ಶಾಸ್ತ್ರೀಯ ಸಂಗೀತದಲ್ಲಿ ಗಡಿನಾಡಿಗೆ ಕೀರ್ತಿತೊಡಿಸಿದ ಕನ್ನಡದ ಕಂದ ಪ್ರದ್ಯುಮ್ನ

ಶಿಷ್ಯನ ಸಾಧನೆಯಿಂದ ಖುಷಿಗೊಂಡು ಇದು ಗಡಿನಾಡಿನ ಸಂಭ್ರಮ ಎಂದ ಗುರು ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು

by Narayan Chambaltimar
  • ಶಾಸ್ತ್ರೀಯ ಸಂಗೀತದಲ್ಲಿ ಗಡಿನಾಡಿಗೆ ಕೀರ್ತಿತೊಡಿಸಿದ ಕನ್ನಡದ ಕಂದ ಪ್ರದ್ಯುಮ್ನ
  • ಶಿಷ್ಯನ ಸಾಧನೆಯಿಂದ ಖುಷಿಗೊಂಡು ಇದು ಗಡಿನಾಡಿನ ಸಂಭ್ರಮ ಎಂದ ಗುರು ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು

ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಎಗ್ರೇಡ್ ಪಡೆದು ಗಡಿನಾಡಿಗೆ ಕೀರ್ತಿ ತೊಡಿಸಿದ ಕನ್ನಡದ ಕಂದ
ಅಗಲ್ಪಾಡಿ ನಿವಾಸಿ ಪ್ರದ್ಯುಮ್ನ ಶರ್ಮನ ಈ ಸಾಧನೆಗೆ “ನಿರ್ಭೀತಿಯಿಂದ ಮನೋಧರ್ಮಕ್ಕೆ ತಕ್ಕಂತೆ ಅನಾಯಾಸವಾಗಿ ಹಾಡುವ ಆತನ ಪ್ರತಿಭಾ ಕೌಶಲ್ಯ ಮತ್ತು ಹೆತ್ತವರು ನೀಡಿದ ಪ್ರೋತ್ಸಾಹವೇ ಕಾರಣ. ನನಗಂತೂ ಆತನ ಸಾಧನೆ ಸಂಭ್ರಮ ಮೂಡಿಸಿದೆ. ನನ್ನ ಮಕ್ಕಳಿಗೆ ಸಿಕ್ಕಷ್ಟೇ ಖುಷಿ ತಂದಿದೆ” ಎಂದು ಸಂತೋಷ ಹಂಚಿಕೊಂಡರು ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು.
ಇವರು ಪ್ರದ್ಯುಮ್ನ ಶರ್ಮನ ಸಂಗೀತ ಗುರು. ಬದಿಯಡ್ಕ ಭಾರತೀ ವಿದ್ಯಾಪೀಠದಲ್ಲಿ ಕಳೆದ ಎರಡು ದಶಕಗಳಿಂದ ಸಂಗೀತ ಶಿಕ್ಷಣ ನೀಡುವ ಸುನಾದ ಸಂಗೀತ ಶಾಲೆಯ ಸ್ಥಾಪಕಿ.

ಯಾವುದೇ ಸಾಧನೆಗೆ ಪ್ರತಿಭೆಯೊಂದೇ ಸಾಲದು. ಪೂರಕವಾಗಿ ಮನೆ, ಹೆತ್ತವರ ಬೆಂಬಲವೂ ಬೇಕು. ಪ್ರದ್ಯುಮ್ನ ಶರ್ಮನಿಗೆ ಅದೆಲ್ಲವೂ ಒದಗಿದೆ. ನಾನು ಇತರ ಮಕ್ಕಳಿಗೆ ನೀಡಿದಂತೆಯೇ ಆತನಿಗೂ ವಾರಕ್ಕೊಂದೇ ಕ್ಲಾಸ್ ನೀಡಿರುವುದು. ಆದರೆ ಆತ ತನ್ಮಯತೆಯ ಶಿಸ್ತಿನಿಂದ ಕಲಿತು ಸಾಧಿಸಿದ. ಕೇರಳ ರಾಜ್ಯ ಮಟ್ಟದಲ್ಲಿ ಗುರುತಿಸಿ, ಕಲೋತ್ಸವದಲ್ಲಿ ಎಗ್ರೇಡ್ ಪಡೆಯುವುದೆಂದರೆ ಸಣ್ಣ ಮಾತಲ್ಲ. ಆತನ ಸಾಧನೆ ನಮ್ಮ ಬದಿಯಡ್ಕದ ಸುನಾದ ಸಂಗೀತ ಶಾಲೆಗೆ ಅಭಿಮಾನ ತಂದಿದೆ. ಕೀರ್ತಿ ವಿಸ್ತರಿಸಿ, ಎತ್ತರಿಸಲ್ಪಟ್ಟಿದೆ ಎಂದು ಸಂಗೀತ ವಿದುಷಿ ವಾಣಿ ಕಬೆಕ್ಕೋಡು ಹೇಳಿದರು.

ಪ್ರದ್ಯುಮ್ನ ಶರ್ಮ ನಮ್ಮೂರ ಪರಿಸರಗಳಲ್ಲಿ ಈ ಎಳೆ ಹರೆಯದಲ್ಲೇ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಈ ಅವಕಾಶಗಳು ಆತ ನಿರ್ಭಯವಾಗಿ ಮನೋಧರ್ಮಾಧರಿತವಾಗಿ ಅನಾಯಾಸ ಹಾಡಲು ಅನುಕೂಲವಾಯಿತು. ಯಾವುದೇ ಕಲೆ, ಕ್ರೀಡೆಗಳಿರಲಿ ಕಲಿಯುವುದೇ ಬೇರೆ, ಪ್ರದರ್ಶಿಸುವೂದೇ ಬೇರೆ. ಪ್ರದ್ಯುಮ್ನನಿಗೆ ವೇದಿಕೆ ಅವಕಾಶಗಳು ಸಿಕ್ಕ ಕಾರಣ ಆತ ಕಂಠಾಪಾಠ ಒಪ್ಪಿಸದೇ ಮನೋಧರ್ಮದಂತೆ ಹಾಡಲು ಕಲಿತ. ಇದು ರಾಜ್ಯ ಮಟ್ಟಕ್ಕೇರಿ ಎಗ್ರೇಡ್ ಪಡೆಯಲು ಪೂರಕವಾಯಿತು ಎನ್ನುತ್ತಾರೆ ವಿದುಷಿ ವಾಣಿಪ್ರಸಾದ್
ಕಬೆಕ್ಕೋಡು.

ಪ್ರದ್ಯುಮ್ನ ಶರ್ಮನಿಗೆ ಉಜ್ವಲ ಭವಿಷ್ಯವಿದೆ. ಆದರೆ ಇನ್ನೂ ಸಾಧನೆ ಅಗತ್ಯ. ಸಂಗೀತದಲ್ಲಿ ನಿರಂತರ ಸಾಧನೆಯಿಂದಲೇ ಪಳಗಲು ಸಾಧ್ಯ. ಆತನಿನ್ನೂ ಎಳೆಯ ವಿದ್ಯಾರ್ಥಿ. ಸ್ವರ ಒಡೆಯಬೇಕಷ್ಟೇ. ಸ್ವರ ಒಡೆದಾಗ ಅನೇಕರು ಹಾಡಲು ಕಷ್ಟ ಎಃದು ಹಿಂಜರಿಯುವುದಿದೆ. ಇಂಥ ಸಂದರ್ಭಗಳಲ್ಲಿ ಧೈರ್ಯ ತುಂಬೀ, ಅಧ್ಯಯನ, ಸಾಧನೆಮುಂದುವರಿಸಬೇಕು. ಆತನಿಗೆ ನಿಜಕ್ಕೂ ಪ್ರೌಢ ಭವಿಷ್ಯವಿದೆ. ಪ್ರಸ್ತುತ ಇತನ ಎಗ್ರೇಡ್ ಸಾಧನೆ ನನಗೆ ನಮ್ಮ ಸಂಗೀತ ಶಾಲೆಗೆ ಸಂಭ್ರಮದ ಖುಷಿ ತಂದಿದೆ, ಇದು ನಮ್ಮದಷ್ಟೇ ಅಲ್ಲ, ಗಡಿನಾಡಿಗೆ ಸಂಭ್ರಮ ಎಂದರು ವಾಣಿಪ್ರಸಾದ್.

ಪ್ರದ್ಯುಮ್ನ ಶರ್ಮ ಬದಿಯಡ್ಕ ನವಜೀವನ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ಶಾಸ್ತ್ರೀಯ ಸಂಗೀತ, ಭಾವಗೀತೆ ಗಾಯನ , ದಾಸರಪದಗಳು ಆತನಿಗೆ ಆಸಕ್ತಿ. ಉದ್ಯಮಿ ರಂಗಶರ್ಮ ಉಪ್ಪಂಗಳ ಹಾಗೂ ಸ್ಮಿತಾ ದಂಪತಿಯ ಪುತ್ರ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00