- ಗುರು ಮಾಂಬಾಡಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ
- ಕಾಸರಗೋಡಿನ ಅಡ್ಕ, ಸುಬ್ರಾಯ ಹೊಳ್ಳ, ಮವ್ವಾರು ಸಹಿತ 11ಮಂದಿ ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ಘೋಷಣೆ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಕಲಾವಿದ, ಖ್ಯಾತ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆಂದು ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಿಸಿದ್ದಾರೆ. ಯಕ್ಷಗಾನ ಅಕಾಡೆಮಿ ನೀಡುವ ಪ್ರಶಸ್ತಿಗಳ ಪೈಕಿ ಪಾರ್ತಿಸುಬ್ಬ ಪ್ರಶಸ್ತಿಯು ಹಿರಿದಾಗಿದ್ದು, ಪ್ರಶಸ್ತಿ ಫಲಕದೊಂದಿಗೆ 5ಲಕ್ಷ ರೂ ನಗದು ಬಹುಮಾನವನ್ನೊಳಗೊಂಡಿದೆ.
ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ, ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಬಂಟ್ವಾಳದ ರಾಘವದಾಸ್, ಬಂಟ್ವಾಳ ನಿವಾಸಿ ಸುಬ್ರಾಯ ಹೊಳ್ಳ ಕಾಸರಗೋಡು, ತುಮಕೂರಿನ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಹತ್ತು ಮಂದಿ ಕಲಾವಿದರನ್ನು ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರ ವಿವರ ಇಂತಿದೆ.
ಹಿರಿಯ ಅರ್ಥದಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್, ಬಡಗುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ, ಹಿರಿಯ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ, ಕಟೀಲು ಮೇಳದ ಬಣ್ಣದ ವೇಷಧಾರಿ ಉಮೇಶ್ ಕುಪ್ಪೆಪದವು, ಬಡಗುತಿಟ್ಟಿನ ಸ್ತ್ರೀ ವೇಷಧಾರಿ ಶಿವಾನಂದ ಗೀಜಗಾರು, ಮುಗ್ವಾ ಗಣೇಶ ನಾಯ್ಕ, ತೆಂಕುತಿಟ್ಟಿನ ಸ್ತ್ರೀವೇಷಧಾರಿ ಸುರೇಂದ್ರ ಮಲ್ಲಿ ಗುರುಪುರ, ಕಟೀಲು ಮೇಳದ ಭಾಗವತ, ಪ್ರಸಂಗಕರ್ತ ಅಂಡಾಲ ದೇವಿ ಪ್ರಸಾದ ಶೆಟ್ಟಿ, ಮಹಿಳಾ ಕಲಾವಿದೆ ಜ್ಯೋತಿ ಹಳುವಳ್ಳಿ ಮೂಡಲಪಾಯ ಯಕ್ಷಗಾನದ ಕೃಷ್ಣಪ್ಪ ಪ್ರಶಸ್ತಿಗೆ ಆಯ್ಕೆಗೊಂಡಿದಾರೆ.
ದತ್ತಿನಿಧಿ ಪ್ರಶಸ್ತಿಯಾಗಿ 2024ನೇ ಸಾಲಿನ ಕರ್ಕಿ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ ಆಯ್ಕೆಗೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ.16ರಂದು ಉಡುಪಿಯಲ್ಲಿ ಸಚಿವರುಗಳ ಸಮಕ್ಷಮ ನಡೆಯಲಿದೆಯೆಂದು ಅಧ್ಯಕ್ಷರು ಘೋಷಿಸಿದ್ದಾರೆ.