- ಸಿಎಂ ಸಮ್ಮುಖದಲ್ಲಿ ಪುನರ್ವಸತಿ ಬೇಡಿಕೆಯಿಂದ ಶರಣಾದ ನಕ್ಸಲರು ಮಾರಕಾಯುಧ ಅಡಗಿಸಿಟ್ಟರೇಕೆ..?
- ಶರಣಾದ ನಕ್ಸಲರು ಕೊಪ್ಪದ ಕಾಡಿನಲ್ಲಿ ಹೂತಿಟ್ಟು ಬಂದಿದ್ದ AK47 ಸಹಿತ ಮಾರಕ ಶಸ್ತ್ರಗಳ ಪತ್ತೆ
- ಕರ್ನಾಟಕ ಸರಕಾರದ ಒಪ್ಪಂದದಂತೆ 6ಮಂದಿ ನಕ್ಸಲರು ಶರಣಾದರೂ, ಅವರು ಕೊಪ್ಪದ ಕಾಡಿನಲ್ಲೇ ಮಾರಕ ಶಸ್ತ್ರಾಸ್ತ್ರ ಅಡಿಗಿಸಿಟ್ಟು ಬಂದು ಪುನರ್ವಸತಿಗಾಗಿ ಶರಣಾದುದೇಕೆ..?
ಚಿಕ್ಕಮಗಳೂರು, (ಕಣಿಪುರ ಸುದಿಜಾಲ) :
ಕರ್ನಾಟಕದಲ್ಲಿ ಶರಣಾದ ನಕ್ಸಲೀಯರ ಆಯುಧಗಳೇನಾದುವು ಎಂಬ ಚರ್ಚೆ ಎದ್ದ ಬೆನ್ನಲ್ಲೇ ಕೊಪ್ಪ ತಾಲೂಕಿನ ಮೇಗೂರು ಕಾಡಿನಿಂದ ನಕ್ಸಲರು ಉಪೇಕ್ಷಿಸಿ ಬಂದಿದ್ದ ಮಾರಕ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೋಲೀಸ್ ವರಿಷ್ಠರು ತಿಳಿಸಿದ್ದಾರೆ.
ಮೇಗೂರು ಅರಣ್ಯದಲ್ಲಿ ಶರಣಾದ ನಕ್ಸಲರು ಕೊನೆಯ ಬಾರಿಗೆ ಸಭೆ ಸೇರಿದ್ದ ಜಾಗದಲ್ಲೇ ಉಪೇಕ್ಷಿತ ಶಸ್ತ್ರಾಸ್ರ ಹೂತು ಹಾಕಲಾಗಿತ್ತು ಎಂದು ಪೋಲೀಸ್ ಮೂಲಗಳು ಹೇಳುತ್ತಿವೆ.
ನಕ್ಸಲರಲ್ಲಿದ್ದ ಎಕೆ 47 ಬಂದೂಕು, ಮೂರು 303 ರೈಫಲ್, ಒಂದು 12bore sbbl, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿದಂತೆ ಒಟ್ಟು ಆರು ಬಂದೂಕು ಪತ್ತೆಯಾಗಿವೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಜೊತೆಗೆ 176 ಜೀವಂತ ಗುಂಡುಗಳು, 303 ಬಂದೂಕಿನ 133 ಗುಂಡುಗಳೂ ದೊರೆತಿವೆ.
ಆರು ಮಂದಿ ನಕ್ಸಲರು ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಹಿತ ಸರಕಾರದ ಪ್ರಮುಖರ ಸಮ್ಮುಖ ಶರಣಾಗಿದ್ದರು. ಈ ವೇಳೆ ಸರಕಾರದ ಪುನರ್ವಸತಿ ಯೋಜನೆಯಂತೆ ನಕ್ಸಲರನ್ನು ಮನವೊಲಿಸಿ, ಪರಿವರ್ತಿಸಿ ಶರಣಾಗತಿ ಮಾಡಿಸಲಾಯಿತು ಎನ್ನಲಾಗಿತ್ತು. ಕಾನೂನು ಪ್ರಕಾರ ನಕ್ಸಲರು ತಮ್ಮ ವಶದಲ್ಲಿದ್ದ ಮಾರಕಾಯುಧಗಳನ್ನು ಶರಣಾಗುವ ವೇಳೆ ಸರಕಾರಕ್ಕೆ ಒಪ್ಪಿಸಬೇಕಿತ್ತು. ಈ ಆಧಾರದಲ್ಲಿ ಪರಿಹಾರಧನ ನಿರ್ಣಯವಾಗಬೇಕಿತ್ತು. ಆದರೆ ನಕ್ಸಲರು ತಮ್ಮ ಸಮವಸ್ತ್ರ ಮತ್ತು ಮಾವೋವಾದಿ ಪಕ್ಷದ ಬಾವುಟವನ್ನಷ್ಟೇ ನೀಡಿ ಶರಣಾಗಿಸಿದ್ದರು. ಈ ಹಿನ್ನೆಲೆಯಲ್ಲಿ ಶರಣಾದ ನಕ್ಸಲರ ಆಯುಧಗಳೆಲ್ಲಿವೆ ಎಂಬ ಶಂಕೆಯ ಚರ್ಚೆ ಹುಟ್ಟಿತ್ತು.
ಈ ಕುರಿತಾದ ಮಾಧ್ಯಮ ವರದಿಗಳ ಬೆನ್ನಲ್ಲೇ ಗೃಹ ಸಚಿವರ ಆದೇಶದಂತೆ ಕೊಪ್ಪದ ಕಾಡಿನಲ್ಲಿ ಹುಡುಕಾಟ ನಡೆಸಿ ಉಪೇಕ್ಷಿಸಿದ ಮಾರಕ ಶಸ್ತ್ರಾಸ್ತ್ರ ಪತ್ತೆ ಹಚ್ಚಲಾಯಿತೆಂದು ಹೇಳಲಾಗುತ್ತಿದೆಯಾದರೂ ಶರಣಾದ ನಕ್ಸಲರು ಆಯುಧ ಒಪ್ಪಿಸದೇ ಅಡಗಿಸಿಟ್ಟದ್ದೇಕೆಂಬ ಪ್ರಶ್ನೆ ಉಳಿದಿದೆ.