ಕಾಸರಗೋಡು: ನಾಳೆ (ಜ.13) ಸೋಮವಾರ ಕೇರಳದ ಎಲ್ಲಾ ಪೆಟ್ರೋಲ್ ಬಂಕ್ ಗಳು ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ತನಕ ಮುಚ್ಚಿ, ಬಂದ್ ನಡೆಸುವುದಾಗಿ ಆಲ್ ಕೇರಳ ಫೆಡರೇಷನ್ ಆಫ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಕಟಿಸಿದೆ.
ಕೋಝಿಕ್ಕೋಡ್ ಜಿಲ್ಲೆಯ ಏಲತ್ತೂರಿನಲ್ಲಿ ಎಚ್ ಪಿ ಸಿ ಎಲ್ ಡಿಪೋ ಗೆ ಸಂಧಾನ ಮಾತುಕತೆ ನಡೆಸಲೆಂದು ತೆರಳಿದ್ದ ಸಂಘಟನೆಯ ಪ್ರತಿನಿಧಿಗಳನ್ನು ಟ್ಯಾಂಕರ್ ಚಾಲಕರು ಆಕ್ರಮಿಸಿದ ಘಟನೆ ನಡೆದಿದ್ದು, ಇದಕ್ಕೆ ಪ್ರತಿಭಟನೆಯಾಗಿ ನಾಳೆ ಪೆಟ್ರೋಲ್ ಬಂಕ್ ಮಧ್ಯಾಹ್ನ ತನಕ ಬಂದ್ ಆಗಲಿವೆ.
ಪೆಟ್ರೋಲಿಯಂ ಡೀಲರ್ಸ್ ಮತ್ತು ಟ್ಯಾಂಕರ್ ಚಾಲಕರ ನಡುವೆ ಕೆಲ ಸಮಯಗಳಿಂದ ಅಭಿಪ್ರಾಯ ವ್ಯತ್ಯಾಸದ ಸಮಸ್ಯೆಗಳಿವೆ. ಇಂಧನ ಹೇರಿ ಪೆಟ್ರೋಲ್ ಬಂಕ್ ಗೆ ತಲುಪಿಸುವ ಟ್ಯಾಂಕರ್ ಚಾಲಕರಿಗೆ ಬಂಕ್ ಮಾಲಕರು ಚಾ ದುಡ್ಡೆಂದು ಪಾಕಿಟ್ ಮನಿ ಕೊಡುವ ಸಂಪ್ರದಾಯ ಮೊದಲಿನಿಂದಲೇ ರೂಢಿಯಾಗಿದೆ. ಪ್ರಸ್ತುತ 300ರೂಗಳ ತನಕ ಈ ಬಾಬ್ತು ನೀಡಲಾಗುತ್ತಿದೆ. ಈ ಹಣವನ್ನು ಹೆಚ್ಚಿಸಬೇಕೆಂದು ಚಾಲಕರು ಆಗ್ಲಹಿಸಿರುವುದೇ ಸಮಸ್ಯೆಗೆ ಕಾರಣ.
ಚಾಲಕರ ಬೇಡಿಕೆಯನ್ನು ಬಂಕ್ ಮಾಲಕರು ತಿರಸ್ಕರಿಸಿದ್ದಾರೆ. ಇದರಿಂದಾಗಿ ಉದ್ದೇಶಪೂರ್ವಕ ಇಂಧನ ಟ್ಯಾಂಕರ್ ಪೆಟ್ರೋಲ್ ಬಂಕಿಗೆ ತಲುಪಿಸದೇ, ಚಾಲಕರು ನಾನಾ ರೀತಿಯ ತೊಂದರೆ ನೀಡುತ್ತಾರೆಂದು ಬಂಕ್ ಮಾಲಕರು ಆರೋಪಿಸಿದ್ದಾರೆ. ಈ ಕುರಿತಾದ ಸಮಸ್ಯೆಯನ್ನು ಸಂಧಾನ ಮೂಲಕ ಪರಿಹರಿಸಲೆಂದು ಬಂಕ್ ಮಾಲಕರ ಅಸೋಸಿಯೇಷನ್ ಪ್ರತಿನಿಧಿಗಳು ತೆರಳಿದಾಗ ಟ್ಯಾಂಕರ್ ಚಾಲಕರು ಆಕ್ರಮಿಸಿದ ಘಟನೆ ನಡೆದ ಹಿನ್ನೆಲೆಯಲ್ಲಿ ನಾಳೆ ಬಂದ್ ನಡೆಯುತ್ತಿದೆ.