- ಕೇರಳಕ್ಕೆ ತೃಣಮೂಲ ಕಾಂಗ್ರೆಸ್ ಪ್ರವೇಶ : ನಿಲಂಬೂರ್ ಶಾಸಕ ರಾಜೀನಾಮೆ
ತಿರುವನಂತಪುರ: ಪಕ್ಷೇತರ ಅಭ್ಯರ್ಥಿಯಾಗಿ ಎಡರಂಗದ ಬೆಂಬಲದಿಂದ ಸ್ಪರ್ಧಿಸಿ ಗೆದ್ದ ಕೇರಳದ ನಿಲಂಬೂರ್,ಶಾಸಕ ಪಿ.ಅನ್ವರ್ ಶಾಸಕ ಸ್ಥಾನಕ್ಕಿಂದು ರಾಜೀನಾಮೆ ನೀಡಿದರು. ಆಡಳಿತಾರೂಢ ಎಡರಂಗದ ವಿರುದ್ಧ ಬಂಡಾಯ ಎದ್ದಿದ್ದ ಅವರು ಇನ್ನು ಮುಂದೆ ತಾನು ತೃಣಮೂಲ ಕಾಂಗ್ರೆಸ್ಸಿನ ಭಾಗವೆಂದೂ, ನಾಯಕಿ ಮಮತಾ ಬ್ಯಾನರ್ಜಿ ಸಲಹೆಯಂತೆ ರಾಜೀನಾಮೆ ಸಲ್ಲಿಸಿದ್ದು, ತೆರವಾದ ನಿಲಂಬೂರಿನಲ್ಲಿ ಮರಳಿ ನಾನು ಸ್ಪರ್ಧಿಸಲಾರೆ ಎಂದು ಘೋಷಿಸಿದ್ದಾರೆ.
ಕಳೆದ 6ತಿಂಗಳುಗಳಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸರಕಾರದ ವಿರುದ್ದ ಬಂಡೆದ್ದಿದ್ದ ತನ್ನ ಹೋರಾಟ ಮುಂದುವರಿಯಲಿದೆ ಎಂದವರು ಘೋಷಿಸಿದ್ದಾರೆ. 2016 ಮತ್ತು 2021ರಲ್ಲಿ ಎಡರಂಗದ ಬೆಂಬಲದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಪಿ.ವಿ.ಅನ್ವರ್ ಶಾಸಕನಾಗಿದ್ದರು. ಜನಪರವಾದ ತನ್ನ ಹೋರಾಟಕ್ಕೆ ಸರಕಾರದ ಬೆಂಬಲ ಸಿಗದಿರುವ ಕಾರಣ ತಾನು ಸರಕಾರದ ವಿರುದ್ದವೇ ದನಿಎತ್ತಬೇಕಾಯಿತೆಂದು ಅನ್ವರ್ ತಿಳಿಸಿದ್ದಾರೆ.
ಪಿ ವಿ. ಅನ್ವರ್ ರಾಜೀನಾಮೆ ನೀಡಿ ತೃಣಮೂಲ್ ಕಾಂಗ್ರೆಸ್ಸಿನ ಭಾಗವಾಗುವುದರೊಂದಿಗೆ ಉತ್ತರ ಭಾರತದ ಪ್ರಬಲ ರಾಜಕೀಯ ಪಕ್ಷ ಕೇರಳದ ಮೂಲಕ ದಕ್ಷಿಣಕ್ಕೆ ಕಾಲೂರಿದಂತಾಗಿದೆ. ಎಡ, ಬಲ ರಂಗಗಳ ನಡುವೆ ತೃಣಮೂಲ ಕಾಂಗ್ರೆಸ್ ಕೇರಳದ ರಾಜಕೀಯದಲ್ಲಿ ಅಸ್ತಿತ್ವ ಪ್ರಕಟಿಸಿದರೆ ಮಾತ್ರವೇ ಅನ್ವರ್ ರಾಜಕೀಯ ಭವಿಷ್ಯ ಚಿಗುರಲಿದೆ.












