- ಆರಿಫ್ ಮುಹಮ್ಮದ್ ಖಾನ್ ರ ಬಳಿಕ ಆಗಮಿಸುತ್ತಿರುವುದು ಮತ್ತೊಬ್ಬರು ಸ್ವಯಂಸೇವಕ!
- ಕೇರಳದ 23ನೇ ರಾಜ್ಯಪಾಲರಾಗಿ ರಾಜೇಂದ್ರ ಆರ್ಲೇಖರ್ ನಾಳೆ ಪದಗ್ರಹಣ
ಕೇರಳದ ನೂತನ ರಾಜ್ಯಪಾಲರಾಗಿ ನಿಯುಕ್ತರಾದ ಗೋವಾ ನಿವಾಸಿ ರಾಜೇಂದ್ರ ಆರ್ಲೇಕರ್ ಅವರು ನಾಳೆ(ಜ.2) ತಿರುವನಂತಪುರ ರಾಜಭವನದಲ್ಲಿ ರಾಜ್ಯಪಾಲರಾಗಿ ಪ್ರಮಾಣವಚನಗೈದು ಅಧಿಕಾರ ಸ್ವಿಕರಿಸುವರು.
ಇಂದು ಗೋವಾದಿಂದ ಕೇರಳಕ್ಕೆ ಹೊರಡುವ ಮುನ್ನ ಅವರು ಕೇರಳೀಯನಾದ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರನ್ನು ಭೇಟಿಯಾಗಿ ಕೇರಳದ ಕುರಿತಾಗಿ ಸುದೀರ್ಘ ಮಾತುಕತೆ ನಡೆಸಿದರು.
ಗೋವಾ ರಾಜಭವನದಲ್ಲಿ ನಡೆದ ಉಭಯ ರಾಜ್ಯಪಾಲರುಗಳ ಮುಖಾಮುಖಿಯ ವೇಳೆ ಗುರುವಾಯೂರು ಮತ್ತು ಶಬರಿಮಲೆಯ ಪ್ರಸಾದ, ದೇವರ ಚಿತ್ರಗಳನ್ನಿತ್ತು ಶ್ರೀಧರನ್ ಪಿಳ್ಳೆ ಶುಭಾಶಯಕೋರಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೆ “ರಾಜೇಂದ್ರ ಆರ್ಲೇಕರ್ ಅವರೊಂದಿಗೆ ನನಗೆ ನಿಕಟ ಸಂಪರ್ಕ ಇದೆ. ಅವರು ಹಿಮಾಚಲ, ಬಿಹಾರ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅನುಭವಿ. ಯಾವುದೇ ವಿಷಯದಲ್ಲೂ ಗಂಭೀರ ಅಧ್ಯಯನ ನಡೆಸಿಯೇ ನಿರ್ಧಾರ ಕೈಗೊಳ್ಳುವ ಜನಮುಖೀ ಮುತ್ಸದ್ದಿ. ಹಿಂದೆ ಗೋವಾದಲ್ಲಿ ಸಚಿವರಾಗಿದ್ದವರು ಎಂದು ಶ್ರೀಧರನ್ ಪಿಳ್ಳೆ ನುಡಿದರು.
ಇಂದು ಸಂಜೆ ತಿರುವನಂತಪುರ ತಲುಪುವ ರಾಜೇಂದ್ರ ಆರ್ಲೇಕರ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತ್ರೃತ್ವದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದು. ನಾಳೆ ಬೆಳಿಗ್ಗೆ 10 ಗಂಟೆಗೆ ರಾಜಭವನದಲ್ಲಿ ನೂತನ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಕೇರಳಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ನಿತಿನ್ ಮಧುಕರ್ ಅವರು ಪ್ರಮಾಣವಚನ ಭೋಧಿಸುವರು.
ಕೇರಳದಿಂದ ಬಿಹಾರಕ್ಕೆ ವರ್ಗಾವಣೆಗೊಂಡ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮೊನ್ನೆಯಷ್ಟೇ ಕೇರಳಕ್ಕೆ ವಿದಾಯ ಹೇಳಿದ್ದು, ಈ ವೇಳೆ ಮುಖ್ಯಮಂತ್ರಿ ಸಹಿತ ಪ್ರಮುಖರು ಪಾಲ್ಗೊಳ್ಳದೇ ಗೈರಾದುದು ಗಮನಿಸಲ್ಪಟ್ಟಿತ್ತು. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಕೇರಳ ಸರಕಾರದ ನಡುವೆ ಸಂಬಂಧ ಹದಗೆಟ್ಟು, ಸರಕಾರದ ಪಾಲಿಗೆ ಅವರು ವಿರೋಧಿಯಂತಿದ್ದರು. ಇದು ಅನೇಕ ವಿವಾದಗಳಿಗೆ ಕಾರಣವಾಗಿತ್ತು
ಈ ಹಿನ್ನೆಲೆಯಲ್ಲಿ ನೂತನ ರಾಜ್ಯಪಾಲರ ಆಗಮನ ಕುತೂಹಲ ಮೂಡಿಸಿದೆ.
1954 ಎಪ್ರೀಲ್ 23ರಂದು ಜನಿಸಿದ ರಾಜೇಂದ್ರ ಆರ್ಲೇಕರ್ ಇನ್ನು ಕೇರಳದ 23ನೇ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುವರು.
ಬಾಲ್ಯದಿಂದಲೂ ಆರೆಸ್ಸೆಸ್ ಕಾರ್ಯಕರ್ತನಾಗಿ ಬೆಳೆದ ಅವರು 1980ರಿಂದ ಗೋವಾದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಗೋವಾ ಬಿಜೆಪಿ ರಾಜ್ಯಾಧ್ಯಕ್ಷ, ಸಚಿವ, ರಾಜ್ಯಪಾಲ ಮೊದಲಾದ ನೆಲೆಗಳಲ್ಲಿ ದುಡಿದ ಅವರು ಗೋವಾ ವಿಧಾನಸಭೆಯನ್ನು ಕಾಗದ ರಹಿತ ವಿಧಾನಸಭೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.