- ಕುಂಬಳೆ ನಾಟ್ಯ ವಿದ್ಯಾನಿಲಯ ಏಳು ಮಂದಿ ಪ್ರತಿಭಾನ್ವಿತ ನರ್ತಕಿಯರಿಗೆ ಭರತನಾಟ್ಯದಲ್ಲಿ ವಿದ್ವತ್ ಪದವಿ
- ಎರಡು ದಶಕದಲ್ಲಿ ನಾಡಿಗೆ 22 ವಿದುಷಿಯರನ್ನಿತ್ತ ಕುಂಬಳೆಯ ನಾಟ್ಯ ವಿದ್ಯಾನಿಲಯ
ಕುಂಬಳೆ: ಇಲ್ಲಿನ ನಾಟ್ಯ ವಿದ್ಯಾನಿಲಯದ ಸ್ಥಾಪಕಿ ವಿದುಷಿ ಡಾ. ವಿದ್ಯಾಲಕ್ಷ್ಮಿ ಕುಂಬಳೆ ಇವರಲ್ಲಿ ಭರತನಾಟ್ಯ ಶಿಕ್ಷಣ ಪಡೆದ 7ಮಂದಿ ಪ್ರತಿಭಾನ್ವಿತ ನರ್ತಕಿಯರು ಈ ಸಾಲಿನ ವಿದ್ವತ್ ಪದವಿ ಪಡೆದು ವಿದುಷಿಯರಾದರು.
ನಾಟ್ಯವಿದ್ಯಾ ನಿಲಯ ಕುಂಬ್ಳೆಯ ಕಲಾವಿದೆ ಅವಳಿ ಸಹೋದರಿಯರಾದ ಅಂಕಿತ -ಅರ್ಪಿತ ಒಡಿಯೂರು, ಸೌಜನ್ಯ ಮುಗುಳಿ, ಶ್ರೀಮತಿ ಕಾವ್ಯಶ್ರೀ ಬೇಕೂರು, ಸಿಂಚನಲಕ್ಷ್ಮಿ ಕೋಡಂದೂರು, ಆದಿಶ್ರೀ ಪೈವಳಿಕೆ, ಪೂಜಾಶ್ರೀ ಕುಂಬಳೆ ಇವರು ಮೈಸೂರಿನ ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯದ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ಅಂಕಗಳೊಂದಿಗೆ ತೇರ್ಗಡೆಯಾಗಿ ವಿದುಷಿಯರಾದರು.
2003ರಲ್ಲಿ ಆರಂಭಗೊಂಡ ನಾಟ್ಯವಿದ್ಯಾ ನಿಲಯದಲ್ಲಿ ಕಳೆದೆರಡು ದಶಕದಲ್ಲಿ 22ಮಂದಿ ವಿದ್ವತ್ ಪಡೆದು ವಿದುಷಿಯರಾಗಿ ಹೊರಹೊಮ್ಮಿದ್ದಾರೆ. 2018ರಲ್ಲಿ 4ಮಂದಿ ವಿದ್ಯಾರ್ಥಿನಿಯರು ಮೊದಲಬಾರಿಗೆ ಸಂಸ್ಥೆಯ ಮೂಲಕ ಕಲಾವಿದರಾಗಿ ಹೊರಹೊಮ್ಮಿ ವಿದ್ವತ್ ಗಳಿಸಿದ್ದರು. ಆ ಬಳಿಕ 4ನೇ ಬ್ಯಾಚಿನಲ್ಲಿ 7ಮಂದಿ ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ವತ್ ಪಡೆಯುವುದು ಇದು ಮೊದಲಬಾರಿಯಾಗಿದೆ. ಪ್ರಸ್ತುತ ವಿದ್ವತ್ ಪಡೆದವರೆಲ್ಲರೂ ಸ್ನಾತ್ತಕೋತ್ತರ ಪದವಿ ಪಡೆದವರಾಗಿದ್ದು ಕಳೆದ ಒಂದು ದಶಕದಲ್ಲಿ ನೂರಾರು ವೇದಿಕೆಗಳಲ್ಲಿ ಪ್ರಬುದ್ಧ ಪ್ರದರ್ಶನ ನೀಡಿದ ಪ್ರತಿಭೆಗಳಾಗಿದ್ದಾರೆ.
ಈ ಕುರಿತು ನಾಟ್ಯ ವಿದ್ಯಾನಿಲಯದ ವಿದುಷಿ ಡಾ.ವಿದ್ಯಾಲಕ್ಷ್ಮಿ ಕುಂಬಳೆ ಅವರು ಪ್ರತಿಕ್ರಿಯಿಸಿ “ವಿದ್ವತ್ ಪಡೆಯುವುದು ನೃತ್ಯ ಕ್ಷೇತ್ರದ ಸಣ್ಣ ಸಾಧನೆಯಲ್ಲ. ಇದು ಶ್ರದ್ಧೆಯ ಕಲಿಕೆಯ, ಪ್ರತಿಭಾತನ್ಮಯತೆಯ ಸಮರ್ಪಣೆಗೆ ಸಿಗುವ ಫಲ.
ವಿದ್ವತ್ ಪಡೆಯುವುದೆಂದರೆ ನೃತ್ಯದ ವೃತ್ತಿಪರತೆಗಿರುವ ಅನುಮೋದನೆಯೂ ಹೌದು.
ಒಟ್ಟು 14ವರ್ಷಗಳ ಭರತನಾಟ್ಯದ ಸಮಗ್ರಾಧ್ಯಯನ ಪೂರ್ವಕ ಪ್ರದರ್ಶನ ಪ್ರತಿಭೆಯ ಅರಿವು ಮತ್ತು ಯೋಗ ಇದಕ್ಕೆ ಪ್ರದಾನ. ಇದೊಂದು ದೀರ್ಘಕಾಲೀನ, ಸತತ ಅಧ್ಯಯನದ ಕಲಾಪ್ರಯಾಣ. ಇದೀಗ ವಿದ್ವತ್ ಪಡೆದವರೆಲ್ಲರೂ ಶೈಕ್ಷಣಿಕವಾಗಿಯೂ, ಕಲಾತ್ಮಕವಾಗಿಯೂ ಪ್ರೌಢ ವಿದ್ಯಾರ್ಥಿಗಳು, ನೃತ್ಯ ಕ್ಷೇತ್ರವನ್ನು ಗಂಭೀರವಾಗಿ ಆಯ್ದುಕೊಂಡ ಕಲಾವಿದೆಯರು ಎಂದು ಅಭಿಪ್ರಾಯ ಹಂಚಿಕೊಂಡರು.