- ಚಂದ್ರಗಿರಿ ಹೊಳೆ ದಾಟಿದ ಚಿರತೆಗಳು : ಕಾಸರಗೋಡಿನ 3 ಪಂಚಾಯತಿಗೆ ಚಿರತೆ ಕಾಟದ ವ್ಯಾಪನ
ಕಾಸರಗೋಡು ಜಿಲ್ಲೆಯ ಮುಳಿಯಾರು, ಕಾರಡ್ಕ ಗ್ರಾ.ಪಂ ವ್ಯಾಪ್ತಿಯ ಹೊರತೀಗ ಪಕ್ಕದ ಬೇಡಡ್ಕ ಪಂಚಾಯತ್ ವ್ಯಾಪ್ತಿಯಲ್ಲೂ ನಿರಂತರ ಚಿರತೆ ಕಂಡುಬಂದಿರುವುದು ಚಿರತೆ ವ್ಯಾಪನದ ಸುಳಿವು ನೀಡಿದೆ. ನಿನ್ನೆ ರಾತ್ರಿ ಬೇಡಡ್ಕ ಪಂಚಾಯತಿನ ಮರುದಡ್ಕದಲ್ಲಿ ನಾಗರಿಕರು ಚಿರತೆಯನ್ನು ಕಂಡಿದ್ದಾರೆ. ಬಳಿಕ ಅರಣ್ಯ ಇಲಾಖೆಯವರು ನಾಗರಿಕ ಸಹಾಯದಿಂದ ಹುಡುಕಿದರೂ ಚಿರತೆ ಪತ್ತೆಯಾಗಿರಲಿಲ್ಲ. ಶುಕ್ರವಾರದಂದು ರಾತ್ರಿ ಈ ಪರಿಸರದಲ್ಲಿ ಕೃಷಿಕರೊಬ್ಬರ ಹಟ್ಟಿಗೆ ಬಂದ ಚಿರತೆ ಕಟ್ಟಿ ಹಾಕಿದ್ದ ದನದ ಕರುವನ್ನು ಆಕ್ರಮಿಸಿದೆ. ಕೂಡಲೇ ಮನೆಯವರು ಬೆಳಕು ಹಾಯಿಸಿ ಧಾವಿಸಿದಾಗ ಚಿರತೆ ಓಡಿತ್ತು.
ಈ ಮೊದಲು ಮುಳಿಯಾರು ಪಂಚಾಯತಿನಲ್ಲಿ ಮಾತ್ರವೇ ಇದ್ದ ಚಿರತೆ ಕಾಟ ಈಗ ಸಮೀಪ ಪಂಚಾಯತಿಗಳಿಗೂ ವ್ಯಾಪಿಸಿರುವುದು ನಾಗರಿಕರಲ್ಲಿ ಭೀತಿ ಮೂಡಿಸಿದೆ.
ಚಿರತೆ ಮರಿ ಹಾಕಿ ಸಂಖ್ಯೆ ವೃದ್ಧಿಸಿಕೊಂಡಿರುವುದೇ ಇದಕ್ಕೆ ಕಾರಣವೆಂದು ಅಂದಾಜಿಸಲಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದರೂ ಒಂದೇ ಒಂದು ಚಿರತೆ ಬೋನಿಗೆ ಬಿದ್ದಿಲ್ಲ. ಕಾಡಿನಲ್ಲಿ ಕ್ಯಾಮರಾ ಇರಿಸಿದರೂ ಅದರ ಕಣ್ಣಣಿಗೃ ಚಿರತೆ ಬೀಳುತ್ತಿಲ್ಲ. ಮುಳಿಯಾರು ಪಂಚಾಯತಿನಿಂದ ಚಂದ್ರಗಿರಿ ಹೊಳೆ ದಾಟಿ ಬೇಡಡ್ಕ ಪಂಚಾಯತ್ ವ್ಯಾಪ್ತಿಗೆ ಚಿರತೆ ತೆರಳಿರಬೇಕೆಂದು ನಾಗರಿಕರು ಹೇಳುತ್ತಾರೆ. ಕನಿಷ್ಟ ಹತ್ತಿಪ್ಪತ್ತು ಚಿರತೆಗಳು ಇಲ್ಲಿರಬಹುದೆಂದು ನಾಗರಿಕರು ಅಂದಾಜಿಸಿದ್ದಾರೆ.
ಚಿರತೆಗಳನ್ನು ನಿಯಂತ್ರಿಸುವ ದಾರಿ ಏನೆಂದರಿಯದೇ ಅರಣ್ಯ ಇಲಾಖೆಯೂ ಅಸಹಾಯಕತೆ ಪ್ರಕಟಿಸುತ್ತಿದೆ.