ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದಲ್ಲಿ ಮೇ.6ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ

ಗಡಿನಾಡಿನ ಚೌಗ್ರಾಮ ಕ್ಷೇತ್ರದಲ್ಲಿ 12ವರ್ಷದ ಬಳಿಕ ಮತ್ತೆ ಸುಬ್ರಾಯ ದೇವರಿಗೆ ಬ್ರಹ್ಮಕಲಶ

by Narayan Chambaltimar
  • ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದಲ್ಲಿ ಮೇ.6ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ
  • ಗಡಿನಾಡಿನ ಚೌಗ್ರಾಮ ಕ್ಷೇತ್ರದಲ್ಲಿ 12ವರ್ಷದ ಬಳಿಕ ಮತ್ತೆ ಸುಬ್ರಾಯ ದೇವರಿಗೆ ಬ್ರಹ್ಮಕಲಶ

ಕಾಸರಗೋಡು ಜಿಲ್ಲೆ ಮತ್ತು ದ.ಕ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಎಣ್ಮಕಜೆ ಪಂಚಾಯತಿನ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ 2025 ಮೇ 6ರಿಂದ 11ರ ತನಕ ಆರು ದಿನಗಳ ಸಂಭ್ರಮದೊಂದಿಗೆ ಶ್ರೀ ಸುಬ್ರಾಯ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ. ಕಾಟುಕುಕ್ಕೆ, ಎಣ್ಮಕಜೆ, ಪಡ್ರೆ, ಮೈರೆ ಎಂಬೀ ನಾಲ್ಕುಗ್ರಾಮಗಳ ಚೌಗ್ರಾಮ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ಕಾಟುಕುಕ್ಕೆ ದೇವಳದಲ್ಲಿ ಪ್ರಸ್ತುತ ಗರ್ಭಗುಡಿಯ ದೇವರ ಪೀಠ ಮತ್ತು ಮೂರ್ತಿಯ ನಡುವಣ ಬಂಧ ಸಡಿಲಾಗಿ ಬಿಟ್ಟಿದ್ದು, ಈ ಕಾರಣದಿಂದ ಕ್ಷೇತ್ರ ತಂತ್ರಿಗಳ ಅನುಜ್ಞೆಯಂತೆ ಅಷ್ಟಬಂಧ ಬ್ರಹ್ಮಕಲಶಕ್ಕೆ ದಿನ ನಿರ್ಣಯಿಸಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಕ್ಷೇತ್ರ ಟ್ರಸ್ಟಿ ಮಂಡಳಿ ಪದಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.

ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಈ ಹಿಂದೆ 2013ರಲ್ಲಿ ಬ್ರಹ್ಮಕಲಶ ನಡೆದಿತ್ತು. ಅನಂತರ ಇದೀಗ 12ವರ್ಷಗಳ ಘಟ್ಟ ಪೂರೈಸಿದ್ದು ಇದೇ ಸಂದರ್ಭದಲ್ಲಿ ತಂತ್ರಿಗಳು ನೀಡಿದ ಅನುಜ್ಞೆಯಂತೆ ಆಡಳಿತ ಮಂಡಳಿ ಹಾಗೂ ಚೌಗ್ರಾಮಸ್ಥರು ಸೇರಿ ಬ್ರಹ್ಮಕಲಶೋತ್ಸವಕ್ಕೆ ಸಮಿತಿ ರೂಪಿಸಿದ್ದಾರೆ. ಇದರ ಉಪಸಮಿತಿ ಮತ್ತು ಪ್ರಾದೇಶಿಕ ಸಮಿತಿ ರಚನೆ ಶೀಘ್ರವೇ ನಡೆಯಲಿದೆಯೆಂದು ಕ್ಷೇತ್ರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಗಡಿ ಪ್ರದೇಶದ ಕೇರಳ -ಕರ್ನಾಟಕದ ಜನತೆಗೆ “ತೆಂಕಾಯಿ ಕುಕ್ಕೆ” ಎಂದೇ ಪರಿಗಣಿತವಾದ ಶ್ರೀಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶದ ಮೂಲಕ ದೇವರ ಪುನರ್ ಪ್ರತಿಷ್ಠಾ ಧಾರ್ಮಿಕ ವಿಧಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಉಳಿದಂತೆ ನೂತನ ಕಛೇರಿ ಮತ್ತು ಸಣ್ಣಪುಟ್ಟ ಕಾಮಗಾರಿ ನಡೆಯಲಿದೆ. ಸುಮಾರು 50ಲಕ್ಷದ ಅಂದಾಜು ವೆಚ್ಚದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಚೌಗ್ರಾಮದ ಭಕ್ತಾದಿಗಳ ಸಹಕಾರವನ್ನು ಸಮಿತಿ ಪ್ರತಿನಿಧಿಗಳು ಕೋರಿದ್ದಾರೆ.

1975ರಲ್ಲಿ ನಡೆದ ಪುನರ್ ನವೀಕರಣ ಬ್ರಹ್ಮಕಲಶದ ಬಳಿಕ ಹಂತ ಹಂತವಾಗಿ ಕ್ಷೇತ್ರ ನವೀಕರಣ ಗೊಂಡಿದ್ದು, ಕಳೆದ ವರ್ಷ ದಾನಿಗಳ ನೆರವಿನಿಂದ ಶ್ರೀ ದೇವರಿಗೆ ರಥ ಸಮರ್ಪಣೆಯಾಗಿತ್ತು. ಪ್ರಸ್ತುತ ಗಡಿನಾಡ ಗಡಿಯಲ್ಲಿದ್ದು ಗಡಿದಾಟಿದ ಪ್ರಚಾರಗಳೊಂದಿಗೆ ಶ್ರೀ ಕ್ಷೇತ್ರವು ವಿಶೇಷ ಆಚರಣೆ, ಆರಾಧನಾ ವೈಶಿಷ್ಠ್ಯಗಳೊಂದಿಗೆ ಭಕ್ತರನ್ನು ಪೊರೆಯುತ್ತಿದೆ. 2025ರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೂಲಕ ಶ್ರೀಕ್ಷೇತ್ರದಲ್ಲಿ ಆಧುನಿಕ ರೀತಿಯ ಸುಸಜ್ಜಿತ ಸೇವಾ ಕೌಂಟರ್ ಮತ್ತು ಕಛೇರಿಯೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದೆಯೆಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ವಿವರಿಸಲು ಜ.17ರಂದು ಪೂರ್ವಾಹ್ನ ಕ್ಷೇತ್ರಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ದೇವಳದ ಆಡಳಿತ ಮೊಕ್ತೇಸರ ತಾರಾನಾಥ ರೈ , ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ, ಸಾತ್ವಿಕ್ ಖಂಡೇರಿ, ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ ಉಪಸ್ಥಿತರಿದ್ದರು.

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00