ಎಳೆಯ ಮನಗಳು ಪಕ್ವಪ್ರೌಢಿಮೆಯಿಂದ ಬಲಿಯಲು ಬೇಕು ಪ್ರಾಕೃತಿಕ ಜ್ಞಾನ… ನಮ್ಮ ಮನೆ ಪರಿಸರವೇ ಅರಿವಿನ ಪ್ರವಾಸಿ ತಾಣವಲ್ಲವೇ..?

by Narayan Chambaltimar
  • ಎಳೆಯ ಮನಗಳು ಪಕ್ವಪ್ರೌಢಿಮೆಯಿಂದ ಬಲಿಯಲು ಬೇಕು ಪ್ರಾಕೃತಿಕ ಜ್ಞಾನ…
    ನಮ್ಮ ಮನೆ ಪರಿಸರವೇ ಅರಿವಿನ ಪ್ರವಾಸಿ ತಾಣವಲ್ಲವೇ..?

ಮನೆ ಪಕ್ಕದ ಪ್ರಾಕೃತಿಕ ಸೌಂದರ್ಯಗಳ ಬಗ್ಗೆ ಮಕ್ಕಳಿಗೆಷ್ಟು ತಿಳಿದಿದೆ.? ನಿತ್ಯ ಜೀವನದ ಭಾಗವಾಗಿರುವ ಅವುಗಳ ಬಗೆಗೆ ನಾವು ಮಕ್ಕಳಿಗೆಷ್ಟು ಹೇಳಿಕೊಟ್ಟಿದ್ದೇವೆ.? ಹಾಗಾದರೆ ನೆಲ-ಜಲದ ಉಳಿಯುವಿಕೆಗೆ ಪರಿಸರ ಪ್ರವಾಸ ಆರಂಭಿಸಿದರೆ ಹೇಗೆ.? ಇದು,ನಷ್ಟವಂತೂ ಆಗದ ಆದರೆ,ಸಿಗುವ ಲಾಭಕ್ಕೆ ಬೆಲೆಕಟ್ಟಲಾಗದ ಸಂಭ್ರಮವಾಗುವುದರಲ್ಲಿ ಸಂದೇಹ ಬೇಡ..!

ಮನೆ ಪರಿಸರವೇ ಪ್ರವಾಸಿ ತಾಣವಲ್ಲವೇ….?

ಅದೊಂದು ಸಂಜೆ.ನಮ್ಮನೆ ಆಸು ಪಾಸು ಮಗನೊಂದಿಗೆ ಹೆಜ್ಜೆ ಹಾಕುತ್ತಿದ್ದೆ.ಬುಲ್‌ಬುಲ್ ಹಾಗೂ ಪಾರಿವಾಳಗಳನ್ನು‌ ತೋರಿಸಿದೆ. ನೆರೆಮನೆಯ ಕಿರಣ ಹಾಗೂ ಸುಮಿತ್ರಳನ್ನೂ ಪರಿಚಯಿಸಿದೆ.ಕಲ್ಲು ಮಣ್ಣಿನೊಂದಿಗೆ ಮಾತನಾಡುತ್ತಾ,ಹುಲ್ಲು ಕುದುರೆ,ಕಂಬಳಿ ಹುಳುವನ್ನು ನಿರೀಕ್ಷಿಸುತ್ತಾ ಹರಿಯುತ್ತಿರುವ ನೀರ್ಚಾಲೊಂದಕ್ಕೆ ತಲುಪಲು,
“ಡಾಡಾ…,ಈ ನೀರಿಗೆ ನಾನು ಇಳಿಯಲೇ..? ಇಲ್ಲಿ ನಾನು ಆಟವಾಡಲೇ..? ಎಂದು ಉತ್ಸಾಹದಿ ಪರ್ಮಿಶನ್ ಕೇಳಿದ ಮಗ. ಬಲು ಖುಷಿಯಿಂದ ನೀರಾಟ ಆರಂಭವಾದದ್ದೇ ತಡ, ನೆರೆಮನೆಯ ಇತರ ಮಕ್ಕಳೂ ಸೇರಿಕೊಂಡು ಕಾಲು ಗಂಟೆಯ ಒಳಗೆ ವಂಡರ್ ಲಾ ಆಯಿತು ನಮ್ಮ ಕಿರು ತೋಡು..!

ಎಪ್ರಿಲಿನ ಬೇಸಗೆ ರಜೆಯಲ್ಲಿ ತಂಗಿಯ ಮಕ್ಕಳು ಮನೆಗೆ ಬಂದಿದ್ದರು. ಮಧ್ಯಾಹ್ನದೂಟದ ನಂತರ ಅವರ ಜೊತೆ ನನ್ನ ಮಗಳೂ ಕಾಣೆಯಾಗಿದ್ದಳು.! ಹೌದು,ನನಗೆ ಗೊತ್ತಿತ್ತು ಇವರು ನಮ್ಮೂರಿನ ನೈಸರ್ಗಿಕ ರಚನೆಯಾದ ಕಾಜೂರು ಪಳ್ಳಕ್ಕೆ ತಲುಪಿದ್ದರೆಂದು. ಬೈಕ್ ಏರಿ ವೇಗವಾಗಿ ಅಲ್ಲಿಗೆ ತಲುಪಲು ನೋಡುವುದೇನು.?ಆಗಲೇ‌ ಜಲಕ್ರೀಡೆ ಆರಂಭವಾಗಿತ್ತು.ಪಳ್ಳ ಆಳವಿರುವ ಕಾರಣ ಧೈರ್ಯ ನೀಡಲು ನಾನೂ ಅವರೊಂದಿಗೆ ಸೇರಿಕೊಂಡೆನು.

ಸಾಮಾನ್ಯವಾಗಿ ಹೆಚ್ಚಿನ ಹಳ್ಳಿಗಳಲ್ಲೂ ಇಂತಹ ಚಿತ್ರಣ ನಮಗೆ ಕಾಣ ಸಿಗುತ್ತದೆ. ಪೇಟೆಯ ಕಂದಮ್ಮಗಳಿಗೆ ಅದು ಸಿಗಲಾರದು ಎಂದು ಹೇಳಿದರೂ ತಪ್ಪಾಗಲಾರದು.ತೋಡು-ಕಾಡು,ಹಳ್ಳ-ಪಳ್ಳ,ಮದಕ-ಗೋಮಾಳ,ಕೆರೆ-ಗದ್ದೆ,ಬಯಲು -ಸಾಲುಮರಗಳ ಪ್ರಕೃತಿದತ್ತ ರಚನೆಗಳನ್ನು ಆಸ್ವಾದಿಸಬೇಕೆಂದರೆ ಭಾಗ್ಯ ಇರಲೇ ಬೇಕು.ಇಂತಹ ಹತ್ತು ಹಲವು ಸೃಷ್ಟಿಯ ವೈಚಿತ್ರ್ಯಗಳ ನೈಜತೆಯ ಅನುಭವ ಪಡೆಯಲು ನಮ್ಮೂರಿನಲ್ಲಿ ಮಕ್ಕಳನ್ನು ಸೇರಿಸಿಕೊಂಡು ನಡೆಯುವುದೇ ಪರಿಸರ ಪ್ರವಾಸ.

ಪರಿಸರ ಪ್ರವಾಸ ಎಂಬುವುದು ಕೇವಲ ದುಡ್ಡುಮಾಡಲು ಅಥವಾ ವ್ಯಾಪಾರ ಮಾಡಲು ಅಲ್ಲ.
ಪ್ಲಾಸ್ಟಿಕ್ ಬಳಸಿ ಬೀದಿ ಬೀದಿಯಲ್ಲಿ ಬಿಸಾಡಲು ಅಲ್ಲ.ಸಾರ್ವಜನಿಕ ವಸ್ತುಗಳನ್ನು ಹಾಳುಮಾಡಲು ಅಲ್ಲ. ಕೇಕೆ,ವಿಸಿಲ್ ಹಾಕಿಕೊಂಡು ತರ್ಲೆ ಮಾಡಲು ಅಲ್ಲ. ಡಿ.ಜೆ ಹಾಕಿಕೊಂಡು ವೃಧ್ಧರ,ಗರ್ಭಿಣಿಯರ,ಪುಟಾಣಿ ಮಕ್ಕಳ ಕೇಳುವ(ಗ್ರಹಣ) ಶಕ್ತಿಯನ್ನು ನಾಶ ಮಾಡಲು ಅಲ್ಲ. ನಮ್ಮ ಮಕ್ಕಳಲ್ಲಿ ಪಾರಿಸರಿಕ ಒಲವು ಆಳವಾಗಿ ಬೇರೂರಲು, ಸಂಪೂರ್ಣ ಮಾನಸಿಕ ಬೆಳವಣಿಗೆ ಹೊಂದಲು,ಸರ್ವತೋಮುಖ ಅಭಿವೃದ್ಧಿಯ ಫಸಲಿಗಾಗಿ ನಾವು ಪರಿಸರ ಪ್ರವಾಸ ಹಮ್ಮಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಬಂದು ತಲುಪಿದ್ದೇವೆ .ಪ್ರವಾಸವೆಂದರೆ ಪ್ರಯಾಸವಾಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ನೆಲದ ಅದೆಷ್ಟೋ ಸೃಷ್ಟಿಯ ಸೊಬಗನ್ನು ಪ್ರವಾಸಿ ಕೇಂದ್ರವನ್ನಾಗಿಸುವ,ಅವುಗಳನ್ನು ಕಣ್ತುಂಬಿಸಿಕೊಳ್ಳುವ ಕೊನೆಯದಾಗಿ ಅವುಗಳೆಲ್ಲವನ್ನೂ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಯಲು ಬಲು ಸಹಕಾರಿಯಾಗುತ್ತದೆ.
ಮಾತ್ರವಲ್ಲದೆ
ಅವುಗಳನ್ನು ಜೀವನದ ಒಂದು ಭಾಗವನ್ನಾಗಿಸುವಲ್ಲಿಯೂ ಪ್ರಧಾನ ಪಾತ್ರವಹಿಸುವುದರಲ್ಲಿ ಎರಡು ಮಾತಿಲ್ಲ. ಇದರಿಂದ,ನಾವು ಜೀವಿಸುತ್ತಿರುವ ನೆಲ-ಜಲವನ್ನು ಪ್ರೀತಿಸುವ,ಅವುಗಳ ರಕ್ಷಣೆಗೆ ಪಣತೊಡುವ ಭಾರತದ ಮುಂದಿನ ಪ್ರಜ್ಞಾವಂತ ನಾಗರಿಕನ ಲಕ್ಷಣಗಳನ್ನು ನಮ್ಮ ಮಕ್ಕಳಲ್ಲಿ ಎಳವೆಯಲ್ಲಿಯೇ ಕಾಣಲು ಸಾಧ್ಯವಾಗಲಿದೆ.

ಮಕ್ಕಳ ಕೈಗೆ ಮೊಬೈಲ್ ಬೇಡ ಎಂದು ಹೇಳುವ ಕೊರೋನಾ ನಂತರದ ಕಾಲಘಟ್ಟದಲ್ಲಿ ಬೆಳೆಯುತ್ತಿರುವ ಪುಟ್ಟ ಮನಸುಗಳಲ್ಲಿ ಪರಿಸರ ಪ್ರೇಮದ ಬೀಜ ಬಿತ್ತಲು ಇಂತಹ ಚಟುವಟಿಕೆಗಳು ಪೂರಕವಾಗಲಿವೆ.ಅದಕ್ಕಾಗಿ ಮಕ್ಕಳು ಯಾವಾಗ ಮೊಬೈಲ್ ಬೇಕೆಂದು ಹಠ ಹಿಡಿಯುತ್ತಾರೋ ಆಗ ಅವರನ್ನು ಮನೆಯ ಸುತ್ತು ಮುತ್ತಲಿನ ಪ್ರಾಕೃತಿಕ ತಾಣಗಳಿಗೆ ಕರೆದುಕೊಂಡು ಹೋಗುವುದೇ ಲೇಸು. ಅಲ್ಲಿನ ವಿಶೇಷತೆಗಳು,ಚರಿತ್ರೆಯ ಕತೆಗಳು,ಗ್ರಾಮಕ್ಕಾಗಿ ದುಡಿದ ಹಿರಿಯರ ಜೀವನ ರೀತಿಗಳು, ಹಳ್ಳಿಯ ಆಚಾರ ವಿಚಾರಗಳ ಬಗ್ಗೆ ಗಮನ ಸೆಳೆದರೆ ಮತ್ತಿನ್ನೇನು ಬೇಕು ಹೇಳಿ.? ಪಾಠ ಪುಸ್ತಕಗಳಲ್ಲಿ ಇರುವ,ತರಗತಿಗಳಲ್ಲಿ ಮಾತನಾಡುವ ಅದೆಷ್ಟೋ ವಿಚಾರಗಳ ಕುರಿತು ನಮಗೆ ಪಾಠ ಮಾಡಿ ಆಯಿತು ಎಂದೇ ಅರ್ಥ.ಇಂತಹ ಸಂದರ್ಭದಲ್ಲಿ ಮಕ್ಕಳ ಮುಗ್ಧ ಮನಸ್ಸು ಪ್ರಶ್ನೆಗಳನ್ನು ಕೇಳಿ-ಕೇಳಿ ಜ್ಞಾನವನ್ನು ಸಂಪಾದಿಸುದರಲ್ಲಿ ಸಂದೇಹ ಬೇಡ.ಆದರೆ ಇದೆಲ್ಲದಕ್ಕೂ ನಮಗೆ ಸಮಯ ಬೇಕಷ್ಟೇ.ಹಿರಿಯರಾದ ನಾವೇ ಮೊಬೈಲ್ ಒರಸುವ ಚಟಕ್ಕೆ ಬಿದ್ದು ನರಳಾಡುತ್ತಿರುವಾಗ ಇದು ಹೇಗೆ ಸಾಧ್ಯ..?ಆದ್ದರಿಂದ ಮಕ್ಕಳೊದಿಂಗೆ ನಾವೂ ಹೊರಡಬೇಕಿದೆ ಬದಲಾವಣೆಗೆ.ನಾವೂ ಜೊತೆಯಾಗ ಬೇಕಿದೆ ಪರಿಸರ ಪ್ರವಾಸಕ್ಕೆ.ಹಾಗಾದರೆ ಬನ್ನಿ,ನಾವು ಆರಂಭಿಸುವ ನಮ್ಮೂರ ಪ್ರವಾಸ.ಗಿಡ-ಮರ,ಪ್ರಾಣಿ-ಪಕ್ಷಿ,ಹೂ-ಹಣ್ಣುಗಳ ಪರಿಚಯಕ್ಕಾಗಿ,ಪ್ರಾಕೃತಿಕ ಹಳ್ಳ-ಪಳ್ಳ,ನದಿ-ತೋಡಿನ ರಕ್ಷಣೆಗಾಗಿ…

ಪರಿಸರ ಪ್ರವಾಸದ ಮೂಲಕ..,

  • -ಸಾಮಾನ್ಯ ಕಾಯಿಲೆಯನ್ನು ಮನೆ ಮದ್ದಿನ ಮೂಲಕ ಉಪಚರಿಸಬಹುದೆಂಬುದನ್ನು ತಿಳಿಯಪಡಿಸಬೇಕು.ತುಂಬೆ,ನೆಲನೆಲ್ಲಿ,ಎಕ್ಕೆ,ನಾಚಿಕೆ ಮುಳ್ಳು ಮಂತಾದ ಔಷಧೀಯ ಗಿಡ ಬಳ್ಳಿ,ಬೇರುಗಳ ಪರಿಚಯ ಪ್ರವಾಸದಲ್ಲಿ ಒಳಗೊಂಡಿರಬೇಕು.
  • -ಯಥೇಚ್ಛವಾಗಿ ಲಭ್ಯವಾಗುವ ಸೊಪ್ಪು ತರಕಾರಿಗಳ ಬಗೆಗಿನ ಜ್ಞಾನವನ್ನು ತಿಳಿಯಪಡಿಸಬೇಕು.ಅವುಗಳು ರಾಸಾಯನಿಕ ಮುಕ್ತ,ವಿಟಮಿನ್ ಯುಕ್ತ ನಿತ್ಯೋಪಯೋಗಿ ಆಹಾರ ವಸ್ತುಗಳು ಎಂಬುವುದನ್ನು ತಿಳಿ ಹೇಳಬೇಕು.
  • -ಜಲ ಮರುಪೂರಣಕ್ಕೆ ಸೂಕ್ತವಾದ ನೈಸರ್ಗಿಕ ರಚನೆಗಳನ್ನು ತೋರಿಸಬೇಕು.ಗದ್ದೆ ಎಂಬುವುದು ಲಕ್ಷಾಂತರ ಲೀಟರ್ ನೀರನ್ನು ಭೂಗರ್ಭಕ್ಕೆ ಇಳಿಸುವ ಸೃಷ್ಟಿಯ ಕೊಡುಗೆ ಎಂಬುವುದನ್ನು ಒತ್ತಿ ಹೇಳಬೇಕು.
  • -ಕಾಡು ಹಣ್ಣುಗಳ ಪರಿಚಯದೊಂದಿಗೆ ನಮ್ಮ ಆರೋಗ್ಯಕ್ಕೆ ಅವುಗಳ ಅಗತ್ಯ,ಪೇಟೆ ಹಣ್ಣುಗಳನ್ನು ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ಚರ್ಚಿಸಬೇಕು.
  • -ಆಲ-ಅತ್ತಿ,ಪಾಳೆ-ದಡ್ಡಾಲ ಮೊದಲಾದ ಮರಗಳನ್ನು ಪರಿಚಯಿಸಬೇಕು.ಅವುಗಳಿಂದ ಧಾರಾಳವಾಗಿ ಸಿಗುವ ಹಣ್ಣುಗಳು,ಬೇರು,ತೊಗಟೆ ಮೊದಲಾದ ಸಸ್ಯೋತ್ಪನ್ನಗಳ ಬಗ್ಗೆ ಮಾತನಾಡಬೇಕು.ಅಂತಹ ಸಂಪನ್ಮೂಲಗಳನ್ನು ಸಂರಕ್ಷಿಸ ಬೇಕೆನ್ನುವುದನ್ನು ಮನವರಿಕೆ ಮಾಡಿಕೊಡಬೇಕು.
  • -ಕೃಷಿ ಚಟುವಟಿಕೆಗಳಾದ ಬಿತ್ತುವ,ನೆಡುವ,ಕೊಯ್ಯುವ ಕೆಲಸಗಳನ್ನು ಕಣ್ಣಾರೆ ಕಾಣುವ ಸಂದರ್ಭಗಳು ಸಿಕ್ಕಿದರಂತೂ ಮಿಸ್ ಮಾಡಲೇ ಬಾರದು.ಮಾಡಿ ಕಲಿಯಲೂ ನೋಡಿ ಕಲಿಯಲೂ ಅವಕಾಶ ಮಾಡಿಕೊಡಬೇಕು.
  • -ಹಿರಿಯರ ಅಪಾರ ಜ್ಞಾನ ಸಂಪತ್ತನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಮಹತ್ವದ ಕೆಲಸ ಈ ಮೂಲಕ ಸಾಧ್ಯವಾಗಬೇಕು.ಅದಕ್ಕಾಗಿ ಹಿರಿಯರ ಸಂಪೂರ್ಣ ಸಹಕಾರ,ಮಾರ್ಗದರ್ಶನ ಸಿಗುವಂತಾಗಬೇಕು.-ಪರಿಸರ ಪ್ರವಾಸವು ನೆರೆಮನೆಯವರ ಪರಿಚಯದೊಂದಿಗೆ,ಊರಿನ ವಿಶೇಷ ವ್ಯಕ್ತಿಗಳ ಒಡನಾಟಕ್ಕೂ ಆಸ್ಪದ ಸಿಗುವಂತಾಗಬೇಕು.ಪರಸ್ಪರ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ವೇದಿಕೆಯನ್ನು ನಿರ್ಮಿಸಿಕೊಡುವಂತಾಗಬೇಕು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00