ಕೇರಳದ ದೇವಾಲಯಗಳಲ್ಲಿ ಪುರುಷರು ಅಂಗಿ ತೆಗೆದು ಹೋಗುವ ಸಂಪ್ರದಾಯವನ್ನು ಪ್ರಶ್ನಿಸಿ ವಿವಾದಕ್ಕೆ ಮುನ್ನುಡಿ ಬರೆದ ಕೇರಳ ವರ್ಕಲದಲ್ಲಿರುವ ಶ್ರೀನಾರಾಯಣ ಗುರು ಪರಂಪರೆಯ ಶಿವಗಿರಿ ಮಠದ ಮುಖ್ಯಸ್ಥರಾದ ಸಚ್ಛಿದಾನಂದ ಸ್ವಾಮಿಯವರು ಶಬರಿಮಲೆಯಲ್ಲಿ ಮಹಿಳೆಯರಿಗೂ ದರ್ಶನಾವಕಾಶ ನೀಡಬೇಕೆಂದಾಗ್ರಹಿಸಿ ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ನ್ಯೂಸ್ -18 ಚ್ಯಾನೆಲ್ ಗೆ ಪ್ರತ್ಯೇಕ ನೀಡಿದ ಸಂದರ್ಶನದಲ್ಲಿ ಈ ಕುರಿತು ಉಲ್ಲೇಖಿಸಿದ ಅವರು “ಶಬರಿಮಲೆಗೆ ಮಹಿಳೆಯರು ಹೋದರೆ ಅಲ್ಲಿನ ಚೈತನ್ಯಕ್ಕೆ ಧಕ್ಕೆಯಾಗಬಹುದೆಂಬ ಅಭಿಪ್ರಾಯದೊಂದಿಗೆ ಸಹಮತ ಇಲ್ಲ. ಶಬರಿಮಲೆಗೆ ಮಹಿಳೆಯರೂ ಹೋಗಲಿ. ಆದರೆ ಅಲ್ಲಿನ ಭಾರೀ ಜನದಟ್ಟಣೆಯನ್ನು ಗಮನಿಸಿ ಮಹಿಳೆಯರಿಗೆಂದೇ ಪ್ರತ್ಯೇಕ ಋತುವೊಂದನ್ನು ಆಯ್ದುಕೊಳ್ಳುವುದು ಉಚಿತ ಎಂದರು.
ಶಬರಿಮಲೆ ಮಹಿಳಾ ಪ್ರವೇಶನ ವಿಷಯದಲ್ಲಿ ಶಿವಗಿರಿ ಮಠಕ್ಕೆ ಸ್ಪಷ್ಟ ನಿರ್ಧಾರ ಇದೆ. ನಾವು ಮಹಿಳಾ ಪ್ರವೇಶಕ್ಕ ವಿರೋಧವಲ್ಲ. ಈ ಹಿಂದೆಯೇ ನಾವು ನಮ್ಮಾಭಿಪ್ರಾಯ ಹೇಳಿದ್ದೆವೆಂದು ಸ್ವಾಮೀಜಿ ಹೇಳಿದ್ದಾರೆ.
ಹಾಗೆಯೇ ತಿರುವನಂತಪುರ ಶ್ರೀಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಮಹಿಳೆಯರು ಚೂಡಿದಾರ್ ಧರಿಸಿ ಪ್ರವೇಶಿಸುವಂತಿಲ್ಲ. ಚೂಡಿದಾರ್ ನ ಮೇಲೆ ತುಂಡುಬಟ್ಟೆ ಉಟ್ಟು ಪ್ರವೇಶಿಸಲು ಅನುಮತಿ ಇದೆ. ಇದೆಲ್ಲ ಅಂಧಾಚಾರದ ಅನುಕರಣೆ. ಇದು ಪರಿಷ್ಕಾರಗೊಳ್ಳಬೇಕಾದ ಕಾಲ ಎಂದೋ ಕಳೆದಿದೆ. ಇದರ ಧಾರ್ಮಿಕ ಮೌಲ್ಯ ಸಮಿಜದಲ್ಲಿ ಚರ್ಚಿತವಾಗಿ ಕಾಲಾನುಸಾರವಾದ ಪರಿಷ್ಕರಣೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಶಿವಗಿರಿ ಸ್ವಾಮೀಜಿಯವರ ಹೇಳಿಕೆ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಅಭಿಪ್ರಾಯಕ್ಕೆ ಪರ ಮತ್ತು ವಿರೋಧಗಳೆರಡೂ ಪ್ರಕಟವಾಗಿದೆ. ದೇವಾಲಯದ ಆಚಾರಗಳು ನಿರ್ಣಯಿಸಲ್ಪಡುವುದು ಸಾಮಾಜಿಕ ಚರ್ಚೆಗಳಿಂದಲ್ಲ. ಇಷ್ಟಕ್ಕೂ ದೇವಾಲಯದ ಆಚಾರಗಳು ಕೇರಳ ಎದುರಿಸುವ ಬಲುದೊಡ್ಡ ಸಮಸ್ಯೆಯಲ್ಲ. ಹಿಂದೂ ಧರ್ಮದ ಆಚಾರನುಷ್ಠಾನ ನಿಯಂತ್ರಣಕ್ಕೆ ಸಂಬಂಧಪಟ್ಟ ಹಕ್ಕು ಹೊಂದಿದ ತಂತ್ರಿಗಳಿದ್ದಾರೆ. ಶಿವಗಿರಿ ಮಠದ ಮೂಲಕ ಹಿಂದೂ ಆಚಾರವನ್ನಷ್ಟೇ ಪ್ರಶ್ನಿಸುವವರಿಗೆ ಅನ್ಯ ಮತದಲ್ಲಿರುವ ಸ್ವಾತಂತ್ರ್ಯ ನಿಷೇಧ, ಮೂಢನಂಬಿಕೆ ಕಾಣುತ್ತಿಲ್ಲವೇ ಎಂದು ಹಿಂದೂ ಐಕ್ಯ ವೇದಿಕೆ ಪ್ರಶ್ನಿಸಿದೆ.