಷ್ಟ ಪಾತ್ರ ಮಂಥರೆಯಾಗಿ ಕುಣಿದು ವಿಶೇಷ ಆಕರ್ಷಣೆಯಾದ ಮಾಜಿ ಸಚಿವೆ ಉಮಾಶ್ರೀ

by Narayan Chambaltimar
  • ಮೊದಲ ಬಾರಿ ಯಕ್ಷಗಾನದಲ್ಲಿ ವೇಷತೊಟ್ಟು ಕುಣಿದ ಹಿರಿಯನಟಿ!
  • ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಕ್ಲಿಷ್ಟ ಪಾತ್ರ ಮಂಥರೆಯಾಗಿ ಕುಣಿದು ವಿಶೇಷ ಆಕರ್ಷಣೆಯಾದ ಮಾಜಿ ಸಚಿವೆ ಉಮಾಶ್ರೀ

ಕನ್ನಡ ಚಿತ್ರರಂಗದ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ಪ್ರಪ್ರಥಮ ಬಾರಿಗೆ ಯಕ್ಷಗಾನದಲ್ಲಿ ವೇಷತೊಟ್ಟು ಕುಣಿದು, ಅರ್ಥ ಹೇಳಿ ಜನಮನ ರಂಜಿಸಿ ಭೇಷ್ ಎಂದು ಕರೆಸಿಕೊಂಡಿದ್ದಾರೆ.
ಜನವರಿ 17ರಂದು ಉತ್ತರಕನ್ನಡದ ಹೊನ್ನಾವರದಲ್ಲಿ ನಡೆದ ಪೆರ್ಡೂರು ಮೇಳದ “ಪಟ್ಟಾಭಿಷೇಕ” ಪ್ರಸಂಗ ಪ್ರದರ್ಶನದಲ್ಲಿ ಅವರು ಮಂಥರೆಯ ಪಾತ್ರ ತೊಟ್ಟು ವಿಶೇಷ ಆಕರ್ಷಣೆಯಾದರು.

ಯಕ್ಷಗಾನದಲ್ಲಿ ಮಂಥರೆಯ ಪಾತ್ರವು ಗಂಭೀರ ಮತ್ತು ಸವಾಲಿನಿಂದ ಕೂಡಿದ ಭಾವರಸ ಪೋಷಿತ ಪಾತ್ರ. ಇದನ್ನು ಹಿರಿಯ ಹಾಸ್ಯಗಾರರೇ ನಿರ್ವಹಿಸುವ ರೂಢಿ. ಆದರೆ ವಿಶೇಷ ಆಕರ್ಷಣೆ ಎಂಬ ನೆಲೆಯಲ್ಲಿ ಮಾಜಿ ಸಚಿವೆ ಹಾಗೂ ರಂಗಭೂಮಿ, ಸಿನಿಮಾ ಹಿನ್ನೆಲೆಯ ಉಮಾಶ್ರೀ ಅವರಿಂದ ಮಾಡಿಸಲಾಗಿದೆ.

ಹೊನ್ನಾವರದ ಸೈಂಟ್ ಅಂಥೋನಿ ಶಾಲಾ ಮೈದಾನದಲ್ಲಿ ನಡೆದ ಯಕ್ಷಗಾನವನ್ನು ಅಪ್ಪಿ ಹೆಗಡೆ ಸಾಣ್ಮನೆ ಆಯೋಜಿಸಿದ್ದರು. ಅವರು ಉಮಾಶ್ರೀ ಅವರನ್ನು ಭೇಟಿಯಾಗಿ, ಯಕ್ಷಗಾನದಲ್ಲಿ ಪಾತ್ರ ಮಾಡುವಂತೆ ಒಪ್ಪಿಸಿದ್ದರು. ಇದರಂತೆ ಬೆಂಗಳೂರಿನಲ್ಲಿ ವೇಷ ಧರಿಸಿಯೇ ಎರಡು ದಿನಗಳ ಅಭ್ಯಾಸ ಪ್ರದರ್ಶನ ನೀಡಿದ್ದ ಉಮಾಶ್ರೀ ಅವರು ರಂಗದಲ್ಲಿ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ಪದ್ಯಕ್ಕೆ ಅನಾಯಾಸ ಕುಣಿದರು. ಕೈಕೇಯಿಯ ಪಾತ್ರದಲ್ಲಿ ಹಿರಿಯ ಕಲಾವಿದ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ರಂಗ ನಿರ್ವಹಿಸಿದರು.
ರಂಗಭೂಮಿಯಲ್ಲಿ ಗಂಭೀರ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಅವರು ಸಿನಿಮಾ ನಟಿಯಾಗಿ ಜನಪ್ರಿಯರು. ಈ ಹಿಂದೆ ಸಂಸ್ಕೃತಿ ಸಚಿವೆಯಾಗಿದ್ದಾಗ ಕರಾವಳಿ ಕಡೆ ಓಡಾಡುವಾಗ ರಾತ್ರಿ ಬಯಲೊಂದರಲ್ಲಿ ಯಕ್ಷಗಾನ ಕಂಡಾಗ, ಕಾರು ನಿಲ್ಲಿಸಿ ಬಯಲಾಟದ ಪ್ರೇಕ್ಷಕಿಯಾಗಿ ಆಟ ನೋಡಿದ ಇತಿಹಾಸವೂ ಅವರಿಗಿದೆ.


[

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00