- ಶ್ರೇಷ್ಠ ಕಲಾವಿದರನ್ನು ಕೊಟ್ಟ ಮಾತೆಯರಿಗೆ ಯಕ್ಷ ಸುವಾಸಿನಿ ಪುರಸ್ಕಾರ : ಹೊಸ ವಿಧಾನಕ್ಕೆ ಮುನ್ನುಡಿಯೊಂದಿಗೆ ಕದ್ರಿ ಹವ್ಯಾಸಿ ಬಳಗಕ್ಕೆ ತ್ರಿಂಶತಿ
- ಮಂಗಳೂರು ಪುರಭವನದಲ್ಲಿ ಆದರ್ಶ ಕಾರ್ಯಕ್ರಮ ನಡೆಸಿ ಪ್ರಶಂಸೆ ಪಡೆದ ಹವ್ಯಾಸಿ ಬಳಗ
ಕಳೆದ ಮೂರು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಸೃಜನಶೀಲ, ಮಹತ್ವಿಕೆಯ ಹೆಜ್ಜೆ ಗುರುತು ದಾಖಲಿಸಿರುವ
ಮಂಗಳೂರು ಕದ್ರಿಯ ಹವ್ಯಾಸಿ ಬಳಗ 30ರ ಸಂಭ್ರಮದಲ್ಲಿ 31ಮಂದಿಗೆ ಸನ್ಮಾನ, ಪುರಸ್ಕಾರ ಸಹಿತ ಗೌರವಾಭಿನಂದನೆ ಸಲ್ಲಿಸಿ ಕೃತಾರ್ಥವಾಗಿದೆ. ಈ ಪೈಕಿ ಯಕ್ಷಗಾನದಲ್ಲಿ ಇತಿಹಾಸ ವಿರಚಿಸಿ ಅಗಲಿದ ಆರು ಮಂದಿ ಕಲಾವಿದರ ಪತ್ನಿಯರಿಗೆ “ಯಕ್ಷ ಸುವಾಸಿನಿ” ಪುರಸ್ಕಾರವನ್ನಿತ್ತು ಗೌರವಿಸಿದ ಕ್ಷಣ ಮಂಗಳೂರು ಪುರಭವನದಲ್ಲಿ(ಜ.5) ಭಾವುಕ ಕ್ಷಣವನ್ನು ಮೂಡಿಸಿತು. ಜತೆಗೆ ಯಕ್ಷಗಾನದಲ್ಲಿ ಅಗಲಿದ ಮಹನೀಯ ಕಲಾವಿದರ ಪತ್ನಿಯರನ್ನು ಗುರುತಿಸಿ, ಅವರಿಗೆ ಮನೋಸ್ಥೈರ್ಯ ನೀಡುವ ಪುರಸ್ಕಾರ ಪ್ರದಾನ ಇದೇ ಮೊದಲ ಬಾರಿಗೆ ನಡೆದು ಹೊಸ ವಿಧಾನಕ್ಕೊಂದು ಪ್ರಶಂಸೆಯ ಮುನ್ನುಡಿ ಬರೆಯಿತು.
ಯಕ್ಷ ಸುವಾಸಿನಿಯರು
ಕೀರ್ತಿಶೇಷ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರ ಪತ್ನಿ ಚಂದ್ರಾವತಿ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಪತ್ನಿ ಹೇಮಲತಾ, ಕುಂಬ್ಳೆ ಚಂದ್ರಶೇಖರ ರ ಪತ್ನಿ ಜಯಂತಿ, ಸಂಪಾಜೆ ಶೀನಪ್ಪ ರೈಗಳ ಪತ್ನಿ ಗಿರಿಜಾವತಿ, ಉದ್ಯಾವರ ಜಯಕುಮಾರರ ಪತ್ನಿ ವಾರಿಜಾ ಅವರನ್ನು ಯಕ್ಷ ಸುವಾಸಿನಿ ಪುರಸ್ಕಾರ ಸಹಿತ ಆರತಿ ಬೆಳಗಿ ಯಕ್ಷಾಭಿವಂದನೆಯೊಂದಿಗೆ ಗೌರವಿಸಲಾಯಿತು. ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ವಾರಿಜಾ ಜಯಕುಮಾರ್ ಉದ್ಯಾವರ “ಕಲಾವಿದನ ಪತ್ನಿಯಾಗಿ ಬದುಕಿ, ಅವರು ಗತಿಸಿದ ಬಳಿಕವೂ ನಮ್ಮನ್ನು ಮರೆಯದೇ ಗುರುತಿಸಿದ ಈ ಪರಿಕ್ರಮ ದ ಹಿಂದೆ ಇರುವ ಹೃದಯವಂತಿಕೆಗೆ ಕೃತಜ್ಞತೆ ಎಂದರು.
ಪುರಸ್ಕಾರ ಪಡೆದ ಯಕ್ಷಸುವಾಸಿನಿ ಮಾತೆಯರ ಕುರಿತಾಗಿ ಹಿರಿಯ ಕಲಾವಿದ ಎಂ.ಕೆ.ರಮೇಶಾಚಾರ್ ಅಭಿನಂದನಾ ಮಾತನ್ನಾಡಿ “ಒಬ್ಬ ಕಲಾವಿದ ರೂಪುಗೊಳ್ಳಬೇಕಿದ್ದರೆ ಆತನ ಹಿಂದೆ ಸಮರ್ಥಳಾದ ಗೃಹಿಣಿ ಇರಲೇಬೇಕು. ಕಲಾವಿದ ಪ್ರಸನ್ನ ಚಿತ್ತನಾಗಿ ವೇಷ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎಂದು ಕರೆಸಿಕೊಳ್ಳಬೇಕಿದ್ದರೆ ಆತನಿಗೆ ಮನಶಾಂತಿಯೂ ಬೇಕು, ಮನೆ ಶಾಂತಿಯೂ ಬೇಕು. ಇದನ್ನಿತ್ತವರೇ ಮಡದಿಯರು. ಕಲಾವಿದರ ಮಡದಿಯರನ್ನು ಗೌರವಿಸಿದ ಈ ಪರಿಕ್ರಮ ಇಡೀ ಯಕ್ಷಗಾನ ಜಗತ್ತಿಗೆ ಮಾದರಿ, ಅನುಕರಣೀಯ ಎಂದರು.
ಅಗಲಿದ ಹವ್ಯಾಸಿ ಬಳಗದ ಕಲಾವಿದ ಎಂಎಂಸಿ ರೈ ಹಾಗೂ ಛಾಂದಸ ಶಿಮಂತೂರು ನಾರಾಯಣ ಶೆಟ್ಟಿ, ಪುತ್ತೂರು ಶ್ರೀಧರ ಭಂಡಾರಿ, ದೇವಕಾನ ಕೃಷ್ಣ ಭಟ್, ಬಿ.ನಾಗೇಶ್ ಪ್ರಭು, ಡಿ.ಕೃಷ್ಣಪ್ಪ ಕರ್ಕೇರ, ಕುಂಬ್ಳೆ ಸುಂದರರಾಯರನ್ನು ಸರ್ಪಂಗಳ ಈಶ್ವರ ಭಟ್ ಸಂಸ್ಮರಿಸಿ, ಹವ್ಯಾಸಿ ಬಳಗದ 3ದಶಕದ ಯಾನ ಮೆಲುಕಿದರು.
ಸಮಾರಂಭದಲ್ಲಿ ಹಿರಿಯ ವಿಶ್ರಾಂತ ಕಲಾವಿದರಾದ ಕೋಡಿ ಕುಷ್ಠ ಗಾಣಿಗ ಅವರಿಗೆ ಯಕ್ಷ ಕೌಶಿಕೆ ಪ್ರಶಸ್ತಿ, ಕಟೀಲು ರಮಾನಂದರಾವ್ ಅವರಿಗೆ ಯಕ್ಷ ತುಂಬುರ ಪ್ರಶಸ್ತಿ, ಕೊಕ್ಕಡ ಈಶ್ವರ ಭಟ್ ಅವರಿಗೆ ಯಕ್ಷ ಸೌಗಂಧಿಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ನಿಡ್ಳೆ ಗೋವಿಂದ ಭಟ್, ಉಜಿರೆ ಅಶೋಕ ಭಟ್, ಸಂಜಯ ಕುಮಾರ್ ರಾವ್, ಚೇವಾರು ಶಂಕರ ಕಾಮತ್ ಅವರಿಗೆ ಯಕ್ಷ ಸಂಮಾನ ನಡೆಯಿತು. ಹವ್ಯಾಸಿ ಯಕ್ಷ ಬಳಗದ ಯಾನದಲ್ಲಿ ಜತೆಗೂಡಿದ 18ಮಂದಿ ಕಲಾವಿದರಿಗೆ ಯಕ್ಷ ಗೌರವಾಭಿನಂದನೆ ನೀಡಲಾಯಿತು.
ಎಡನೀರು ಶ್ರೀ ಸಚ್ಚಿದಾನಂದಭಾರತಿ ಸ್ವಾಮೀಜಿ, ಕಟೀಲಿನ ಆಸ್ರಣ್ಣರ ಸಹಿತ ಗಣ್ಯರು ಉಪಸ್ಥಿತರಿದ್ದ ಸಮಾರಂಭವನ್ನು ಕಲಾವಿದ ಸುನಿಲ್ ಪಲ್ಲಮಜಲು ನಿರೂಪಿಸಿದರು. ಹವ್ಯಾಸಿ ಯಕ್ಷ ಬಳಗದ ಸಂಚಾಲಕ ಶರತ್ ಕುಮಾರ್ ಕದ್ರಿ ನೇತೃತ್ವ ನೀಡಿದರು. ಬಳಿಕ ರಾಜಾ ದಂಡಕ ಯಕ್ಷಗಾನ ನಡೆಯಿತು.