- ಬರಿಕಾಲ್ನಡಿಗೆಯಲ್ಲಿ 8,000 ಕಿ.ಮೀ ಕ್ರಮಿಸಿ ಶಬರಿಮಲೆ ತಲುಪಿದ ಕಾಸರಗೋಡಿನ ತರುಣರು..!
- ಬದರೀನಾದದಿಂದ ಆರಂಭಿಸಿದ ಏಳು ತಿಂಗಳ ಭಕ್ತಿಪಯಣದಲ್ಲಿ ದೇಶದ ಪುಣ್ಯ ಕ್ಷೇತ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಪರಿಕ್ರಮಿಸಿದ ಸಾಧನೆ..!!
- ಕಾಸರಗೋಡಿನ ಕೂಡ್ಳು ರಾಮದಾಸನಗರದ ಸನತ್ ಕುಮಾರ್ ಹಾಗೂ ಸಂಪತ್ ಕುಮಾರ್ ಶೆಟ್ಟಿ ಎಂಬವರೇ ಭಕ್ತಿ ಪಯಣದ ಮೂಲಕ ಈ ಸಾಹಸ ಮೆರೆದವರು.
ವಿಶ್ವಶಾಂತಿಗಾಗಿ ಪ್ರಾರ್ಥಿಸಿ 223 ದಿನಗಳಲ್ಲಿ ಬರೋಬ್ಬರಿ 8ಸಾವಿರ ಕಿ.ಮೀ ಪಾದಯಾತ್ರೆ ನಡೆಸಿ , ದೇಶದ ಪುಣ್ಯಕ್ಷೇತ್ರಗಳನ್ನೆಲ್ಲಾ ಬರಿಕಾಲ್ನಡಿಗೆಯಲ್ಲೇ ದರ್ಶಿಸಿ ಕಟ್ಟಕಡೆಗೆ ಶಬರಿಮಲೆ ಸನ್ನಿಧಾನಕ್ಕೆ ತಲುಪಿದ ಕಾಸರಗೋಡಿನ ತರುಣರಿಬ್ಭರ ಪರಿಕ್ರಮ ದೇಶವ್ಯಾಪಕ ಸುದ್ದಿಯಾಗಿದೆ. ಶ್ಲಾಘನೆಗೆ ಪಾತ್ರವಾಗಿದೆ.
ಕಾಸರಗೋಡಿನ ಕೂಡ್ಳು ರಾಮದಾಸನಗರದ ಸನತ್ ಕುಮಾರ್ ಹಾಗೂ ಸಂಪತ್ ಕುಮಾರ್ ಶೆಟ್ಟಿ ಎಂಬವರೇ ಭಕ್ತಿ ಪಯಣದ ಮೂಲಕ ಈ ಸಾಹಸ ಮೆರೆದವರು.
ಇವರಿಬ್ಬರು ಜತೆಯಾಗಿ ಕಾಸರಗೋಡಿನಿಂದ ರೈಲಿನಲ್ಲಿ ಹೊರಟು 2024ರ ಮೇ 26ರಂದು ಬದರೀನಾಥ ತಲುಪಿದ್ದರು. ಅಲ್ಲಿಂದಲೇ ಅವರು ವೃತಾನಿಷ್ಠರಾಗಿ ಇರುಮುಡಿ ಕಟ್ಟಿ ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಹೊರಟಿದ್ದರು. ತಮ್ಮ ನಡಿಗೆಯಲ್ಲವರು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಚತುರ್ಧಾಮಗಳನ್ನು ಸೇರಿದಂತೆ ರಾಷ್ಟ್ರದ ಪ್ರಮುಖ ದೇವಾಲಯ, ಮಠ, ಮಂದಿರಗಳನ್ನೆಲ್ಲಾ ಸಂದರ್ಶಿಸಿದ್ದಾರೆ. ಅಯೋಧ್ಯೆ, ಉಜ್ಜಯಿನಿ, ದ್ವಾರಕಾ,ಪುರಿ, ಜಗನ್ನಾಥ, ರಾಮೇಶ್ವರ, ಅಚ್ಚನ್ಕೋವಿಲ್, ಎರುಮೇಲಿ ಮೂಲಕ ಶ್ರೀ ಶಬರೀಶ ಸನ್ನಿಧಿಗೆ ತಲುಪಿದ ಈ ಶರಣ ಪಥವೀಗ ರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾಗಿದೆ. ದೇಶದ ಗಮನ ಸೆಳೆದಿದೆ.
7ತಿಂಗಳ ಪಯಣದಲ್ಲಿ ವೃತನಿಷ್ಠೆಯ ಜೀವನಗೈದು ದೇವಾಲಯಗಳಲ್ಲೇ ತಂಗಿ ಬದುಕಿದ ಇವರ ಬರೋಬ್ಬರಿ 800ಕೀ.ಮೀ ಬರಿಕಾಲ್ನಡಿಗೆಯ ನಡಿಗೆಯಿಂದ ನಿನ್ನೆ ಶನಿವಾರ ಇವರು ಶ್ರೀ ಶಬರಿಮಲೆ ಸನ್ನಿಧಾನ ತಲುಪಿದರು. ಅಯ್ಯನೆಡೆಗೆ ಸಾಹಸಿಕ ಪಯಣಗೈದು ಬಂದ ಇವರಿಗೆ ಶಬರಿಮಲೆ ಸನ್ನಿಧಿಯಲ್ಲಿ ದೇವಸ್ವಂ ಮಂಡಳಿ ಆದರದ ಸ್ವಾಗತ ಗೌರವ ನೀಡಿದೆ.
ಭಕ್ತಿಯಿಂದ ಈ ಪಯಣಗೈದ ಸನತ್ಕುಮಾರ್ ಹವ್ಯಾಸಿ ಫೋಟೋಗ್ರಾಪರ್ ವೃತ್ತಿಯವರಾದರೆ ಸಂಪತ್ ಸೋಫಾ ನಿರ್ಮಾಣ ಕಾರ್ಮಿಕರು. ಈ ಹಿಂದೆ ವರ್ಷಂಪ್ರತಿ ಕಾಸರಗೋಡಿನ ಕೂಡ್ಲಿನಿಂದ 484 ಕಿ.ಮೀ.ದೂರದ ಪಟ್ಟಣಂತಿಟ್ಟ ಜಿಲ್ಲೆಯ ಶಬರಿಮಲೆಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದ ಇವರು ಈ ಬಾರಿ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸಿ ನಡೆಸಿದ್ದೇ ಈ ಸಾಹಸಿಕ ಪರಿಕ್ರಮ ಯಾತ್ರೆ.