ಶುಚಿತ್ವದ ಮಹತ್ಕಾರ್ಯದ ಜೊತೆಗೆ ಅಲ್ಲಲ್ಲಿ ಬೆಂಕಿ ಹಚ್ಚದಿದ್ದರೆ ಸಮಾಧಾನವೇ ಸಿಕ್ಕದಂತಾಗಿದೆ.ಮಾಲಿನ್ಯ ಸಂಗ್ರಹವನ್ನು ಬೂದಿ ಮಾಡದಿದ್ದರೆ ನಿದ್ದೆಯೇ ಬರದಂತಾಗಿದೆ.ಉಸಿರಾಟದ ಶುಧ್ಧವಾಯುವನ್ನು ಮಲಿನ ಮಾಡುತ್ತೇವೆ ಎಂಬುವುದು ತಿಳಿದಿದ್ದರೂ ಉರಿಸುವುದೇ ನಮ್ಮ ಕಾಯಕವಾಗಿದೆ.!
ಸ್ವಚ್ಛತೆ ಮಾಡೋಣ ಆದರೆ,ಪ್ಲೀಸ್ ಉರಿಸದಿರೋಣ..
ಶಾಲೆಯಿಂದ ಹಿಂತಿರುಗುತ್ತಿದ್ದೆ.ಮನೆಗೆ ತಲಪುವ ಅನತಿ ದೂರದಲ್ಲಿ ಪರಿಚಯದ ಹುಡುಗನೊಬ್ಬ ಹಸಿ ಮಡಲನ್ನು ಉಪಯೋಗಿಸಿ ಬೆಂಕಿ ನಂದಿಸುತ್ತಿದ್ದ.ಬೈಕ್ ನಿಲ್ಲಿಸಿದೆ.”ಬೆಂಕಿ ಕೊಟ್ಟದ್ದು ಯಾರು?” ಎಂದು ಕೇಳಲು ‘ನಾನೇ’ಎಂದ.ಯಾಕೆ? ಎಂದು ಮರುಪ್ರಶ್ನಿಸಿದೆ.’ಸುಮ್ಮನೆ’ಎಂಬ ಉತ್ತರ ಬಂತು.”ಗಿಡಗಂಟಿಗಳಿಗೆ ಬೆಂಕಿ ಕೊಟ್ಟು ನಿನಗೇನು ಲಭಿಸಿತು ಲಾಭ? ನೋಡು ಆ ದಟ್ಟವಾದ ಹೊಗೆ,ಆ ಜ್ವಾಲೆ.” ಎಂದು ಏರು ಧ್ವನಿಯಲ್ಲಿ ಹೇಳಿದೆ.ಸುಮ್ಮನಾದ.ಉಚಿತವಾಗಿ ಲಭ್ಯವಾದ ಹೊಗೆಯನ್ನು ಸೇವಿಸುತ್ತಾ,ನನ್ನನ್ನೇ ದಿಟ್ಟಿಸಿ ನೋಡಿದ.ತಾನೇ ಹಚ್ಚಿದ ಬೆಂಕಿಯನ್ನು ಅಷ್ಟೇ ವೇಗವಾಗಿ ನಂದಿಸಲು ಮುಂದಾದ.!
ಅಲ್ಲೊಂದು ಶ್ರಮದಾನ ನಡೆಯುತ್ತಿತ್ತು.ರಸ್ತೆ ಬದಿಯ ಸಸ್ಯ-ಹುಲ್ಲು ವೈವಿಧ್ಯವನ್ನು ಸವರಿಕೊಂಡು ಕಾಲುದಾರಿಯನ್ನು ಕ್ಲೀನ್ ಮಾಡುವ ದೇಶ ಸೇವೆಯದು.ಊರ ಹತ್ತು ಸಮಸ್ತರು ಸೇರಿ ನಡೆಸುವ ಆ ಬೃಹತ್ ಅಭಿಯಾನದಲ್ಲಿ ಸಿಕ್ಕಿದ ಜೈವ ಮಾಲಿನ್ಯವನ್ನು ಹತ್ತಿರದ ಮೈದಾನದ ಬದಿಯ ಹೊಂಡದಲ್ಲಿ ರಾಶಿ ಹಾಕಲಾಯಿತು.ಅತ್ಯುತ್ತಮ ಸೇವೆ ಸಲ್ಲಿಸಿ ಪರಸ್ಪರ ಕುಶಲೋಪರಿಗಳೊಂದಿಗೆ ಸಂಜೆಯ ಚಾ ತಿಂಡಿ ಮುಗಿಸಿ ಸ್ವಯಂ ಸೇವಕರು ಹಿಂತಿರುಗಿದ ವೇಳೆಯದು.ನಾಯಕನೊಬ್ಬ ಮಾಲಿನ್ಯ ರಾಶಿಗೆ ಬೆಂಕಿ ಕೊಟ್ಟು ಹೊರ ನಡೆದ.ಹಸಿ ಕಸ ಉರಿಯಲು ಆರಂಭಿಸಿತು.ದಟ್ಟವಾದ ಹೊಗೆ ಮೈದಾನವನ್ನು ಶೃಂಗರಿಸಿತು.!ಇನ್ನೂ ಶ್ವಾಸಕೋಶದ ಬೆಳವಣಿಗೆ ಪೂರ್ತಿಯಾಗದ ಪುಟಾಣಿ ಮಕ್ಕಳು ಸ್ವಚ್ಛತೆಯ ಫಲವನ್ನು ಉಸಿರಾಡುತ್ತಾ ಆಟ ನಿಲ್ಲಿಸಿ ಮನೆಯತ್ತ ತೆರಳಿದರು!ಯುವ ಸಮುದಾಯ ತಮಗೇನೂ ಸಂಭವಿಸದು ಎಂದು ನಟಿಸಿ ಕೆಮ್ಮುತ್ತ,ಸೀನುತ್ತಾ ಆಟ ಮುಂದುವರಿಸಿತು.!
ಭೂಮಿಯ ತಾಪಮಾನ ದಿನಕಳೆದಂತೆ ಹೆಚ್ಚುತ್ತಿದೆ. ವಾತಾವರಣವನ್ನು ಸೇರಿಕೊಳ್ಳುವ ಕಾರ್ಬನಿನ ಪ್ರಮಾಣ ಮಿತಿ ಮೀರುತ್ತಿದೆ. ಉಸಿರಾಟದ ಶುಧ್ಧ ಗಾಳಿಯ ಲಭ್ಯತೆ ಇಲ್ಲದಾಗುತ್ತಿದೆ. ಹೀಗಿದ್ದರೂ
ಜೈವ ಮಾಲಿನ್ಯದ ಹಸಿ ಕಸ,ಒಣಕಸ,ತರಗಲೆ ಮುಂತಾದವುಗಳನ್ನು ಸಿಕ್ಕಾಪಟ್ಟೆ ಉರಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉರಿಸಿದರೆ ಕಾರ್ಬನ್ ಮೊನೋಕ್ಸೈಡ್ ವಾತಾವರಣವನ್ನು ಸೇರಿಕೊಳ್ಳುತ್ತದೆ ಎಂಬ ಜ್ಞಾನ ನಮಗಿದೆ. ಆದರೂ,ಶುಚಿತ್ವದ ನೆಪ ಹೇಳಿ ಬೆಂಕಿ ಕಡ್ಡಿ ಗೀರಿ ಕಸವನ್ನು ಬೂದಿ ಮಾಡದಿದ್ದರೆ ನಮಗೆ ಸಮಾಧಾನವೇ ಸಿಗದು.! ಇನ್ನೂ ಮುಂದುವರಿದು, ಯಾರಿಗೂ ಕಾಣಬಾರದೆಂದು ಕಸದ ರಾಶಿಗೆ ತಡರಾತ್ರಿ ಬೆಂಕಿ ಕೊಡುವ ಶುಚಿತ್ವ ಪ್ರೀತಿಯ ಜಾಣರಿದ್ದಾರೆ.ಆದರೆ,ಅಲ್ಲಿ ಉತ್ಪತ್ತಿಯಾಗುವ ವಿಷಭರಿತ ಹೊಗೆಯನ್ನು ನಮ್ಮ ಮಕ್ಕಳು,ನೆರೆಮನೆಯವರು,ನೆಂಟರು ಉಸಿರಾಡುತ್ತಾ ಶ್ವಾಸಕೋಶದ ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂಬುವುದು ತಿಳಿದು ಬರುವಾಗ ನಾವೆಲ್ಲರೂ ರೋಗಿಗಳಾಗಿ ನರಳಾಟದ ಆಯುಷ್ಯದಲ್ಲಿರುತ್ತೇವೆ.
ಅಂಗಳವನ್ನು ಗುಡಿಸಿ ಸಿಕ್ಕಿದ ತರಗಲೆ ಸಂಗ್ರಹಕ್ಕೆ ಪ್ರತಿ ದಿನ ಬೆಳಗ್ಗೆ ಬೆಂಕಿ ಕೊಟ್ಟು ಹೊಗೆಯನ್ನು ಆಸ್ವಾದಿಸಿ ಉಸಿರಾಡುವವರ ಸಂಖ್ಯೆ ದ್ವಿಗುಣವಾಗುತ್ತಿದೆ.ಮನೆ ಮುಂದಿರುವ ಕಾಲು ದಾರಿಯಲ್ಲಿ ಬೆಳೆದಿರುವ ವಿದೇಶೀ ಕಳೆ ಗಿಡಗಳನ್ನು ಸವರದೆ ಅಲ್ಲಿಗೇ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟು ಹೊಗೆಯನ್ನು ಸೇವಿಸುವ ವಿದ್ಯಾವಂತರೂ ಧಾರಾಳವಿದ್ದಾರೆ. ಮಾಲಿನ್ಯವನ್ನು ರಾಶಿ ಹಾಕಿ ಒಂದೇ ಸಮನೆ ಬೆಂಕಿ ಉರಿಸಿಕೊಂಡು ಅಗ್ನಿಜ್ವಾಲೆಯನ್ನು ಕಣ್ತುಂಬಿಸಿ ಕಾಲಹರಣ ಮಾಡುವ ಜನರಿಗೂ ಕೊರತೆಯೇನಿಲ್ಲ.
ಸುಟ್ಟರೆ ಹೊಗೆಯಾಗಿ ವಿಷವಾಗುವೆ! ಕೊಳೆಸಿದರೆ ಗೊಬ್ಬರವಾಗಿ ಅಮೃತವಾಗುವೆ.!! ಎಂಬ ಸಂದೇಶವನ್ನು ಸಾರುವ ಜೊತೆಗೆ ನಾವು ಕಸವನ್ನು ಉರಿಸದಂತೆ ಅತೀವ ಜಾಗೃತೆ ವಹಿಬೇಕಿದೆ. ಭೂಮಿ ತಾಯಿ ತೀವ್ರವಾದ ಜ್ವರಕ್ಕೆ ತುತ್ತಾಗುವುದನ್ನು ತಪ್ಪಿಸಲೇಬೇಕಿದೆ.
- ಜೈವಿಕ ಗೊಬ್ಬರವೂ ಹರಿತ (ಹಸಿರು) ಸೇನೆಯೂ
- ಮಾಲಿನ್ಯವನ್ನು ಸಂಪನ್ಮೂಲ ವನ್ನಾಗಿ ಬದಲಾಯಿಸುವ ಕಾಲವಿದು. ಇದಕ್ಕಾಗಿಯೇ ಹಲವಾರು ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಮುಖ್ಯವಾಗಿ ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಹಸಿರು ಸೇನೆಯ (ಮಲಯಾಳದಲ್ಲಿ ಹರಿತಸೇನೆ) ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.ಮನೆ,ಮಠ,ಅಂಗಡಿ,ವಿದ್ಯಾಮಂದಿರಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಾ ಸಾಮರ್ಥ್ಯ ದಿನಕಳೆದಂತೆ ವೈಜ್ಞಾನಿಕವಾಗಿ ಬದಲಾಗುತ್ತಿದೆ.ಇದರಿಂದ ರಸ್ತೆ ಬದಿಯ ಮಾಲಿನ್ಯ ರಾಶಿ ಗುಂಪೆಯಾಗುತ್ತಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ.
- ನಮ್ಮ ನಿಮ್ಮ ಮನೆಯ ಆಸುಪಾಸು,ರಸ್ತೆಯ ಇಕ್ಕಡೆಗಳಲ್ಲಿ ಬೆಳೆದು ನಿಂತಿಕೊಂಡಿರುವ ಇದೀಗ ಕ್ರಮೇಣ ಒಣಗಿ ಬರುತ್ತಿರುವ ಗಿಡ-ಗಂಟಿ,ಸಸಿ-ಹುಲ್ಲಿಗೆ ಬೆಂಕಿ ನೀಡುವವರನ್ನು ಎಚ್ಚರಿಸುವ ಕೆಲಸ ಪ್ರತಿಯೊಬ್ಬ ನಾಗರಿಕನಿಂದಲೂ ನಡೆಯಬೇಕಿದೆ. ಶುಚಿತ್ವದ ಪರಿಶುಧ್ಧ ಕೆಲಸದಲ್ಲಿ ಹೊಗೆ ಎಬ್ಬಿಸಿ,ತಾಪಮಾನ ಹೆಚ್ಚಿಸಲು ಕಾರಣೀಭೂತರಾಗುವವರ ಜತೆ ಖಾರವಾಗಿ ವರ್ತಿಸಬೇಕಿದೆ. ಬೆಂಕಿ ನೀಡುವ ಬದಾಲಾಗಿ ಸಂಗ್ರಹಿಸಿದ ಜೈವ ಮಾಲಿನ್ಯವನ್ನು ಮರದ ಸುತ್ತ ಮುತ್ತವೋ,ತೆಂಗಿನ,ಕಂಗಿನ ಬುಡದಲ್ಲೋ ನೀಟಾಗಿ ಬಿಸಾಡುವುದರೊಂದಿಗೆ ಮಾಲಿನ್ಯವು ಗೊಬ್ಬರವನ್ನಾಗಿಸುವ ಕೆಲಸಕ್ಕೆ ವೇಗ ಸಿಕ್ಕಬೇಕಿದೆ. ಇದಕ್ಕಾಗಿ ಅನೇಕ ಸೂಕ್ಷ್ಮ ಜೀವಿಗಳ ಸೇವೆಯೂ ನಮಗೆ ಲಭ್ಯವಾಗುತ್ತಿದೆ.
- ಮನೆಯಂಗಳದ ತರಗೆಲೆಗಳು ಅತ್ಯಪೂರ್ವ ಜೈವಗೊಬ್ಬರ ಎನ್ನುವದನ್ನು ಬೆಂಕಿ ಹಾಕುವವರಿಗೆ ಮನನ ಮಾಡುವ ಮಹಾತ್ಕಾರ್ಯದಲ್ಲೂ ಸ್ವಚ್ಛತಾ ಸ್ವಯಂ ಸೇವಕರ ಪಾತ್ರ ಹಿರಿದಾಗಿದೆ. ಶುಚಿತ್ವದ ಸಂದರ್ಭಗಳಲ್ಲಿ ಲೈಟರ್ ಉರಿಸಿ ಬೆಂಕಿ ನೀಡುವ, ಅಲ್ಲಿಂದೇಳುವ ವಿಷಕಾರಿ ಹೊಗೆಯನ್ನು ಸೇವಿಸುವ ಪರಿಪಾಠಕ್ಕೂ ಕಡಿವಾಣ ಬೀಳಬೇಕಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನು ಜ್ಯಾರಿಯಾಗುವುದಕ್ಕೆ ರಾಷ್ಟ್ರ ಮಟ್ಟದಲ್ಲಿ ಕೆಲವು ಸ್ವಯಂ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂಬುವುದು ತೃಪ್ತಿ ತರುತ್ತಿದೆ.