ಮಕರ ಸಂಕ್ರಮಣದ ದಿನದಂದು ಶಬರಿಮಲೆ ಸನ್ನಿದಾನದಲ್ಲಿ ಶ್ರೀಅಯ್ಯಪ್ಪ ವಿಗ್ರಹಕೆ ತೊಡಿಸಲಿಕ್ಕಿರುವ ತಿರುವಾಭರಣಗಳ ಶೋಭಾಯಾತ್ರೆ ಪಂದಳಂ ಅರಮನೆಯಿಂದ ಇಂದು ಸಾಂಪ್ರದಾಯಿಕ ಆಚಾರಕ್ರಮಗಳೊಂದಿಗೆ ಹೊರಟಿದೆ. ಮಧ್ಯಾಹ್ನ 12ಕ್ಕೆ ವಿಶೇಷ ಪೂಜಾನುಷ್ಟಾನಗಳೊಂದಿಗೆ ಆಭರಣಗಳನ್ನು ಶಬರಿಮಲೆಗೆ ಕೊಂಡೊಯ್ಯವ ಘೋಷಯಾತ್ರೆ ಹೊರಟಿತು. ಮಧ್ಯಾಹ್ನದ ತನಕ ಪಂದಳಂ ವಲಿಯ ಕೋಯಿಕಲ್ ಧರ್ಮಶಾಸ್ತಾ ಕ್ಷೇತ್ರದಲ್ಲಿ ಸಾರ್ವಜನಿಕ ಭಕ್ತರಿಗೆ ತಿರುವಾಭರಣಗಳ ಪ್ರದರ್ಶನ ಸೌಲಭ್ಯಗಳಿದ್ದುವು.
ಇಂದು ಘೋಷಯಾತ್ರೆಯು ಅಯಿರೂರ್ ಚೆರುಕ್ಕಾಲ್ ಪುಯ ಕ್ಷೇತ್ರದಲ್ಲಿ ಮೊಕ್ಕಾಂ ತಂಗಲಿದ್ದು , ಸೋಮವಾರ ಳಾಹ ಸತ್ರದಲ್ಲಿ ತಂಗಲಿದೆ. ವಿವಿಧ ಧಾರ್ಮಿಕ ಕೇಂದ್ರದಲ್ಲಿ ಅಯ್ಯಪ್ಪ ಭಕ್ತರ ಭಕ್ತ್ಯಾದರ ಪೂರ್ವಕ ಸ್ವಾಗತಗಳನ್ನು ಪಡೆದು, ಸಾಂಪ್ರದಾಯಿಕ ವಿಧಿಯಂತೆ ಶೋಭಾಯಾತ್ರೆ ಸಾಗುತ್ತಿದೆ.
ಪರಂಪರಾಗತ ಪಥದಲ್ಲೇ ಸಾಗುವ ತಿರುವಾಭರಣ ಶೋಭಾಯಾತ್ರೆ ಮಂಗಳವಾರ ಮಧ್ಯಾಹ್ನ ಚೆರಿಯಾನವಟ್ಟಂ ತಲುಪಲಿದೆ.
ಬಳಿಕ ನೀಲಿಮಲೆಯನ್ನೇರಿ ಅಪರಾಹ್ನ 5ಕ್ಕೆ ಶರಂಕುತ್ತಿ ಸನ್ನಿದಾನಕ್ಕೆ ತಲುಪಲಿದೆ.
ಅಲ್ಲಿಂದ ದೇವಸ್ವಂ ಪ್ರತಿನಿಧಿಗಳು ತಿರುವಾಭರಣಕ್ಕೆ ಸ್ವಾಗತನೀಡಿ ಶಬರಿಮಲೆಗೆ ಕರೊದೊಯ್ಯುವರು. ಬಳಿಕ ಶ್ರೀಅಯ್ಯಪ್ಪ ವಿಗ್ರಹಕ್ಕೆ ತಿರುವಾಭರಣ ತೊಡಿಸಿದಾಗ ಜ್ಯೋತಿ ದರ್ಶನವಾಗಲಿದೆ.
ಈ ಪುಣ್ಯ ಮುಹೂರ್ತಕ್ಕಾಗಿ ಶಬರಿಮಲೆಯಲ್ಲಿ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತರು ನೆರೆದು , ಇಡೀ ಕಾಡಿನೊಳಗೆ ಶರಣು ಮಂತ್ರಗಳು ಮೊಳಗುತ್ತಿವೆ.