ಪೆರಿಯ ಅವಳಿ ಕೊಲೆ ಪ್ರಕರಣ: 10ಮಂದಿ ಆರೋಪಿಗಳಿಗೆ ಡಬಲ್ ಜೀವಾವಧಿ ಸಜೆ, ನಾಲ್ವರಿಗೆ 5ವರ್ಷ ಸಜೆ ಶಿಕ್ಷೆ
ಕೇರಳದಲ್ಲೇ ರಾಜಕೀಯ ಕೋಲಾಹಲ ಎಬ್ಬಿಸಿದ ಕಾಸರಗೋಡು ಜಿಲ್ಲೆಯ ಪೆರಿಯ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಗೆ ಸಂಬಂಧಿಸಿ ಆರೋಪಿಗಳೆಂದು ಗುರುತಿಸಲಾದ 10ಮಂದಿಗೆ ಎರಡುಪಟ್ಟು ಜೀವಾವಧಿ ಸಜೆ ಮತ್ತು ನಾಲ್ವರಿಗೆ 5ವರ್ಷಗಳ ಕಠಿಣ ಸಜೆ ಶಿಕ್ಷೆ ವಿಧಿಸಿ ಎರ್ನಾಕುಳಂ ಸಿಬಿಐ ನ್ಯಾಯಾಲಯ ಶಿಕ್ಷೆ ಘೋಷಿಸಿದೆ.
ಕೇಸಿನಲ್ಲಿ ಆರೋಪಿಗಳೆಂದು ಗುರುತಿಸಿ ಸಿಬಿಐ ಪೋಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ 24 ಮಂದಿ ಆರೋಪಿಗಳ ಪೈಕಿ 14ಮಂದಿ ಅಪರಾಧಿಗಳೆಂದು ಸಿಬಿಐ ನ್ಯಾಯಾಲಯ ಗುರುತಿಸಿತ್ತು.
ಈ ಪೈಕಿ 1ರಿಂದ 8ರ ತನಕದ ಆರೋಪಿಗಳು ಮತ್ತು 10, 15ನೇ ಆರೋಪಿಗಳಿಗೆ ಕೇಸಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಉಳಿದವರಿಗೆ ಐದು ವರ್ಷ ಸಜೆ ವಿಧಿಸಲಾಗಿದೆ.ಉದುಮ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್ ಸಹಿತ ಸಿಪಿಐಎಂ ನಾಯಕರು ಕೇಸಿನ ಜೀವಾವಧಿ ಶಿಕ್ಷೆಯಿಂದ ಪಾರಾಗಿದ್ದಾರೆ. ಕೊಲೆಯಲ್ಲಿ ಪ್ರತ್ಯಕ್ಷ ಭಾಗಿಯಾಗದೇ, ಪರೋಕ್ಷವಾಗಿ ಪಾಲ್ಗೊಂಡ ಅಪರಾಧದಂತೆ ಅವರಿಗೆ ಸಜೆ ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯಂಥಹಾ ಘೋರ ಶಿಕ್ಷೆ ವಿಧಿಸದೇ ನ್ಯಾಯದಾನದಲ್ಲಿ ಶಿಕ್ಷಾ ಕಡಿತ ಮಾಡಿ ತೀರ್ಪು ನೀಡುವಂತೆ ಆರೋಪಿಗಳ ಪರ ವಾದಿಸಿದ್ದ ವಕೀಲ ಸಿ.ಕೆ.ಶ್ರೀಧರನ್ ವಾದಿಸಿದ್ದರು.