- ಖಾಸಗಿ ವ್ಯಕ್ತಿ ವಶದಲ್ಲಿರಿಸಿದ್ದ ಭೂಮಿ ಪಂಚಾಯತ್ ವಶಕ್ಕೆ : ತೆಮರ್ ಮೈದಾನಕ್ಕೆ ಪುತ್ತಿಗೆ ಪಂ.ಮೈದಾನವೆಂದು ಫಲಕ ಸ್ಥಾಪನೆ
ಪುತ್ತಿಗೆ : ಪುತ್ತಿಗೆ, ಬದಿಯಡ್ಕ, ಎಣ್ಮಕಜೆ ಗ್ರಾಮ ಪಂಚಾಯತುಗಳ ಸಂಗಮಸ್ಥಳ ಹಾಗೂ ಪುತ್ತಿಗೆ ಗ್ರಾಮ ಪಂಚಾಯತಿನ 5ನೇ ವಾರ್ಡು ಮುಂಡಿತ್ತಡ್ಕ ಪಳ್ಳ ಸಮೀಪದ
ಅರಿಯಪ್ಪಾಡಿ ಯ ತೆಮರ್ ಮೈದಾನ ಇನ್ನು ಮುಂದೆ ಪುತ್ತಿಗೆ ಪಂಚಾಯತ್ ಮೈದಾನ ಎಂದು ಗುರುತಿಸಲ್ಪಡಲಿದೆ.
ಸುದೀರ್ಘ ಕಾಲದಿಂದ ಸರಕಾರಿ ಸ್ಥಳವನ್ನು ಕೈವಶ ಇರಿಸಿಕೊಂಡು ಇದು ಖಾಸಗಿ ಸ್ಥಳವೆಂದು ತೆಮರ್ ಮೈದಾನವನ್ನು ವ್ಯಕ್ತಿಯೊಬ್ಬರು
ವಶದಲ್ಲಿರಿಸಿಕೊಂಡಿದ್ದರು. ಇದು ಸರಕಾರಿ ಸ್ಥಳವೆಂದು ತೀರ್ಪಿತ್ತು 1998ರಲ್ಲಿ ಈ ಕುರಿತಾದ ವ್ಯಾಜ್ಯವನ್ನು ಹೈಕೋರ್ಟು ತಿರಸ್ಕರಿಸಿತ್ತು.
ಬಳಿಕ ಲ್ಯಾಂಡ್ ಟ್ರಿಬ್ಯೂನಲ್ ನಿಂದ ಅನುಕೂಲಕರ ತೀರ್ಪು ಪಡೆದ ಖಾಸಗಿ ವ್ಯಕ್ತಿ ಸ್ಥಳವನ್ನು ಕೈವಶ ಇರಿಸಿಕೊಂಡಿದ್ದರು. ಈ ಕುರಿತು ಕಳೆದ 9ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಮಾರ್ ಹಾಗೂ ವಾರ್ಡು ಸದಸ್ಯ ಅಬ್ದುಲ್ ಮಜೀದ್ ಮತ್ತು ಪಂಚಾಯತ್ ಆಡಳಿತ ಸಮಿತಿ ನಡೆಸಿದ ಕಾನೂನು ಹೋರಾಟಗಳ ಹಿನ್ನೆಲೆಯಲ್ಲಿ ಉಪ್ಪಳದಲ್ಲಿ ನಡೆದ ತಾಲೂಕು ಅದಾಲತ್ ನಲ್ಲಿ ಕೇಸು ಪರಿಗಣಿಸಿ ಮೈದಾನವು ಪಂಚಾಯತಿನ ಸ್ಥಳವೆಂದು ತೀರ್ಪಿತ್ತು ವಶಪಡಿಸಲು ಆದೇಶಿಸಿದೆ.
ಇದರಂತೆ ತೆಮರ್ ಮೈದಾನವನ್ನು ವಶಪಡಿಸಿ ಅಲ್ಲಿ ಪುತ್ತಿಗೆ ಗ್ರಾ.ಪಂ.ಫಲಕ ಹಾಕಲಾಯಿತು.
ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಫಲಕ ಸ್ಥಾಪಿಸಿ ಮೈದಾನ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್, ಇನ್ನೋರ್ವ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತ, ಗ್ರಾ.ಪಂ. ಸದಸ್ಯೆ ಪ್ರೇಮ ಎಸ್.ರೈ, ಸಾಮಾಜಿಕ ಕಾರ್ಯಕರ್ತ ಕಮರುದ್ದೀನ್, ಡಿ.ಎನ್.ರಾಧಾಕೃಷ್ಣ, ಶಿವಪ್ಪ ರೈ, ಪ್ರದೀಪ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.