ಚಿರತೆ ಭೀತಿ : ಭಯಮುಕ್ತ ಬದುಕಿಗಾಗಿ ಅರಣ್ಯ ಇಲಾಖಾ ಕಚೇರಿಗೆ ನೈಟ್ ಮಾರ್ಚ್
ಕಾಸರಗೋಡಿನ ಮುಳಿಯಾರು ಪಂಚಾಯತ್ ವ್ಯಾಪ್ತಿ ಮತ್ತು ಪರಿಸರ ಪ್ರದೇಶದ ನಾಗರಿಕರ ಮುಕ್ತ ಬದುಕಿಗೆ ಭಯಾತಂಕ ಸೃಷ್ಠಿಹಿರುವ ಚಿರತೆ ಭೀತಿ ನೀಗಿಸಲು ಅರಣ್ಯ ಇಲಾಖೆ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ರಾತ್ರಿ ಬೋವಿಕಾನದಲ್ಲಿರುವ ಅರಣ್ಯ ಇಲಾಖಾ ಕಚೇರಿಗೆ ರೈತ ಸಂಘದ ನೇತೃತ್ವದಲ್ಲಿ ಮಾರ್ಚ್ ನಡೆಯಿತು. ಮಾರ್ಚ್ ನಲ್ಲಿ ಭಯಾತಂಕಗೊಂಡ ನಾಗರಿಕರ ಪ್ರತಿಭಟನೆ ಮೊಳಗಿತು.
ಚಿರತೆ ಭೀತಿಯಿಂದ ನಾಗರಿಕರಿಗೆ ದಾರಿ ನಡೆಯಲಿಕ್ಕಾಗದ ಸ್ಥಿತಿ ಬಂದಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಮನೆಯಂಗಳಕ್ಕೆ ಚಿರತೆ ಧಾವಿಸಿ ನಾಯಿ, ದನಗಳನ್ನು ಆಕ್ರಮಿಸುತ್ತದೆ. ಈ ಪರಿಸ್ಥಿತಿಗೆ ಅರಣ್ಯ ಇಲಾಖೆ ಕ್ರಮಕೈಗೊಂಡು ಭಯಮುಕ್ತ ಜೀವನಕ್ಕೆ ಅವಕಾಶವೊದಗಿಸಬೇಕೆಂದು ಆಗ್ರಹಿಸಲಾಯಿತು.
ರೈತ ಸಂಘ ಜಿಲ್ಲಾ ಅಧ್ಯಕ್ಷ ಕೆ.ಕುಂಞಿರಾಮನ್ ಉದ್ಘಾಟಿಸಿದರು. ಕೆ.ವಿ.ಸಜೇಷ್ ಅಧ್ಯಕ್ಷತೆವಹೀಸಿದರು. ಸಿಪಿಐಎಂ ಕಾರಡ್ಕ ಏರಿಯಾ ಸಮಿತಿ ಕಾರ್ಯದರ್ಶಿ ಎಂ.ಮಾಧವನ್, ರೈತ ಸಂಘ ಏರಿಯಾ ಸೆಕ್ರಟರಿ ಇ.ಮೋಹನನ್ ಸೇರಿದಂತೆ ನಾಗರಿಕರು ಪ್ರತಿಭಟನಾ ಮಾರ್ಚ್ ಗೆ ನೇತೃತ್ವ ನೀಡಿದರು.