ಬಂದರೆ ಕೊಡುವೆ,ಬರದಿರೆ ತಿನುವೆ.ಬಾರೋ ಬೇಗ ಹಾಕೋ ಲಾಗ ಎಂದು ಕರೆದರೂ ಬಾರದ ಅಳಿಲುಗಳೆಲ್ಲಿ? ಹುಲಿ ಆನೆಗಳ ಬಗ್ಗೆ ದಿನ ನಿತ್ಯ ಚರ್ಚೆ ನಡೆಯುತ್ತಿರುವಾಗ ಅಳಿಲುಗಳನ್ನು ಮರೆತು ಬಿಡುವುದು ಎಷ್ಟು ಸರಿ.?
ಶಾಲೆಗೆ ಹೊರಡುವ ಸಮಯವದು.ನಮ್ಮನೆ ಪಕ್ಕದ ಮಾವಿನ ಮರದ ಗೆಲ್ಲಿನಲ್ಲಿ ಕುಕ್ಕುವ ಶಬ್ದ ಕೇಳಿ ಬರುತ್ತಿತ್ತು.ಯಾವ ಮರಕುಟಿಗನಿರಬಹುದೆಂಬ ಆಸಕ್ತಿಯಿಂದ ಅತ್ತ ತಿರುಗಿದೆ.ಏನಾಶ್ಚರ್ಯ.! ಹಲವಾರು ವರ್ಷಗಳ ನಂತರ ಅಳಿಲೊಂದು ನಮ್ಮನೆಗೆ ಭೇಟಿ ನೀಡಿತ್ತು.ತನ್ನ ಚೂಪು ಹಲ್ಲನ್ನು ಮತ್ತಷ್ಟು ಹರಿತಗೊಳಿಸುತ್ತಿತ್ತು.!!
ಅಮ್ಮನನ್ನು ಕರೆದೆ.
ಮಗ-ಮಗಳೂ ಓಡಿಬಂದರು.”ಈಗಾಗಲೇ ತಡವಾಯಿತು.ಹೊರಡೋಣ” ಎಂದ ಪತ್ನಿಯೂ ಅಳಿಲ ದರ್ಶನಕ್ಕೆ ಹಾತೊರೆದಳು.”ಇಲ್ಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಅಳಿಲು ಸಂಸಾರಗಳಿದ್ದವು.ಮರಗಿಡಗಳ ಸಂಖ್ಯೆ ಕಡಿಮೆಯಾದಂತೆ ಅವುಗಳ ಸಂಖ್ಯೆಯೂ ಇಳಿಮುಖವಾಯಿತು.ನಾನೇ ಇಲ್ಲಿ ಅಳಿಲು ನೋಡಿ ಹತ್ತಿಪ್ಪತ್ತು ವರ್ಷಗಳು ಕಳೆದವು.”ಎಂದು ಪುಲ್ಲಿಗೆ ಅಜ್ಜ ವಿವರಿಸಿದರು.ಆಗಲೂ ಅಳಿಲು ಹಲ್ಲನ್ನು ಹರಿತಗೊಳಿಸುತ್ತಾ,ತನ್ನ ದೊಡ್ಡ ಕಣ್ಣನ್ನು ನಮ್ಮತ್ತ ಹೊರಳಿಸುತ್ತಲೇ ಇತ್ತು.!
“ಅಳಿಲುಗಳು ಕಾಣಸಿಗುವುದೇ ಇಲ್ಲ.ಅಳಿಲುಗಳ ಸಂಖ್ಯೆ ದಿನಕಳೆದಂತೆ ಕಡಿಮೆಯಾಗುತ್ತಾ ಬರುತ್ತದೆ”.ಹೀಗೆ,ನಾವೆಲ್ಲರೂ ಒಂದಲ್ಲ ಒಂದು ಸಲ ನಮ್ಮ ಮಾತುಗಳೆಡೆಯಲ್ಲಿ ಹೇಳಿರುವುದಂತೂ ನಿಜ.ಆದರೆ,ಯಾಕೆ ಅಳಿಲುಗಳ ಸಂಖ್ಯೆ ಕಡಿಮೆಯಾಯಿತು.?ಅವುಗಳಿಗೆ ಏನು ಸಂಭವಿಸಿತು.? ಮುಂತಾದ ಅಳಿಲು ಪ್ರಪಂಚದ ಕಷ್ಟ-ನಷ್ಟದ ಸಂಗತಿಗಳನ್ನು ನಾವೆಷ್ಟು ಚರ್ಚಿಸಿದ್ದೇವೆ..?
ಇದು ಕೇವಲ ಭಾರತದ ಕತೆಯಲ್ಲ.ವಿಶ್ವದೆಲ್ಲೆಡೆ ಅಳಿಲುಗಳ ಸಂಖ್ಯೆ ವೇಗವಾಗಿ ಕುಸಿಯುತ್ತಿದೆ.ಅವುಗಳು ಜೀವಿಸಲು ಸಾಧ್ಯವಾಗುವ ಆವಾಸ ವ್ಯವಸ್ಥೆಯ ನಾಶವೇ ಅದಕ್ಕೆ ಪ್ರಧಾನ ಪಾತ್ರ ವಹಿಸುತ್ತದೆ.ದಟ್ಟಕಾಡುಗಳು,
ಎತ್ತರದ ಮರಗಳು ಹಾಗೂ ಆ ಮರದಲ್ಲಿನ ಪೊಟರೆಗಳು ಅಳಿಲುಗಳ ಪ್ರಧಾನ ವಾಸಸ್ಥಾನವಾಗಿದ್ದವು.ಆದರೆ ಅಭಿವೃದ್ಧಿಯ ಧಾವಂತದಲ್ಲಿ,ವಾಣಿಜ್ಯ ಕೃಷಿಯ ಲಾಭದ ಲೆಕ್ಕಾಚಾರದಲ್ಲಿ ನಾವಿಂದು ಹಸಿರನ್ನು ಕಳೆದುಕೊಳ್ಳುತ್ತಿರುವುದು ಅಳಿಲುಗಳಿಗೂ ಮಾರಕವಾಗಿ ಪರಿಣಮಿಸಿದೆ.ಮಾತ್ರವಲ್ಲದೆ
ಹಳ್ಳಿಗಳಲ್ಲಿ ಅಳಿಲುಗಳ ಬೇಟೆಯೂ ನಡೆಯುತ್ತಿತ್ತು.ಮಾಂಸಕ್ಕಾಗಿ ನಿರ್ದಾಕ್ಷಿಣ್ಯವಾಗಿ ಕೊಲ್ಲುವ ಪ್ರವೃತ್ತಿಯ ಬಗ್ಗೆಯೂ ಹಿರಿಯರು ಇದೀಗ ಬಾಯಿಬಿಡುತ್ತಿದ್ದಾರೆ.!ಪುಟ್ಟ ಹಾಗೂ ಮುದ್ದಾದ ಅಳಿಲ ಸಂಸಾರದ ಅವನತಿಗೆ ಇನ್ನೇನು ಬೇಕು ಹೇಳಿ..?
ಜೀವ ಸಂಪತ್ತಿನ ಸಂರಕ್ಷಣೆಯಲ್ಲಿ ಪ್ರಧಾನ ಕೊಂಡಿಯಾಗಿರುವ ಅಳಿಲನ್ನು ತೋಟಗಾರಿಕೆ ಇಲಾಖೆಗೆ ಪ್ರಾಣಿ ಶಾಸ್ತ್ರಜ್ಞರು ಸರಿದೂಗಿಸುತ್ತಾರೆ.ಚಳಿಗಾಲಕ್ಕೆಂದು ತನ್ನ ನೆಚ್ಚಿನ ಆಹಾರವಾದ ಧಾನ್ಯ ಅಥವಾ ಬೀಜಗಳನ್ನು ಮಣ್ಣಿನಡಿಯಲ್ಲಿ ಹೂತುಹಾಕಿ ದಾಸ್ತಾನು ಮಾಡಿಡುತ್ತವೆ.ಆದರೆ ಹೆಚ್ಚಿನ ಸಂದರ್ಭಗಳಲ್ಲಿ ತಾನು ದಾಸ್ತಾನು ಮಾಡಿಟ್ಟ ಸ್ಥಳವನ್ನು ಅಳಿಲು ಮರೆತುಬಿಡುತ್ತದೆ.ಮುಂದಿನ ಮಳೆಗಾಲದಲ್ಲಿ ಅವುಗಳೆಲ್ಲವೂ ಮೊಳಕೆಯೊಡೆದು ಹೊಸ ಸಸ್ಯಗಳಾಗಿ ಉತ್ಪತ್ತಿಯಾಗುತ್ತವೆ.!!
ಹೇಗಿದೆ ಸೃಷ್ಟಿಯ ವೈಚಿತ್ರ್ಯ.ಅಳಿಲಿನ ಪಾರಿಸರಿಕ ಅಳಿಲ ಸೇವೆಗೊಂದು ಸೆಲ್ಯೂಟ್ ಹೊಡೆಯಲೇ ಬೇಕಲ್ಲವೇ..?!
ನಾವೆಲ್ಲರೂ ಅಳಿಲ ಸೇವೆಯ ಕತೆಯನ್ನಂತೂ ಕೇಳಿದವರು.ಅಳಿಲುಗಳ ಬೆನ್ನಿನ ಮೇಲಿರುವ ಶ್ರೀರಾಮ ಎಳೆದ ಮೂರು ಗೆರೆಗಳ ಬಗ್ಗೆಯೂ ನಮಗೆ ಗೌರವವಿದೆ.ಈ ನಡುವೆ ಅಳಿಲುಗಳ ಆವಾಸ ವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ನಾವು ಕಡಿವಾಣ ಹಾಕುವುದೇ ಇಲ್ಲ.ಮನೆ ಪರಿಸರದ ಒಂದು ಮೂಲೆಯಲ್ಲಿ ಒಂದೆರಡು ದೊಡ್ಡ ಮರಗಳಿದ್ದರಂತೂ ಹೇಳುವುದೇ ಬೇಡ.ಅದ್ಯಾರದೋ ಮಾತಿನ ಮೋಡಿಗೆ ಮರುಳಾಗಿ ಆ ಹಿರಿಯ ಜೀವಗಳನ್ನು ಕಡಿದುರುಳಿಸುತ್ತೇವೆ.ಯಾರಿಗೂ ತೊಂದರೆ ನೀಡದ ಹಕ್ಕಿ,ಕ್ರಿಮಿ,ಕೀಟಗಳಿಗೆ ಎಲ್ಲವನ್ನೂ ನೀಡುವ ಕಳೆಗಿಡಗಳಿಗೂ ನಾವು ಕ್ಲೀನಿಂಗಿನ ನೆಪ ಹೇಳಿ ಮುಕ್ತಿ ನೀಡುತ್ತೇವೆ.ಹೀಗೆ,ಜೈವ ವೈವಿದ್ಯದ ನಾಶಕ್ಕೆ ನಾವೆಲ್ಲರೂ ಕಾರಣರಾಗುತ್ತಿದ್ದೇವೆ..!
ಆದ್ದರಿಂದಲೇ ಏನೋ ದಶಕಗಳ ಹಿಂದಿನ ಬಾಯಿಪಾಠದ ಪದ್ಯ ಈಗಲೂ ಅಸ್ಥಿತ್ವದಲ್ಲಿದೆ.ಡಿ.ಜೆ ಸೇರಿಸಿಕೊಂಡು ಹಾಡಲಂತೂ ಬಹಳ ರಸವತ್ತಾಗಿದೆ.ಆದರೆ ವಾಸ್ತವ ಮಾತ್ರ…!?
ಅಳಿಲೆ ಅಳಿಲೆ ಚುಂ ಚುಂ ಅಳಿಲೆ
ಮರದಿಂದಿಳಿದು ಬಾ ಬಾ ನಳಿದು.
ಚುಂ..ಚುಂ…ಅಳಿಲೆ…
- * ಪ್ರಪಂಚದಲ್ಲಿ 280 ವಿಧದ ಅಳಿಲುಗಳಿವೆ.ಭಾರತದಲ್ಲಿ 40 ಬಗೆಯವುಗಳಿವೆ.
- * ಮೂರು ಗೆರೆಯ ಅಳಿಲುಗಳು ಭಾರತದೆಲ್ಲೆಡೆ ಕಂಡುಬರುತ್ತವೆ.ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಲಬಾರ್ ಜೈಂಟ್ ಸ್ಕ್ವಿರೆಲ್ ಭಾರತದ ಅತೀ ದೊಡ್ಡ ಅಳಿಲಾಗಿದೆ.
- *ಅಳಿಲಿನ ಮರಿಗಳು ಹುಟ್ಟುವಾಗ ಕುರುಡಾಗಿರುತ್ತವೆ.
- *ಹಾರುವ ಅಳಿಲುಗಳೆಂದರೆ ಹಕ್ಕಿಗಳಂತೆ ಹಾರಲಾರವು.ಆದರೆ ಗೆಲ್ಲಿನಿಂದ ಗೆಲ್ಲಿಗೆ ಜಿಗಿಯಲು ಅವುಗಳಿಗೆ ಸಾಧ್ಯವಿದೆ.
- *ಗಂಟೆಗೆ 20 ಮೈಲಿನಷ್ಟು ವೇಗವಾಗಿ ಓಡುವ ಸಾಮರ್ಥ್ಯ ಅಳಿಲುಗಳಿಗಿದೆ.
- * ಅಳಿಲುಗಳಿಗೆ ಮಿಮಿಕ್ರಿ ಮಾಡಲು ಚೆನ್ನಾಗಿ ಗೊತ್ತಿದೆ.
- * ಆವಾಸ ವ್ಯವಸ್ಥೆ ಹಾಗೂ ಅಳಿಲುಗಳ ಪ್ರಬೇಧಗಳಿಗುಣವಾಗಿ 15ರಿಂದ 20ವರ್ಷಗಳ ಕಾಲ ಅಳಿಲುಗಳು ಜೀವಿಸುತ್ತವೆ.
- *ಜನನದಿಂದ ಮರಣದ ವರೆಗೆ ಅಳಿಲುಗಳ ಮುಂಭಾಗದ ಹಲ್ಲು ಬೆಳೆಯುತ್ತಾ ಇರುತ್ತದೆ.
- *ಬೀಜ,ಬೇರು ಹಾಗೂ ಚಿಗುರು ಅಳಿಲುಗಳ ಪ್ರೀತಿಯ ಆಹಾರವಾದರೂ ಅವುಗಳು ಕೆಲವೊಮ್ಮೆ ಕ್ರಿಮಿಕೀಟಗಳನ್ನು,ಸಣ್ಣ ಹಕ್ಕಿ ಮತ್ತು ಹಾವುಗಳನ್ನು ತಿನ್ನುತ್ತವೆ.
- *ಮನೆಯಲ್ಲಿನ ಬೆಕ್ಕು ಮತ್ತು ನಾಯಿಯನ್ನು ಕಂಡರೆ ಅಳಿಲುಗಳು ಹೆದರುತ್ತವೆ.ಆದ್ದರಿಂದಲೇ ಸಾಕು ಪ್ರಾಣಿಗಳಿರುವಲ್ಲಿ ಅಳಿಲುಗಳ ಸಂಚಾರ ನಿರಂತರವಾಗಿ ಕಡಿಮೆಯಾಗುತ್ತದೆ ಎಂಬುದನ್ನು ಅಧ್ಯಯನಗಳಿಂದ ದೃಢಪಡಿಸಿಕೊಳ್ಳಲಾಗಿದೆ.