- ಹೋರಾಟದ ಬದುಕಿಗೆ ವಿದಾಯ : ಶಸ್ತ್ರ ಸನ್ಯಾಸಕ್ಕೆ ಸಜ್ಜಾದ ನಕ್ಸಲೀಯ ನಾಯಕಿಯರು
- ವಿಕ್ರಂಗೌಡ ಎನ್ಕೌಂಟರ್ ಬಳಿಕ ಅತಂತ್ರರಾದ ನಕ್ಸಲರು : ಮೋಸ್ಟ್ ವಾಂಟೆಡ್ ನಕ್ಸಲೀಯ ನಾಯಕಿಯರ ಸಹಿತ 6ಮಂದಿ ನಾಳೆ ಶರಣಾಗತಿ
ಚಿಕ್ಕಮಗಳೂರು (ಕಣಿಪುರ ಸುದ್ದಿಜಾಲ): ನಕ್ಸಲ್ ನಾಯಕ ವಿಕ್ರಂ ಗೌಡ ಪೋಲೀಸ್ ಎನ್ಕೌಂಟರಿಗೆ ಬಲಿಯಾದ ಬಳಿಕ ಅತಂತ್ರರಾಗಿರುವ ಆರು ಮಂದಿಯನ್ನೊಳಗೊಂಡ ಒಂದು ಗುಂಪು ನಕ್ಸಲೀಯರು ನಾಳೆ ಶರಣಾಗುವುದು ಖಚಿತಗೊಂಡಿದೆ. ಶರಣಾದರೆ ಸರಕಾರವೇ ಪುನರ್ವಸತಿ ಸೌಲಭ್ಯಗಳನ್ನೊದಗಿಸುವ ಭರವಸೆ ಹಿನ್ನೆಲೆಯಲ್ಲಿ ನಕ್ಸಲೀಯ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ಶರಣಾಗುತ್ತಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತ ಸಮಿತಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ಅಧಿಕಾರಿಗಳ ಸಮ್ಮುಖ ನಕ್ಸಲ್ ಶರಣಾಗತಿ ನಡೆಯಲಿದೆ. ನಕ್ಸಲ್ ಪಡೆಯ ತುಂಗಾ ದಳದ ನಾಯಕತ್ವ ಹೊಂದಿದ್ದ ಮುಂಡಗಾರು ಲತಾ, ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ, ಜೀಶಾ ರಾಣಿ ನಾಳೆ ಶರಣಾಗುವ ನಕ್ಸಲರೆಂದು ಗುರುತಿಸಲಾಗಿದೆ.
ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯುಕ್ತವಾಗಿ ನಡೆಯಬೇಕು, ಆತ್ಮ ಗೌರವಕ್ಕೆ ಧಕ್ಕೆಯಾಗಬಾರದು ಮತ್ತು ಹೋರಾಟದ ಮಾರ್ಗ ಬದಲಿಸಿ ಪ್ರಜಾತಾಂತ್ರಿಕ ವ್ಯವಸ್ಥೆಯ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಲು ಅಡ್ಡಿಯುಂಟಾಗಬಾರದೆಂಬ ಮನವಿಯನ್ನು ಶರಣಾಗುವ ನಕ್ಸಲರು ಸರಕಾರದ ಮುಂದಿಟ್ಟಿದ್ದಾರೆ.
ನಕ್ಸಲರ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಿಶೇಷ ನ್ಯಾಯಾಲಯದಲ್ಲಿ ಕೇಸುಮುಕ್ತ ಮಾಡುವುದಲ್ಲದೇ ಆರ್ಥಿಕ ನೆರವು ಸಹಿತ ಪುನರ್ವಸತಿ, ಉದ್ಯೋಗ ಭರವಸೆಯನ್ನು ಸರಕಾರ ನೀಡಿದೆ.