- ಶ್ರೀ ಸರಸ್ವತಿ ಸಂಪ್ರೀತಿಯ ಕುಂಕುಮಸೌಭಾಗ್ಯ ಬಯಸಿ
ಅರ್ಚನೆ ನಿರತ ಸಹಸ್ರ ಸುಮಂಗಲಿಯರು..! - ದಿನಕ್ಕೊಂದು ಹೋಮಗಳಿಂದ ಆನೆಗುಂದಿ ಮಠದಲ್ಲಿ ಕೋಟಿಕುಂಕುಮಾರ್ಚನೆಯ ಭಕ್ತಿ ಸಂಭ್ರಮ : ಊರಪರವೂರ ಭಕ್ತರ ನಡೆ ಆನೆಗುಂದಿಯತ್ತ
ಉಡುಪಿ ತಾಲೂಕಿನ ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಠದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಕೇಪಳ ಪುಷ್ಪಾರ್ಚಿತ ಕೋಟಿ ಕುಂಕುಮಾರ್ಚನೆ ದೈನಂದಿನ ಸುಮಂಗಲೀಯರ ಅತ್ಯಧಿಕ ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನವಾಗುತ್ತಿದೆ
.ಶ್ರೀಸಂಸ್ಥಾನದ ಸರಸ್ವತಿ ಪೀಠದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಕುಂಕುಮಾರ್ಚನೆಯಲ್ಲೊಂದು ಅವಕಾಶ ಪಡೆಯುವ ಬಯಕೆಯೊಂದಿಗೆ ಊರ, ಪರವೂರ ಭಕ್ತರು ಶ್ರೀಮಠದತ್ತ ಮುಖಮಾಡಿದ್ದಾರೆ.
ಅಖಂಡ ಸೌಭಾಗ್ಯಯುತವಾದ ಕುಂಕುಮಭಾಗ್ಯವನ್ನು ಕರುಣಿಸುವಂತೆ ಸಂಪ್ರಾರ್ಥಿಸಿ ಮಹಾಲಕ್ಷ್ಮಿಯಾದ ಜಗನ್ಮಾತೆಯನ್ನು ಭಜಿಸಿ, ಅರ್ಚಿಸಿ, ಸಂಪ್ರೀತಗೊಳಿಸಿ ಮೆಚ್ಚಿಸುವ ದಿವ್ಯ ಯಜ್ಞದಲ್ಲಿ ಸಹಸ್ರಾರು ಮಹಿಳೆಯರ ಪಾಲ್ಗೊಳ್ಳುವಿಕೆ ಕೋಟಿ ಕುಂಕುಮಾರ್ಚನೆಯನ್ನು ಸಂಭ್ರಮೋತ್ಸವವನ್ನಾಗಿಸಿದೆ.
ಜನವರಿ 6ರಂದು ಸೋಮವಾರ ಆರಂಭಗೊಂಡ ಕೋಟಿಕುಂಕುಮಾರ್ಚನೆಯಲ್ಲಿ ಶ್ರೀಮಠದ ಪಟ್ಟದ ದೇವರಾದ ಶಿವಪಂಚಾಯತನ ವಿಶ್ವಕರ್ಮ ಸರಸ್ವತೀ ಅನುಗ್ರಹಕ್ಕಾಗಿ ದಿನಕ್ಕೊಂದು ಹೋಮಗಳೊಂದಿಗೆ ಕೋಟಿ ಕುಂಕುಮಾರ್ಚನೆ ನಡೆಯುತ್ತಿರುವುದು ವೈಶಿಷ್ಟ್ಯವಾಗಿದೆ. ಜ.6ರಂದು ಸೋಮವಾರ ಶ್ರೀ ಮಹಾಗಣಪತಿ ಪ್ರೀತ್ಯರ್ಥ ಅಷ್ಟ ಚತ್ವಾರಿಂಶತ್ ನಾರಿ ಕೇಳ ಗಣಪತಿಯಾಗ ನಡೆಯಿತು.
7ರಂದು ಶ್ರೀಚಂದ್ರಮೌಳೀಶ್ವರ ಪ್ರೀತ್ಯರ್ಥ ಶ್ರೀಮಹಾ ಮೃತ್ಯುಂಜಯ ಹವನ ಸಹಿತ ರುದ್ರಯಾಗ ನಡೆದರೆ 8ರಂದು ಮಹಾವಿಷ್ಣು ಪ್ರೀತ್ಯರ್ಥ ವಿಷ್ಣುಹವನ ಸಹಿತ ಶ್ರೀ ಧನ್ವಂತರಿ ಹೋಮ ಜರುಗಿತು.
9ರಂದು ಗುರುವಾರ ಸೂರ್ಯ ದೇವರ ಪ್ರೀತ್ಯರ್ಥ ಆದಿತ್ಯ ಹೃದಯ ಹೋಮ, ಸೌರಸೂಕ್ತ ಹೋಮ ನಡೆಯಿತು
ಜ.10 (ಇಂದು) ಕಾಳಿಕಾಂಬಾ ಅಮ್ಮನ ಪ್ರೀತ್ಯರ್ಥ ಶ್ರೀದುರ್ಗಾ ಹವನ, ಶ್ರೀಸರಸ್ವತಿ ಹೋಮ ನಡೆಯುತ್ತಿದೆ. ನಾಳೆ ಜ.11ರಂದು ವಿಶ್ವಕರ್ಮ ಹೌಮ, ನವಗ್ರಹ ಹೋಮ ನಡೆದು 12ರಂದು ಜಗನ್ಮಾತೆ ಶ್ರೀ ಸರಸ್ವತಿ ಹಾಗೂ ಲಕ್ಷ್ಮೀ ದೇವರ ಪ್ರೀತ್ಯರ್ಥ ಮತ್ತು ಅನುಗ್ರಹಕ್ಕಾಗಿ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮ ಹೋಮ ಮತ್ತು ಶ್ರೀಸೂಕ್ತ ಹೋಮ
ಸಹಿತ ಕೋಟಿಕುಂಕುಮಾರ್ಚನೆ ಸಂಪನ್ನವಾಗಲಿದೆ.
ದೈನಂದಿನ ಯಜ್ಞಗಳೊಂದಿಗೆ ನಿಶ್ಚಿತ ಫಲಪ್ರಾಪ್ತಿ ಧ್ಯೇಯದಿಂದ ಪೀಠಾಧೀಶೆ ಸರಸ್ವತಿಗೆ ಸ್ತುತಿ ಮತ್ತು ಶ್ರೀಲಲಿತಾ ಸಹಸ್ರನಾಮಾರ್ಚನೆ ಸಹಿತ ನಡೆಯುವ ಕೋಟಿಕುಂಕುಮಾರ್ಚನೆ ಶ್ರೀಮಠದಲ್ಲಿ ಪ್ರಪ್ರಥಮ ನಡೆಯುವುದರಿಂದ ಇದರಲ್ಲಿ ಪಾಲ್ಗೊಳ್ಳುವುದೊಂದು ಸುಯೋಗ ಎಂಬಂತೆ ಕೇರಳ -ಕರ್ನಾಟಕದ ನಾನಾ ದಿಕ್ಕುಗಳಿಂದ ಅನೇಕರು ಪಡುಕುತ್ಯಾರಿನತ್ತ ಮುಖ ಮಾಡಿದ್ದಾರೆ.
ಜ.12ರಂದು ಕಾರ್ಯಕ್ರಮಗಳಿಗೆ ಸಮಾಪ್ತಿಯಾಗಲಿದೆ. ಅಂದು ಬೆಳಿಗ್ಗೆ 11.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಸರಸ್ವತಿ,ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಪ್ರಾಸ್ತಾವಿಕ ಮಾತನಾಡುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಇದೇ ಸಂದರ್ಭ ಕರ್ನಾಟಕ ಸರಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್ ಆರ್. ಹರೀಶ್ ಆಚಾರ್ಯ ಜಲಕದಕಟ್ಟೆ ಅವರಿಗೆ ಮಹಾಸಂಸ್ಥಾನದ ವತಿಯಿಂದ ಗೌರವ ಅಭಿನಂದನೆ ನಡೆಯಲಿದೆ.