ಕಾಸರಗೋಡು : ತನ್ನ ತಂದೆಯನ್ನೇ ಮಾರಕಾಯುಧದಿಂದ ತಲೆಗೆ ಬಡಿದು ಕೊಲೆಗೈದ ಮಗ ಕೊಲೆಗೈದು ಒಂದು ವರ್ಷವಾಗುವ ಮುನ್ನವೇ ಪತ್ನಿ ಮನೆಯ ಬಾವಿಯ ರಾಟೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯೊಂದು ವರದಿಯಾಗಿದೆ.
ಕಾಸರಗೋಡು ಸಮೀಪದ ಮೇಲ್ಪರಂಬ ಪೋಲೀಸ್ ಠಾಣಾ ವ್ಯಾಪ್ತಿಯ ಪಳ್ಳಿಕೆರೆಯಲ್ಲಿ ಇಂದು(ಜ.7) ಬೆಳಿಗ್ಗೆ ಘಟನೆ ನಡೆದಿದೆ.
ಮೃತ ವ್ಯಕ್ತಿ ಪ್ರಮೋದ್ (36) ಎಂದು ಗುರುತಿಸಲಾಗಿದೆ.
ಈತ ತನ್ನ ತಂದೆಯನ್ನು ಕ್ಷುಲ್ಲಕ ಮನೆಜಗಳದ ಧ್ವೇಷದಲ್ಲಿ 2024 ಎಪ್ರೀಲ್ 1ರಂದು ಸಂಜೆ ಕೊಲೆಗೈದಿದ್ದನು. ತೆಂಗಿನಕಾಯಿ ಸುಲಿಯುವ ಉಪಕರಣದಿಂದ ತಲೆಗೆ ಹೊಡೆದು ತಂದೆ ಅಪ್ಪಕುಂಞಿ(65) ಎಂಬವರನ್ನು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಈತನಿಗೆ 2024ರ ಅಕ್ಟೋಬರ್ ತಿಂಗಳಲ್ಲಿ ಜಾಮೀನು ದೊರಕಿತ್ತು. ಕೇಸಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇದೇ ಜನವರಿ 13ರಂದು ವಿಚಾರಣೆ ನಿಮಿತ್ತ ಈತ ನ್ಯಾಯಾಲಯಕ್ಕೆ ಹಾಜರೋಗಬೇಕಿದ್ದ. ಈ ಮಧ್ಯೆ ಈತನ ಪತ್ನಿ ತಿಂಗಳುಗಳ ಹಿಂದೆ ಈತನನ್ನು ತೊರೆದು ಹೋಗಿದ್ದರೆನ್ನಲಾಗಿದೆ. ಇಂದು ಮುಂಜಾವ ಪತ್ನಿಯ ಮನೆಗೆ ಹೋಗಿ ಅವರ ಬಾವಿ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ನಡೆಸಿದ್ದಾನೆಂದು ಮೇಲ್ಪರಂಬ ಪೋಲೀಸರು ತಿಳಿಸಿದ್ದಾರೆ.