ಕಾಸರಗೋಡು: ಇದೇ ಬರುವ ಜ. 26ರಂದು ಉಪ್ಪಳದ ಮಣ್ಣುಂಗುಳಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಜಾಹಿದ್ ಸಮಾವೇಶಕ್ಕೆ ಮಂಗಲ್ಪಾಡಿ ಗ್ರಾಮ ಪಂಚಾಯತ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಅತಿ ದೊಡ್ಡ ಕ್ರೀಡಾಂಗಣವೆಂದೇ ಖ್ಯಾತಿ ಪಡೆದಿರುವ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿನ ಮಣ್ಣುಂಗುಳಿ ಮೈದಾನವು ವಿಶೇಷವಾಗಿ ಕ್ರೀಡಾ ಚಟುವಟಿಕೆಗಳಿಗಾಗಿಯೇ ಮೀಸಲಾಗಿದೆ. ಅಲ್ಲದೆ ಇಂತಹ ಮತೀಯ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದು ನಿಯಮ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ವಿ.ಹಿಂ.ಪ ಅಭಿಪ್ರಾಯಪಟ್ಟಿದೆ.
ಕೆಲವು ವರ್ಷಗಳ ಹಿಂದೆ ಇದೇ ಮಣ್ಣುಂಗುಳಿ ಕ್ರೀಡಾಂಗಣದಲ್ಲಿ ವಿಶ್ವಹಿಂದೂ ಪರಿಷತ್ ಆಯೋಜಿಸಲು ಉದ್ದೇಶಿಸಲಾದ ಸಮಾವೇಶಕ್ಕೆ ಅಂದು ಗ್ರಾ ಪಂ. ಅನುಮತಿ ನಿರಾಕರಿಸಲಾಗಿತ್ತು. ಕ್ರೀಡೆ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ಅಧಿಕೃತವಾಗಿ ಹೇಳಿದ್ದರು.ಆದರೆ ಈಗ ಕಾನೂನು ಬದಲಾದುದು ಹೇಗೆಂದು ವಿ.ಹಿಂ ಪ ಪ್ರಶ್ನಿಸಿದೆ.
ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಪ್ರತಿನಿಧಿಗಳು ಮಾತನಾಡಿ ” ನಿರ್ದಿಷ್ಟವಾದ ಒಂದು ಮತ ಪಂಗಡದವರಿಗೆ ಏಕೆ ವಿಭಿನ್ನ ನಿಯಮವನ್ನು ಅನ್ವಯಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಸಾರ್ವಜನಿಕ ಹಿತಾಸಕ್ತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಮುಜಾಹಿದ್ ಕೂಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನಮನಗಳ ಮಧ್ಯೆ ಗೊಂದಲ ಉಂಟಾಗುವುದನ್ನು ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.