- ಕೆಎಸ್ಸಾರ್ಟೀಸಿ ಬಸ್ ದರ ಏರಿಕೆ : ಗಡಿನಾಡು ಕಾಸರಗೋಡಿಗೆ ಹೊರೆ
- ಅಂತರಾಜ್ಯ ಬಸ್ ದರ ಏರಿಕೆ ಹಿಂತೆಗೆಯಬೇಕು, ಇಲ್ಲದಿದ್ದರೆ ಹೋರಾಟ : ಅಶ್ವಿನಿ ಎಂ.ಎಲ್ ಮುನ್ನೆಚ್ಚರಿಕೆ
ಕಾಸರಗೋಡು: ಕರ್ನಾಟಕ ಆರ್‌ಟಿಸಿ ಬಸ್ ದರ ಏರಿಕೆ ಅಂತಾರಾಜ್ಯ ಪ್ರಯಾಣಿಕರಿಗೆ ಮತ್ತು ವಿಶೇಷವಾಗಿ ಗಡಿ ಜಿಲ್ಲೆಯಾದ ಕಾಸರಗೋಡು ಪ್ರದೇಶದ ಜನತೆಗೆ ತೀವ್ರ ತೊಂದರೆಯನ್ನೊದಗಿಸಿದೆ. ಅಪರಿಷ್ಕೃತವಾದ ಈ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಶೇಕಡಾ 15ರಷ್ಟು ದರ ಏರಿಕೆಯಾಗಿದ್ದು, ಕೇರಳ ಮತ್ತು ಕರ್ನಾಟಕ ನಡುವಿನ ಒಪ್ಪಂದದ ಪ್ರಕಾರ ಕೇರಳ ಆರ್‌ಟಿಸಿ ದರವೂ ಕಾಸರಗೋಡಿನ ಅಂತರ್ರಾಜ್ಯ ಬಸ್ ಗಳಲ್ಲಿ ಹೆಚ್ಚಾಗಿದೆ. . ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸಿರುವುದರಿಂದಲೇ ಸಾರಿಗೆ ನಿಗಮದ ವೆಚ್ಚದಲ್ಲಿ ಹೆಚ್ಚಳವಾಗಿದೆ. ಈ ಹೆಚ್ಚುವರಿ ಹೊರೆಯನ್ನು ಸಮತೋಲನಗೊಳಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಕುಟುಂಬಗಳಿಗೆ ಉಚಿತ ಪ್ರಯಾಣದ ಪ್ರಯೋಜನಗಳು ಬಿಟ್ಟು, ಬಜೆಟ್ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರದ ಈ ದರ ಏರಿಕೆಯನ್ನು ಜನವಿರೋಧಿ ಕ್ರಮ ಎಂದು ಟೀಕಿಸಿರುವ ಅಶ್ವಿನಿ ಎಂ.ಎಲ್., ಈ ನಿರ್ಧಾರದ ವಿರುದ್ಧ ಶೀಘ್ರವೇ ತೀವ್ರ ಪ್ರತಿಭಟನೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಬಸ್ ದರ ಏರಿಕೆ ಗಡಿನಾಡು ಕಾಸರಗೋಡು ಜನತೆಯ ಪಾಲಿಗೆ ಆರ್ಥಿಕ ಹೊರೆಯನ್ನುಂಟುಮಾಡಿದೆ. ಕೇರಳ ಸರಕಾರ ತೀರ್ಮಾನಿಸದೆಯೇ ಅಂತರಾಜ್ಯ ಸಾರಿಗೆ ಒಪ್ಪಂದದ ಮರೆಯಲ್ಲಿ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳುವ ಕೇರಳ ಸಾರಿಗೆ ಬಸ್ ಕೂಡಾ ಸಮಾನವಾಗಿ ದರ ಏರಿಸಿಕೊಂಡಿರುವುದು ಅಕ್ಷಮ್ಯ ಮತ್ತು ಖಂಡನೀಯ. ಇದರ ವಿರುದ್ದ ಜನಾಂದೋಲನ ನಡೆಸಬೇಕೆಂದು ಅಶ್ವಿನಿ ಅಭಿಪ್ರಾಯಪಟ್ಟರು.