- ಜ.19 ರಂದು ಚೆನ್ನಂಗೋಡಿನಲ್ಲಿ ಬಣ್ಣದಜ್ಜನ ಸ್ಮೃತಿಯಾನ ಉದ್ಘಾಟನೆ
- ತೆಂಕಣದ ಬಣ್ಣದ ದೈತ್ಯ ಕಲಾವಿದನನ್ನು ಹೊಸ ಪೀಳಿಗೆಗೆ ಪರಿಚಯಿಸಿ ಸ್ಮೃತಿ ಹಸಿರಾಗಿಡಲು ಅಭಿಯಾನ
ಸರಿಸುಮಾರು ಏಳು ದಶಕಗಳ ಕಾಲ ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿ ತನ್ನ ಅದ್ಭುತ ಬಣ್ಣದ ವೇಷಗಳಿಂದ ಮಿಂಚಿದ ಶ್ರೀಯುತ ಬಣ್ಣದ ಮಹಾಲಿಂಗ ಸಂಪಾಜೆಯವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ರಿ. ಪುತ್ತೂರು ಸಂಸ್ಥೆಯು ಇದೀಗ ಬಣ್ಣದಜ್ಜನ ಸ್ಮೃತಿ ಯಾನ – ಬಣ್ಣದ ಮಹಾಲಿಂಗರವರ ನೆನಪಿನಲ್ಲೊಂದು ಯಕ್ಷಪಯಣ ಎಂಬ ಸರಣಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಜನವರಿ 19 ರಂದು ಅಪರಾಹ್ಣ ಗಂಟೆ 2.30ಕ್ಕೆ ಬಣ್ಣದ ಮಹಾಲಿಂಗರ ಹುಟ್ಟೂರು ಕಾಸರಗೋಡು ಜಿಲ್ಲೆಯ ಕಾರಡ್ಕ ಸಮೀಪದ ಚೆನ್ನಂಗೋಡಿನ ಯಕ್ಷಗಾನ ಕಲಾವಿದ ದಿವಂಗತ ಶಂಕರ ಪಾಟಾಳಿಯವರ ಮನೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯು ನೆರವೇರಲಿದೆ. ತನ್ಮೂಲಕ ಬಣ್ಣದ ಇತಿಹಾಸದ ದೈತ್ಯ ಕಲಾವಿದನ ಸ್ಮೃತಿಯಾನದ ಅಭಿಯಾನಕ್ಕೆ ಚಾಲನೆಯಾಗಲಿದೆ.
ತೆಂಕುತಿಟ್ಟು ಯಕ್ಷರಂಗದ ಮೇರು ಕಲಾವಿದ ಶ್ರೀ ಬಣ್ಣದ ಮಹಾಲಿಂಗರ ಸಾಧನೆಯನ್ನು ಮೆಲುಕುಹಾಕುವುದರೊಂದಿಗೆ ನವತಲೆಮಾರಿಗೆ ದಾಟಿಸುವ ಮಹತ್ತರವಾದ ಆಶಯವನ್ನಿರಿಸಿಕೊಂಡು ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಶ್ರೀಮತಿ ಸೀತಾ ಚೆನ್ನಂಗೋಡು ಉದ್ಘಾಟಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರು ಅಧ್ಯಕ್ಷತೆಯನ್ನು ವಹಿಸುವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಯಕ್ಷಗಾನ ಪೋಷಕರಾದ ಶ್ರೀ ಸುಧೀರ್ ಕುಮಾರ್ ರೈ ಮುಳ್ಳೇರಿಯ ಬಣ್ಣದ ಮಹಾಲಿಂಗರ ಸಂಸ್ಮರಣೆಯನ್ನು ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರೂ ಪ್ರಸಂಗಕರ್ತರೂ ಆದ ಶ್ರೀ ಎ. ಜಿ. ನಾಯರ್ ರವರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಹಿರಿಯ ಯಕ್ಷಗಾನ ಕಲಾವಿದರು ಮತ್ತು ಗುರುಗಳಾದ ಶ್ರೀ ಜಯರಾಮ ಪಾಟಾಳಿ ಪಡುಮಲೆಯವರು ಅಭಿನಂದನ ಭಾಷಣ ಮಾಡಲಿರುವರು. ನಿವೃತ್ತ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಮಾಸ್ಟರ್ ಪುಂಡಿಕಾಯಿಯವರು ಮುಖ್ಯ ಅತಿಥಿಗಳಾಗಿರುವ ಕಾರ್ಯಕ್ರಮದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಸಂಚಾಲಕರಾದ ತಿಮ್ಮಪ್ಪ ಪಟ್ಟೆ ಮತ್ತು ಬಣ್ಣದ ಮಹಾಲಿಂಗ ಸ್ಮೃತಿಯಾನದ ಸಂಚಾಲಕರೂ ನಿವೃತ್ತ ಯೋಧರೂ ಆದ ಸುಬ್ಬಪ್ಪ ಪಟ್ಟೆಯವರು ಶುಭಾಶಂಸನೆಯನ್ನು ಮಾಡಲಿರುವರು. ಯಕ್ಷಗಾನ ಪೂರ್ವಸೂರಿಗಳ ಸ್ಮರಣೆಯ ಈ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಎಲ್ಲಾ ಕಲಾಭಿಮಾನಿಗಳೂ ಭಾಗವಹಿಸಬೇಕೆಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯವರಾದ ನಾರಾಯಣ ದೇಲಂಪಾಡಿಯವರು ವಿನಂತಿಸಿರುತ್ತಾರೆ.