- ಅಖಂಡ ಸೌಭಾಗ್ಯ ಪ್ರಾಪ್ತಿಗೆ, ಶ್ರೀರಾಜರಾಜೇಶ್ವರಿ ಸಂಪ್ರೀತಿಗೆ
ಕೇಪಳ ಪುಷ್ಪಾರ್ಚಿತ ಕೋಟಿ ಕುಂಕುಮಾರ್ಚನೆ - ಪಡುಕುತ್ಯಾರು ಶ್ರೀ ಆನೆಗುಂದಿ ಮಠದಲ್ಲಿ ಮೊದಲ ಬಾರಿಗೆ ನಡೆಯುವ ಕೋಟಿ ಕುಂಕುಮಾರ್ಚನೆಯ ಸಂಕಲ್ಪ, ಮಹತ್ವವೇನು ?
ಲೇಖನ-ವೇದ ಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ
( ಉಪ ಆಯುಕ್ತರು, ಕಸ್ಟಂಸ್ ಇಲಾಖೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾಲಂ ನವದೆಹಲಿ) ಆಸ್ಥಾನ ವಿದ್ವಾಂಸರು ಆನೆಗುಂದಿ ಮಠ ಕಟಪಾಡಿ ಪಡುಕುತ್ಯಾರು
ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪರಮಸಂರಕ್ಷರಾಗಿ ಶ್ರೀಮತ್ ಆನೆಗುಂದಿ ಜಗದ್ಗುರು ವiಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ , ಸಹ ಸಂಸ್ಥೆಗಳಾದ ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ಅಸೆಟ್), ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಆನೆಗುಂದಿ ಗುರುಸೇವಾ ಪರಿಷತ್, ಶ್ರೀ ಸರಸ್ವತೀ ಮಾತೃ ಮಂಡಳಿ ಮತ್ತು ಶ್ರೀ ಸರಸ್ವತೀ ಪೂರ್ವಛಾತ್ರ ಸಂಘಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
ಮಾಜದ ಮಹಿಳೆಯರು ಎಚ್ಚೆತ್ತುಕೊಂಡು ಜಾಗೃತರಾದಲ್ಲಿ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ ಎನ್ನುವುದು ಜಗದ್ಗುರುಗಳವರ ಆಶಯ. ಅಖಂಡ ಸೌಭಾಗ್ಯಯುತವಾದ ಕುಂಕುಮ ಸದಾ ಇರುವಂತೆ ವರವನ್ನು ಅನುಗ್ರಹಿಸು ಎಂದು ಮಹಾಕಾಳಿ, ಮಹಾಲಕ್ಮೀ, ಮಹಾ ಸರಸ್ವತೀ ಯಾಗಿರುವ ಜಗನ್ಮಾತೆಯನ್ನು ಅರ್ಚನೆಯೊಂದಿಗೆ ಬೇಡಿ ಒಲಿಸಿಕೊಳ್ಳುವ ಸಲುವಾಗಿ ಈ ಕೇಪಳ ಪುಷ್ಪ ಸಮೇತ ಕೋಟಿ ಕುಂಕುಮಾರ್ಚನೆಯನ್ನು ಮಹಾಸಂಸ್ಥಾನದಲ್ಲಿ ಪ್ರಪ್ರಥಮ ಬಾರಿಗೆ ಜನವರಿ 6ರಿಂದ ಹಮ್ಮಿಕೊಳ್ಳಲಾಗಿದೆ
ಸನಾತನ ಧರ್ಮದಲ್ಲಿ ಕುಂಕುಮವು ಅತ್ಯಂತ ಪ್ರಮುಖವಾದ ಮಂಗಳ ದ್ರವ್ಯವಾಗಿ ಅರ್ಚನೆ ಮತ್ತು ಮಂಗಳ ಸಾಮಗ್ರಿಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಹರಿದ್ರ(ಅರಶಿಣ) ಕುಂಕುಮಗಳಿಂದ ಅರ್ಚಿತವಾದಾಗ ದೇವರು ಸುಖ ಮತ್ತು ಸೌಭಾಗ್ಯವನ್ನು ಅನುಗ್ರಹಿಸುತ್ತಾರೆನ್ನುವುದು ನಂಬಿಕೆ.
“|ಹರಿದ್ರಾ ಕ್ಷಾರ ಸಂಯುಕ್ತಂ ಕುಂಕುಮಂ ಕಾಮದಾಯಕಂ| |ಫಾಲಾಲಂಕಾರಣಂ ಪ್ರಥಮ್ ಸೌಮಾಂಗಲ್ಯಂ ಪ್ರಯಚ್ಛಮೇ| ಎಂಬ ಶ್ಲೋಕದ ಅರ್ಥವು – ಹರಿದ್ರಯುಕ್ತವಾದ ಕುಂಕುಮವನ್ನು ದೇವರೇ ನಿನಗೆ ಸಮರ್ಪಣೆ ಮಾಡುತ್ತಿದ್ದೇನೆ. ಸರ್ವ ಮನೋಭೀಷ್ಟವನ್ನು ನೆರವೇರಿಸುವಂತೆ ಹಣೆಗೆ ಭೂಷಣವಾದ ಅಖಂಡ ಸೌಭಾಗ್ಯಯುತವಾದ ಕುಂಕುಮ ಸದಾ ಇರುವಂತೆ ವರವನ್ನು ಅನುಗ್ರಹಿಸು ಎಂದಾಗಿದೆ.
|ಸೌಭಾಗ್ಯ ಅಭಿವರ್ಧನಾರ್ಥಂ ಕುಂಕುಮಂ ಸಮರ್ಪಯಾಮಿ|- ಸೌಭಾಗ್ಯದ ವೃದ್ಧಿಗಾಗಿ ಕುಂಕುಮವನ್ನು ಸಮರ್ಪಿಸುತ್ತೇನೆ ಎಂದು ಇದರ ಅರ್ಥ. ಇಲ್ಲಿ ಸೌಭಾಗ್ಯ ಪದಕ್ಕೆ ಮಹಾಭಾಗ್ಯ, ಐಶ್ವರ್ಯ, ಮಂಗಳ, ಆನಂದ ಅಮಿತೋತ್ಸಾಹದಂತಹ ಅನೇಕ ಅರ್ಥಗಳಿವೆ. ಇಂತಹ ಸೌಭಾಗ್ಯದಾಯಕ ಮಂಗಳ ದ್ರವ್ಯ ಕುಂಕುಮವನ್ನು ಮಂತ್ರದೊಂದಿಗೆ ಭಗವತಿ ಶ್ರೀಮಾತೆಗೆ ಅತ್ಯಂತ ಪ್ರೀತಿ ಪಾತ್ರವಾದ ಕೇಪಳ ಪುಷ್ಪದ ಜೊತೆಗೆ ಕೋಟಿ ಸಾರಿ ಅರ್ಚಿಸುವ ಅತ್ಯಂತ ವಿರಳವಾದ ಅಮಿತ ಪುಣ್ಯ ಮತ್ತು ಅಪರಿಮಿತ ಫಲ ಅನಂತ ಸೌಭಾಗ್ಯ ವೃದ್ಧಿಯಾಗುವುದಾಗಿ ಶಾಸ್ತ್ರ ವಿಧಿಸುತ್ತದೆ.
ಇಂತಹ ಐತಿಹಾಸಿಕ ಸಮಾರಂಭವನ್ನು ಜಗದ್ಗುರುಗಳವರ ಅನುಜ್ಞೆಯಂತೆ ಲೋಕಕಲ್ಯಾಣಾರ್ಥಕ್ಕಾಗಿ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೂ ಶ್ರೀಚಕ್ರ ರಾಜನಿಲಯಿಯಾದ ಮಾತೆ ಶ್ರೀಮತ್ ರಾಜರಾಜೇಶ್ವರಿಯ ಕೃಪೆ ಪ್ರಾಪ್ತಿಗಾಗಿರುವ ಒಂದು ಮಹಾನ್ ಅವಕಾಶ. ಇದು ವೇದ ಮಾತೆ ಶ್ರೀ ಸರಸ್ವತಿಯ ಅಪೂರ್ವ ಅನುಗ್ರಹ ಪ್ರಾಪ್ತಿಗಾಗಿ ಒದಗಿರುವ ಒಂದು ಮಹಾನ್ ಸುಯೋಗ.
|ಗೌರಿ ದೇಹ ಸಮುದ್ಬವಾಂ ತ್ರಿಜಗತಾಮ್ ಆಧಾರಭೂತಾಂ ಮಹಾ ಅಪೂರ್ವಾಂ ಸರಸ್ವತೀಂ ಮನು ಭಜೇ ಶುಂಭಾದಿ ದೈತ್ಯಾರ್ಧಿನೀಮ್| ಎಂದು ತಿಳಿಸಿರುವ ಸಪ್ತಶತಿಯ ಈ ಧ್ಯಾನ ಶ್ಲೋಕ ಶ್ರೀಚಕ್ರ ರಾಜೇಶ್ವರಿಯ ಪೂಜೆ ಮಹಾಕಾಳಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯ ಅಪೂರ್ವ ಶಾಕ್ತ ಸಂಪ್ರದಾಯದ ಶಕ್ತಿ ದೇವತೆಯ ಆರಾಧನಾ ಕ್ರಮವಾಗಿದೆ. ಈ ಪೂಜೆ ಮತ್ತು ಕೋಟಿ ಕುಂಕುಮ ಅರ್ಚನೆಯಿಂದ ಸಕಲ ಸನ್ಮಂಗಳಗಳು ಅರ್ಚನೆ ಮಾಡುವವರಿಗೆ ಲಭಿಸುವುದರಲ್ಲಿ ಸಂಶಯವಿಲ್ಲ .
ಈ ಕೋಟಿ ಕುಂಕುಮಾರ್ಚನೆಯ ಸುಸಮಯದಲ್ಲಿ ವಿಘ್ನ ನಿವಾರಕ ಗಣನಾಯಕನಿಗೆ ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಯಾಗ, ಅಪಮೃತ್ಯು ನಿವಾರಕ ಸಕಲ ವಿಭೂತಿ ಅಧಿಪತಿ, ಶತ್ರುಗಳಿಗೆ ವಿನಾಶಕಾರಕ ಜ್ಞಾನಾಧಿಪತಿ ಚಂದ್ರ ಮೌಳೀಶ್ವರನಿಗೆ ರುದ್ರ ಮಹಾ ಮೃತ್ಯುಂಜಯ ಯಾಗ, ಮೋಕ್ಷಾಧಿಪತಿ ವಿಷ್ಣುವಿಗೆ ವಿಷ್ಣು ಹವನ, ಆರೋಗ್ಯಂ ಭಾಸ್ಕರಾದಿಚ್ಯೇತ್ ಎನ್ನುವಂತೆ ಆರೋಗ್ಯ ವೃದ್ಧಿಗಾಗಿ ಸೂರ್ಯ ದೇವರಿಗೆ ಸೌರ ಸೂಕ್ತ ಹೋಮ ಹಾಗೂ ಪೀಠಮಾತೆಗೆ ಶ್ರೀ ಸರಸ್ವತೀ ಹೋಮ, ದುರ್ಗತಿ ವಿನಾಶಿನಿ ದುರ್ಗೆಗೆ ದುರ್ಗಾ ಹೋಮ, ಸಕಲ ಸೃಷ್ಟಿ ವಿನಾಶಕಾರಕ ವಿಶ್ವಕರ್ಮ ದೇವನಿಗೆ ವಿಶ್ವಕರ್ಮ ಹೋಮ, ಆದಿತ್ಯಾದಿ ನವಗ್ರಹಗಳ ಶುಭ ಏಕಾದಶ ಸ್ಥಾನ ಸ್ಥಿತ ಫಲ ಪ್ರಾಪ್ತಿಗಾಗಿ ನವಗ್ರಹ ಹೋಮ ಮತ್ತು ಶ್ರೀ ಲಲಿತಾಂಬಿಕೆಗೆ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮಗಳೊಂದಿಗೆ ಹೋಮಗಳು ಸಂಪತ್ತು ಐಶ್ವರ್ಯ ಪ್ರಾಪ್ತಿಗಾಗಿ ಶ್ರೀ ಸೂಕ್ತ ಹೋಮಗಳು ನಮ್ಮೆಲ್ಲರ ಇಹ-ಆಮುಷ್ಮಿಕ ಜೀವನವನ್ನು ಪವಿತ್ರಿಕರಿಸಿ ಪರಮ ಶ್ರೇಯಸ್ಸನ್ನು ಪ್ರಾಪ್ತಿ ಮಾಡಿಕೊಳ್ಳಲು ಅತ್ಯಂತ ಸುಲಭ ಮಾರ್ಗವಾಗಿದೆ.
ಪೀಠ ಮಾತೆ ಸರಸ್ವತಿಗೆ ಸ್ತುತಿ ಮತ್ತು ಪೂಜೆಯ ರೂಪದಲ್ಲಿ ಶ್ರೀ ಲಲಿತಾ ಸಹಸ್ರ ನಾಮ ಪೂರ್ವಕ ಕೇಪುಳ ಪುಷ್ಪಯುಕ್ತ ಕುಂಕುಮಾರ್ಚನೆ ಮತ್ತು ಯಜ್ಞ ರೂಪದಲ್ಲಿ ಹೋಮಾದಿಗಳ ಮೂಲಕ ಪೀಠ ಮಾತೆಯ ಆರಾಧನೆ ಎಲ್ಲವೂ ಸಹಿತ ಅತ್ಯಂತ ಶಾಸ್ತ್ರ ಬದ್ಧವಾಗಿ ವೈದಿಕ ನಿಯಮಗಳಂತೆ ನಡೆಯಲಿವ. ಇವೆಲ್ಲದಕ್ಕೂ ಮುಕಟ ಪ್ರಾಯವಾಗಿ ಸ್ವತಃ ಶ್ರೀಚಕ್ರ ಉಪಾಸಕರೂ ಹಾಗೂ ಶ್ರೀ ವಿದ್ಯಾ ವಿಶಾರದ ಪರಮ ಪೂಜ್ಯ ಜಗದ್ಗುರುಗಳವರ ಪಾವನ ಸಾನಿಧ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ ಫಲವಾಗಿದೆ.
ಲೇಖನ-ವೇದ ಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ( ಉಪ ಆಯುಕ್ತರು, ಕಸ್ಟಂಸ್ ಇಲಾಖೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾಲಂ ನವದೆಹಲಿ) ಆಸ್ಥಾನ ವಿದ್ವಾಂಸರು ಆನೆಗುಂದಿ ಮಠ ಕಟಪಾಡಿ ಪಡುಕುತ್ಯಾರು
.