ಕಾಸರಗೋಡು ನಗರದ ಸರಕಾರಿ ಜನರಲ್ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜಿನ ಅಂಗಸಂಸ್ಥೆಯನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ 44ಮಂದಿ ವೈದ್ಯರನ್ನು ಕಾಸರಗೋಡಿಗೆ ನೇಮಿಸಲಾಯಿತು.
ಮೆಡಿಕಲ್ ಕಾಲೇಜಿನ ಟೀಚಿಂಗ್ ಆಸ್ಪತ್ರೆಯನ್ನಾಗಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಂಗವಾಗಿ ನೂತನ ನೇಮಕಾತಿ ನಡೆದಿದೆ.
ಎಂಬಿಬಿಎಸ್ ಕೋರ್ಸುಗಳನ್ನು ಮಂಜೂರು ಮಾಡುವುದರ ಪೂರ್ವಭಾವಿಯಾಗಿ ಆರೋಗ್ಯ ವಿಶ್ವವಿದ್ದಯಾಲಯದ ನಿಯೋಗ ಕಾಸರಗೋಡು ಜನರಲ್ ಆಸ್ಪತ್ರೆಗೆ ಭೇಟಿ ನೀಡಲಿಕ್ಕಿದೆ. ಈ ಹಿನ್ನೆಲೆಯಲ್ಲಿ ಹೊಸ ವೈದ್ಯರುಗಳನ್ನು ಕೋಝಿಕ್ಕೋಡ್, ಕಣ್ಣೂರು, ತ್ರಿಶೂರ್, ತಿರುವನಂತಪುರದಿಂದ ವರ್ಗಾಯಿಸಿ ಕಾಸರಗೋಡಿಗೆ ನೇಮಿಸಲಾಗಿದೆ.
ಪ್ರಸೂತಿ ತಜ್ಞರು -3, ಓರ್ಥೋಪಿಡಿಕ್ಸ್ – 3, ಇಎನ್ ಟಿ – 1, ಜನರಲ್ ಸರ್ಜರಿ -4, ಜನರಲ್ ಮೆಡಿಸಿನ್ -1, ರೇಡಿಯೋ ಡಯಾಗ್ನೋಸಿಸ್ -2, ಶಿಶುರೋಗ -1, ಮನೋರೋಗ-1, ಅನಸ್ತೇಷ್ಯ- 4, ನೇತ್ರರೋಗ -2, ಫಿಸಿಯೋಲಜಿ – 3, ಅನಾಟಮಿ – 3, ಕಮ್ಯುನಿಟಿ ಮೆಡಿಸಿನ್ – 2, ಫೋರೆನ್ಸಿಕ್ ಮೆಡಿಸಿನ್ – 2, ಬಯೋಕೆಮಿಸ್ಟ್ರಿ – 3, ಫಾರ್ಮಾಕೋಲಜಿ – 3, ಪೆಥೋಲಜಿ – 2, ಮೈಕ್ರೋ ಬಯಾಲಜಿ – 3, ಓರಲ್ – ಮೇಕ್ಸಿಲೋಫೇಷ್ಯಲ್ ಸರ್ಜನ್ – 1 ಎಂಬಂತೆ ನೂತನ ವೈದ್ಯರ ನೇಮಕಕ್ಕೆ ಆದೇಶವಾಗಿದ್ದು, ಕೂಡಲೇ ಕಾಸರಗೋಡಿಗೆ ತೆರಳಿ ಸೇವೆ ಆರಂಭಿಸಬೇಕೆಂದು ನಿರ್ದೇಶವಾಗಿದೆ.
ಕಾಸರಗೋಡಿನ ಎಣ್ಮಕಜೆ ಪಂಚಾಯತಿನ ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಹಂತದಲ್ಲಿದೆ. ಇದರ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜಿನ ಟೀಚಿಂಗ್ ಆಸ್ಪತ್ರೆಯನ್ನಾಗಿ ಘೋಷಿಸಲಾಗಿದೆ.