- ಪದೇ, ಪದೇ ಮನೆಯಂಗಳಕೆ ಧಾವಿಸಿ ಸಾಕು ನಿಯಿಗಳನ್ನು ಹೊತ್ತೊಯ್ಯವ ಚಿರತೆ!
- ಕಾರಡ್ಕ, ಮುಳಿಯಾರು ಪಂ. ವ್ಯಾಪ್ತಿಯಲ್ಲಿ ಚಿರತೆ ಕಾಟ ಹೆಚ್ಚಳ: ಆಕ್ರೋಶಿತ ನಾಗರಿಕರಿಂದ ಮಧ್ಯರಾತ್ರಿ ಅರಣ್ಯ ಕಚೇರಿಗೆ ದೊಂದಿ ಮೆರವಣಿಗೆ
ಕಾಸರಗೋಡಿನ ಮುಳಿಯಾರು, ಕಾರಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಿರತೆ ಕಾಟ ವ್ಯಾಪಕಗೊಂಡಿದ್ದು ಈ ಒಂದು ವಾರದಲ್ಲಿ ಎಲ್ಲೆಂದರಲ್ಲಿ ಅನೇಕ ಕಡೆ ಹಲವರು ಚಿರತೆಗಳನ್ನು ಕಂಡಿದ್ದು ನಾಗರಿಕರು ಭಯದಿಂದ ಬದುಕುವಂತಾಗಿದ್ದಾರೆ.
ಕಾರಡ್ಕ ದ ಕರ್ಮಂತೋಡಿ ಸಮೀಪ ಅಡ್ಕತ್ತೊಟ್ಟಿ ಎಂಬಲ್ಲಿ ಬುಧವಾರ ರಾತ್ರಿ 7ರ ವೇಳೆಗೆ ಚಿರತೆಯೊಂದು ಮನೆಯಂಗಳಕ್ಕೆ ಧಾವಿಸಿ ಬಂದು ಸಾಕು ನಾಯಿಯನ್ನು ಹೊತ್ತೊಯ್ದಿದೆ. ಬಳಿಕ ನಾಗರಿಕರು ಸಂಘಟಿತರಾಗಿ ನಡೆಸಿದ ಹುಡುಕಾಟದಲ್ಲಿ ಚಿರತೆಯ ಹೆಜ್ಜೆಗಳು ಕಾಡಿಗೆ ಸಾಗುವ ದಾರಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕಾಡಿನ ಚಿರತೆಗಳು ನಾಡಿಗೆ ನುಗ್ಗುವುದರಿಂದ ಜನತೆ ಮನೆಯಿಂದ ಹೊರಗಿಳಿಯಲು ಭಯಭೀತರಾಗಿದ್ದು, ಆಕ್ರೋಶಿತರಾದ ನಾಗರಿಕ ಒಕ್ಕೂಟ ಬುಧವಾರ ರಾತ್ರಿಯೇ ಕರ್ಮಂತೋಡಿಯಲ್ಲಿರುವ ಅರಣ್ಯ ಇಲಾಖೆ ಕಛೇರಿಗೆ ದೊಂದಿ ಮೆರವಣಿಗೆ ನಡೆಸಿ, ಆತಂಕ ತಿಳಿಸಿದರು.
ವರ್ಷಾಂತ್ಯದ ಈ ವಾರದಲ್ಲಿ ಮುಳಿಯಾರು, ಕಾರಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಹಲವೆಡೆ ಚಿರತೆ ಕಂಡುಬಂದಿದೆ. ಮನೆಯಂಗಳಕ್ಕೆ ಧಾವಿಸಿ ಸಾಕು ನಾಯಿಗಳನ್ನು ಹೊತ್ತೊಯ್ಯುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಇತ್ತೀಚಿಗೆ ಸತತ ಎರಡು ದಿನ ಬೋವಿಕಾನ ಪೇಟೆಯಲ್ಲೂ ಚಿರತೆ ಕಂಡುಬಂದಿತ್ತು.
ಚಿರತೆಗಳನ್ನು ಸೆರೆ ಹಿಡಿಯಲು ಕಾಡಿನಲ್ಲಿ ಅರಣ್ಯ ಇಲಾಖೆ ಬೋನುಗಳನ್ನು ಇರಿಸಿದ್ದರೂ ಈ ವರೆಗೆ ಚಿರತೆಯೊಂದೂ ಬೋನಿಗೆ ಬಿದ್ದಿಲ್ಲ. ಈ ಪ್ರದೇಶದ ಕಾಡಿನಲ್ಲಿ ಹೆಣ್ಣು ಚಿರತೆ ಮರಿ ಇಟ್ಟು ಸಂಖ್ಯೆ ವರ್ಧಿಸಿಕೊಂಡಿವೆ. ಆದರೆ ಚಿರತೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಪರಿಹಾರವಿಲ್ಲದೇ ಒದ್ದಾಡುತ್ತಿದೆ.