ನುಡಿನಮನ / ಮಾಯಿಪ್ಪಾಡಿ ತುಕಾರಾಮ ಆಚಾರ್ಯ ರ ಅಗಲಿಕೆ ಗಡಿನಾಡಿನ ನಷ್ಟ…

ಅಗಲಿರುವುದು ಸಾಂಪ್ರದಾಯಿಕ ವಾಸ್ತು, ಶಿಲ್ಪ ಕುಲಕಸುಬು ಕೌಶಲ್ಯದ ಮಹಾಪ್ರವೀಣ*

by Narayan Chambaltimar
  • ನುಡಿನಮನ / ಮಾಯಿಪ್ಪಾಡಿ ತುಕಾರಾಮ ಆಚಾರ್ಯ ರ ಅಗಲಿಕೆ ಗಡಿನಾಡಿನ ನಷ್ಟ…
  • *ಅಗಲಿರುವುದು ಸಾಂಪ್ರದಾಯಿಕ ವಾಸ್ತು, ಶಿಲ್ಪ ಕುಲಕಸುಬು
    ಕೌಶಲ್ಯದ ಮಹಾಪ್ರವೀಣ*

✍️ ♦️ಎಂ.ನಾ. ಚಂಬಲ್ತಿಮಾರ್
(ಪ್ರಧಾನ ಸಂಪಾದಕರು, ಕಣಿಪುರ ಡಿಜಿಟಲ್ ಮೀಡಿಯ)

ಭರ್ತಿ 85ವರ್ಷಗಳ ತುಂಬು ಸಂತೃಪ್ತ ಜೀವನ ಯಾನ ನಡೆಸಿ, ನಾಡ ಜನರೆಲ್ಲರ ಪ್ರೀತಿಯೊಲುಮೆಗೆ ಪಾತ್ರರಾಗಿದ್ದ ಗಡಿನಾಡಿನ ಜನಪ್ರಿಯ ವಾಸ್ತುತಜ್ಞ, ಶಿಲ್ಪಿ ಮಾಯಿಪ್ಪಾಡಿ ತುಕಾರಾಮ ಆಚಾರ್ಯರ(85) ಅಗಲುವಿಕೆಯಿಂದ ಗಡಿನಾಡು ಕಾಸರಗೋಡಿನ ಪರಂಪರಾಗತ ವಾಸ್ತುತಜ್ಞರೊಬ್ಬರು ನಾಡಿಗೆ ನಷ್ಟವಾಗಿದೆ.

ಕಾಸರಗೋಡು ತಾಲೂಕಿನಲ್ಲಿ ಮಾಯಿಪ್ಪಾಡಿ ತುಕಾರಾಮ ಆಚಾರ್ಯರೆಂದರ ಜನಪ್ರಿಯತೆಯಿಂದ ಮನೆಮಾತಾಗಿದ್ದ ಕಾಲವೊಂದಿತ್ತು. ಅದು ಇಂದಿಗೂ ಹಿರಿಯ ನಾಗರಿಕರೆಲ್ಲರ ಸ್ಮೃತಿಪಟಲದಲ್ಲಿ ಜೋಪಾನವಾಗಿದೆ. ಅವರ ವಾಸ್ತು ತಜ್ಞತೆಗೆ ಸಾಕ್ಷಿಯಾಗಿ ಗಡಿನಾಡಲ್ಲರಳಿದ ಸಾವಿರಾರು ಮನೆ, ಕೆರೆ, ಬಾವಿ, ದೈವಸ್ಥಾನ, ದೇವಸ್ಥಾನಗಳಿವೆ.

1939ರಲ್ಲಿ ಮಾಯಿಪ್ಪಾಡಿಯಲ್ಲಿ ಹುಟ್ಟಿದ ಅವರು ಆ ಕಾಲದ ಸಹಜತೆಯಾದ ಬಡತನದ ಬೇಗುದಿಯಲ್ಲಿ ಬೆಳೆದವರು.
ಸ್ವಾತಂತ್ರ್ಯ ಪೂರ್ವದ ದಿನಗಳನ್ನು ಬಾಲ್ಯದಲ್ಲಿ ಕಂಡವರು. ಮಾಯಿಪಾಡಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರೂ ಬಡತನದಿಂದಾಗಿ ಎಳವೆಯಲ್ಲೇ ಕುಲಕಸುಬಿಗೆ ಮೊರೆ ಹೋಗಬೇಕಾಯಿತು. ಆದರೂ ಛಲದಿಂದ ರಾತ್ರಿ ಶಾಲೆಗೆ ತೆರಳಿ ಐದನೇ ತರಗತಿ ತೇರ್ಗಡೆಯಾದರು. ಬಳಿಕ ಮರದ ಕೆಲಸವಾದ ಕುಲಕಸುಬಿನೊಂದಿಗೆ ಜೀವನ ಯಾನಕ್ಕೆ ನಾಂದಿ ಹಾಡಿದರು.

1962ರಲ್ಲಿ ಕೇರಳದ ಕಣ್ಣಾನೂರಿಗೆ ತೆರಳಿ ಪ್ರಸಿದ್ಧರಾಗಿದ್ದ ಕುಂಞಿರಾಮ ಮೇಲಾಚಾರಿ ಶಿಷ್ಯತ್ವ ಪಡೆದು ಶಿಲ್ಪ ಶಾಸ್ತ್ರ, ಶಿಲ್ಪಕಲೆಯನ್ನು ಅಧ್ಯಯನ ಮಾಡಿದರು. ಸುದೀರ್ಘ 25ವರ್ಷಗಳ ಶಿಲ್ಪಕಲಾ ಯಾನ ದ ಬಳಿಕ ಅವರು ಸ್ವಯಂ ಪ್ರೇರಣೆಯಿಂದ ವಾಸ್ತುಶಿಲ್ಫ ಶಾಸ್ತ್ರವನ್ನೂ ಅಧ್ಯಯನ ಮಾಡಿದರು. ಬಳಿಕ ಕಾಸರಗೋಡಿನಲ್ಲೇ ನೆಲೆಸಿದ ಅವರ ವಾಸ್ತು ನಿರ್ಣಯದಂತೆ ಗಡಿನಾಡಿನ ಜನರನೇಕರ ಮನೆ,ಕೆರೆ,ಬಾವಿಗಳು ನಿರ್ಮಾಣಗೊಂಡಿವೆ. ತೀರಾ ಇತ್ತೀಚಿನ ದಶಕದ ವರೆಗೂ ಅವರಿಗೆ ಬೇಡಿಕೆಯ ಜನಪ್ರಿಯತೆ ಇತ್ತು. ಎರಡೂವರೆ ದಶಕದ ಹಿಂದೆ ಕಾಸರಗೋಡಿನ ನಾಯಕ್ಸ್ ರಸ್ತೆಯಲ್ಲಿ ಕಚೇರಿ ಹೊಂದಿ ವಾಸ್ತು ನಿರ್ಣಯಕ್ಕೆ ಸಂಬಂಧಿಸಿದ ಜನತಾದರ್ಶನ, ಚಿಂತನ-ಮಂಥನ ನಡೆಸುತ್ತಿದ್ದರು. ಈ ಸಂದರ್ಭ ಮತ ಭೇದವಿಲ್ಲದೇ ಜನರು ಅವರನ್ನು ಸಮೀಪಿಸುತ್ತಿದ್ದರು.

ಶುದ್ಧ ಆಚಾರವಂತಿಕೆಯನ್ನು ಬಯಸಿ ಪ್ರೀತಿಸುತ್ತಿದ್ದ ಅವರು ಧಾರ್ಮಿಕ ಶ್ರದ್ಧಾಳು. ರಾ.ಸ್ವ. ಸಂಘದ ಕಾರ್ಯಕರ್ತ. 1973ರಿಂದ 83ರ ತನಕ ಮಧೂರು ಕಾಳಿಕಾಂಬ ಮಠದ ಅಧ್ಯಕ್ಷರಾಗಿ ದುಡಿದಿದ್ದ ಅವರು 87ರಲ್ಲಿ ನಡೆದ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗೆ ಅಧ್ಯಕ್ಷರಾಗಿದ್ದರು. ಗಡಿನಾಡಿನ ಅನೇಕ ದೇವಾಲಯಗಳ ಬ್ರಹ್ಮಕಲಶ ಕೈಂಕರ್ಯಗಳಲ್ಲೂ ದುಡಿದಿದ್ದ ಅವರು ಸನಾತನ ಪರಂಪರೆಯನ್ನು ಪ್ರೀತಿಸಿದ್ದರು, ಪೋಷಿಸಿದ್ದರು. ತನ್ನ ಕುಟುಂಬ ಸಂಸಾರದ ಮೇಲೂ ಮಮತೆಯ ಕಾಳಜಿ ಹೊಂದಿದ್ದ ಅವರು ನಾಡಿನ ಜನರ ಒಲವಿಗೆ ಭಾಜನರಾಗಿದ್ದರು.

ತನ್ನ ವಿಶ್ವಕರ್ಮ ಸಮುದಾಯದ ನಾಯಕರಾಗಿ , ಕುಲಗುರು ಪೀಠದ ಮೇಲೆ ಅಚಲ ಶ್ರದ್ಧೆಯ ಡಗೌರವದಿಂದ ದುಡಿದು, ಪೀಠದ ಪುನರುತ್ಥಾನಕ್ಕೆ ಅವಿರತ ಸೇವೆ ಸಲ್ಲಿಸಿದ್ದರು.
ಬೆಳಗುತ್ತಿ ಮಠದ ಪುನರ್ ಸ್ಥಾಪನೆಯಲ್ಲೂ ಪದಾಧಿಕಾರಿಯಾಗಿ ದುಡಿದಿದ್ದರು.

ಇವರ ನಿಸ್ವಾರ್ಥ ಸೇವೆ ಪರಿಗಣಿಸಿ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದಿಂದ ಶ್ರೀ ಸರಸ್ವತಿ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00