- ಸರಕಾರದ ನಿರ್ಲಕ್ಯದಿಂದ ನೆನೆಗುದಿಗೆ ಬಿದ್ದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಯೋಜನೆ : ಪುನರ್ ನಿರ್ಮಾಣಕ್ಕೆ ತಾಲೂಕು ಅದಾಲತ್ ನಲ್ಲಿ ಕುಂಬಳೆ ಕಾಂಗ್ರೆಸ್ ಮಂಡಲಾಧ್ಯಕ್ಷ ರವಿ ಪೂಜಾರಿ ಒತ್ತಾಯ
ತೆಂಕಣ ಯಕ್ಷಗಾನದ ತವರೂರು ಕುಂಬಳೆ ಕೇಂದ್ರೀಕರಿಸಿ ಯಕ್ಷಗಾನದ ಅಭ್ಯುದಯ ಮತ್ತು ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ಸ್ಮಾರಕ ರೂಪದಲ್ಲಿ ಸರಕಾರ ನಿರ್ಮಿಸಿದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಎಂಬ ಕಟ್ಟಡ ಪರಿಪೂರ್ಣವಾಗದೇ ಶೋಚನೀಯ ಸ್ಥಿತಿಯಲ್ಲಿದ್ದು, ಅದನ್ನು ಯೋಗ್ಯ ರೀತಿಯಲ್ಲಿ ಪೂರ್ಣಗೊಳಿಸಿ ಯಕ್ಷಗಾನ ಕಲಾ ಚಟುವಟಿಕೆ ನಡೆಸಬೇಕೆಂದು ಕಾಸರಗೋಡು ತಾಲೂಕು ಅದಾಲತ್ ಮೂಲಕ ಕಾಂಗ್ರೆಸ್ ಕುಂಬಳೆ ಮಂಡಲಾಧ್ಯಕ್ಷ ರವಿ ಪೂಜಾರಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಯಕ್ಷಗಾನದ ತವರೂರು ಎನಿಸಿಕೊಂಡ ನಾಡಿನಲ್ಲಿ ಯಕ್ಷಗಾನಾಚಾರ್ಯನ ಹೆಸರಲ್ಲಿ ಕಲಾಕ್ಷೇತ್ರ ನಿರ್ಮಿಸಲು ಹೊರಟು, ಅದು ಪೂರ್ತೀಕರಿಸದೇ ನೆನೆಗುದಿಗೆ ಬಿದ್ದು ಅನಾಥವಾಗಿರುವುದು ಯಕ್ಷಗಾನ ಕಲಾವಿದರ, ಕಲಾಭಿಮಾನಿಗಳ ಪ್ರತಿಭಟನೆಗೆ, ಆಕ್ರೋಶಕ್ಕೆ ಕಾರಣವಾಗಿದೆ. ಇದು ಈ ನಾಡಿನ ಮಣ್ಣಿನ ಕಲೆಗೆ ಮಾಡುವ ಅವಮಾನ. ಆದ್ದರಿಂದ ಸರಕಾರ ಆರಂಭಿಸಿದ ಯೋಜನೆ ಪೂರ್ಣಗೊಳಿಸಿ, ಯಕ್ಷಗಾನ ಚಟುವಟಿಕೆ ನಡೆಸಬೇಕೆಂದು ಅದಾಲತ್ ನಲ್ಲಿ ಆನ್ಲೈನ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ರವಿ ಪೂಜಾರಿ ಒತ್ತಾಯಿಸಿದ್ದಾರೆ.
ಯಕ್ಷಗಾನ ತುಳುನಾಡಿನ ಮಣ್ಣಿನಕಲೆಯಾಗಿದೆ. ಸಾವಿರಾರು ಮಂದಿ ಅದನ್ನು ಅಭಿಮಾನದಿಂದ ಆರಾಧಿಸುತ್ತಾರೆ. ಆದರೆ ಕೇರಳ ಸರಕಾರ ಕಲೆಗೂ, ಕಲೆಯ ಕುಲಪತಿಯಾದ ಪಾರ್ತಿಸುಬ್ಬನಿಗೂ ನಿರ್ಲಕ್ಷ್ಯ ಧೋರಣೆಯಿಂದ ಅವಮಾನಿಸುತ್ತಿದೆ. ನೆನೆಗುದಿಗೆ ಬಿದ್ದ ಯೋಜನೆಯ ಪುನರ್ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.