- ಗಡಿನಾಡ ತಾಳಮದ್ದಳೆ ರಂಗದ ಹೆಸರಾಂತ ಅರ್ಥದಾರಿ ಪಕಳಕುಂಜ ಇನ್ನಿಲ್ಲ : ಮೊನಚುಳ್ಳ ಸರಸ ಮಾತಿನ ಪ್ರೌಢ ಅರ್ಥದಾರಿಯ ವಿಯೋಗ
ವಿಟ್ಲ : ತಾಳಮದ್ದಳೆ ಕ್ಷೇತ್ರದ ಹಿರಿಯ ಮತ್ತು ಪ್ರತ್ಯುತ್ಪನ್ನಮತಿ ಅರ್ಥಗಾರಿಕೆಯ ಹೆಸರಾಂತ ಕಲಾವಿದರಾಗಿದ್ದ ಪಕಳಕುಂಜ ಶಾಮ ಭಟ್ (76)ನಿಧನರಾದರು. ಶಾರೀರಿಕ ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜ.7ರಂದು ರಾತ್ರಿ ವಿಧಿವಶರಾದರು.
ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ 32ವರ್ಷಗಳ ಅಧ್ಯಾಪನ ವೃತ್ತಿಗೈದು ನಿವೃತ್ತರಾಗಿದ್ದ ಅವರು ಹವ್ಯಾಸಿ ತಾಳಮದ್ದಳೆ ರಂಗದ ಉತ್ಕೃಷ್ಟ ಅರ್ಥದಾರಿಯಾಗಿದ್ದರು. ಸರಸ ಭರಿತ ಹಾಸ್ಯ ಮಿಶ್ರಿತ ಲಘು ಧಾಟಿಯ ಅವರ ಸಂವಾದ ಶೈಲಿ ಮತ್ತು ಮಾತಿನ ಮೊನಚು ಯಾವುದೇ ಕೂಟದ ಕಳದಲ್ಲೂ ಅವರನ್ನು ಎತ್ತರಿಸಿ ತೋರಿಸುತಿತ್ತು. ಕಾಸರಗೋಡಿನ ಉಳಿಯ ಧನ್ವಂತರಿ ಕಲಾಸಂಘ ನಡೆಸಿದ ಹವ್ಯಾಸಿ ತಾಳಮದ್ದಳೆ ಸ್ಪರ್ಧೆಯಲ್ಲಿ ಅತ್ಯುತ್ತಮ ಅರ್ಥದಾರಿ ಪ್ರಶಸ್ತಿಯನ್ನೂ ಪಡೆದಿದ್ದ ಅವರು ಗಡಿನಾಡಿನ ಹವ್ಯಾಸಿ ತಾಳಮದ್ದಳೆ ಕ್ಷೇತ್ರದ ಬೇಡಿಕೆಯ, ಅನಿವಾರ್ಯ ಕಲಾವಿದರೆಂದು ಗುರುತಿಸಿಕೊಂಡಿದ್ದರು.
ಸಾಹಿತ್ಯಾಸಕ್ತರಾಗಿದ್ದ ಅವರು ಕೆಲವು ನಾಟಕ, ಯಕ್ಷಗಾನ ಪ್ರಸಂಗ ರಚಿಸಿದ್ದರು. 2ಸಾವಿರಕ್ಕೂ ಅಧಿಕ ಚುಟುಕ, ಮುಕ್ತಕ ಬರೆದಿದ್ದರು.
ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನಗಲಿದ್ದಾರೆ