- ಎನ್.ಐ.ಎ ಕೇರಳ ಘಟಕದ ಡಿವೈಎಸ್ಪಿಯಾಗಿ ಕುಂಬ್ಳೆ ನಿವಾಸಿ ಉಮೇಶ್ ರೈ ಗೆ ಭಡ್ತಿ ನೇಮಕ
- ಇದು ರಾಷ್ಟ್ರ ಸುರಕ್ಷೆಗೆ ಸೇವೆ ಸಲ್ಲಿಸುವ ಅಸುಲಭ ಅವಕಾಶ ಎಂದ ಗಡಿನಾಡ ಕನ್ನಡಿಗ
- ರಾಷ್ಟ್ರೀಯ ತನಿಖಾ ದಳದಲ್ಲಿ ಉನ್ನತಾಧಿಕಾರಿಯಾಗುವ ಮೊದಲ ತುಳುನಾಡಿನ ತರುಣ, ಕುಂಬ್ಳೆಗೆ ಅಭಿಮಾನ
ಕುಂಬಳೆ (ಕಣಿಪುರ ಸುದ್ದಿಜಾಲ):
ಭಾರತೀಯ ರಾಷ್ಟ್ರೀಯ ತನಿಖಾ ದಳದ ಅತ್ಯುನ್ನತ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ಅನ್ವೇಷಣಾ ದಳದ (INA)ಕೇರಳ ಘಟಕದ ಡಿವೈಎಸ್ಪಿಯಾಗಿ ಕಾಸರಗೋಡಿನ ಕುಂಬ್ಳೆಯ ಕುಂಡಾಪು ಗುತ್ತಿನ ಉಮೇಶ್ ರೈ ಆಯ್ಕೆಗೊಂಡು, ನೇಮಕಾತಿ ಪಡೆದಿದ್ದಾರೆ.
NIA ಯ ಪ್ರಧಾನ ಹುದ್ದೆಗೆ ಗಡಿನಾಡ ಕನ್ನಡಿಗರೊಬ್ಬರು ನೇಮಕವಾಗುತ್ತಿರುವುದು ಇದೇ ಪ್ರಥಮವಾಗಿದೆ.
ರಾಷ್ಟ್ರೀಯ ತನಿಖಾ ದಳವಾದ ಎನ್.ಐ.ಎ.ಯಲ್ಲಿ ಎಳವೆಯಲ್ಲೇ ಉದ್ಯೋಗ ಪಡೆದು ತನ್ನ ತನಿಖಾ ಪ್ರಬುದ್ಧತೆಯ ಸೃಜನಶೀಲತೆಯಿಂದ ಮೇಲ್ದರ್ಜೆಗೆ ಏರಲ್ಪಟ್ಟ ಉಮೇಶ್ ರೈ ಕುಂಬಳೆಯ ಕುಂಡಾಪು ಗುತ್ತಿನ ದೇರಣ್ಣ ರೈ, ಪದ್ಮಾವತಿ ದಂಪತಿಯ ಪುತ್ರ.
ಎನ್.ಐ.ಎ. ತನಿಖಾಧಿಕಾರಿಯೊಬ್ಬರು ಸಾರ್ವಜನಿಕವಾಗಿ ತನ್ನ ಬದುಕನ್ನೇ ರಹಸ್ಯವಾಗಿಡಬೇಕು. ಈ ಕಾರಣ ದಿಂದ ಕೇರಳ ಘಟಕದ ಡಿವೈಎಸ್ಪಿ ಯಾಗಿ ನೇಮಕ ಪಡೆದ ತಾನು ಹೆಚ್ಚಿನ ಯಾವುದೇ ಮಾಹಿತಿಗಳನ್ನು ಮಾಧ್ಯಮ, ಸಮಾಜದ ಜತೆ ಹಂಚುವಂತಿಲ್ಲ ಎಂದ ಅವರು ಇದು ದೇಶ ಸುರಕ್ಷತೆಗೆ ಕೊಡುಗೆ ನೀಡಲು ಸಿಕ್ಕ ಅವಕಾಶ ಎಂದು “ಕಣಿಪುರ’ ಮಾಧ್ಯಮದ ಜತೆ ಅನಿಸಿಕೆ ಹಂಚಿಕೊಂಡರು.
ಕುಂಬ್ಳೆಯಲ್ಲಿ ಹುಟ್ಟಿ ಬೆಳೆದ ಉಮೇಶ್ ರೈ ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪಡೆದು ಅನಂತರ , ಪ್ರೌಢ ಶಿಕ್ಷಣವನ್ನು ಕುಂಬಳೆ ಸರಕಾರಿ ಹೈಸ್ಕೂಲಿನಲ್ಲಿ ಪಡೆದಿದ್ದರು. ಅನಂತರ ಮಂಗಳೂರು ವಿ.ವಿಯಲ್ಲಿ ವಾಣಿಜ್ಯ ಪದವಿ ಗಳಿಸಿದ್ದರು.
2002ರಲ್ಲಿ CRPF ನಲ್ಲಿ ಮೊದಲಿಗೆ ಹುದ್ದೆ ಪಡೆದು ರಾಷ್ಟ್ರದ ಆಂತರಿಕ ಭದ್ರತೆಗಾಗಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಅವರು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು.
ಈ ಅವಧಿಯ ಸೇವಾ ಕೈಂಕರ್ಯ ಗುರುತಿಸಿ 2014ರಲ್ಲಿ ಭಾರತದ ಅತ್ಯುನ್ನತ
ಅನ್ವೇಷಣಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ದಳ ದಲ್ಲಿ (NIA) ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದ ಉಮೇಶ್ ರೈ
2017ರಲ್ಲಿ ಎನ್.ಐ.ಎ.ಯ ಖಾಯಂ ಉದ್ಯೋಗಿಯಾಗಿ ನೇಮಕಗೊಂಡರು.
ಈ ಮೊದಲು ರಾಷ್ಟ್ರ ಸುರಕ್ಷೆಗೆ ಸಂಬಂಧಿಸಿ ಅವರು ನೀಡಿದ ಕರ್ತವ್ಯ ಪರತೆಯ ತನಿಖೆ, ಕೊಡುಗೆ ಪರಿಗಣಿಸಿ ಕೇಂದ್ರ ಗೃಹ ಇಲಾಖೆ 2021ರಲ್ಲಿಅವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿದೆ.
2025ರ ಜನವರಿ 1ರಂದು ಎನ್.ಐ.ಎ ಯ ಕೇರಳ ಘಟಕದ ಕೊಚ್ಚಿ ಯೂನಿಟ್ ನ ಡಿವೈಎಸ್ಪಿಯಾಗಿ ಭಡ್ತಿಗೊಂಡು ನೇಮಕ ಪಡೆದ ಇವರು ಕೊಚ್ಚಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.